ಶುಕ್ರವಾರ, ಡಿಸೆಂಬರ್ 4, 2020
22 °C
ಬಾಲ್ಯದ ಆಸಕ್ತಿ ಇಂದು ಹವ್ಯಾಸ; ಅಂತರ್‌ ಶಾಲಾ, ಕಾಲೇಜು ಮಟ್ಟದಲ್ಲಿ ಹತ್ತಾರು ಪ್ರಶಸ್ತಿ

ಗುರುವಿಲ್ಲದೆ ಅರಳಿದ ಕಲಾ ಪ್ರತಿಭೆ

ಕೃಷ್ಣಮೂರ್ತಿ Updated:

ಅಕ್ಷರ ಗಾತ್ರ : | |

Prajavani

ಕೆಜಿಎಫ್: ಸಣ್ಣ ವಯಸ್ಸಿನಲ್ಲಿ ಚಿತ್ರ ಬಿಡಿಸುವಾಗ ಮೂಡಿದ ಆಸಕ್ತಿಯನ್ನು ಹವ್ಯಾಸವಾಗಿಸಿಕೊಂಡ ಪ್ರಥಮ ಪದವಿ ವಿದ್ಯಾರ್ಥಿ ಬಿ.ಯೋಗೇಶ್, ಅದರಲ್ಲಿ ಸಾಧನೆ ಹಲವು ಪ್ರಶಸ್ತಿಗಳನ್ನು ಗಳಿಸಿದ್ದಾರೆ.

ನಗರದ ಗಣೇಶಪುರಂನ ಭಾಸ್ಕರ್ ಮತ್ತು ಜಯಲಕ್ಷ್ಮೀ ಅವರ ಪುತ್ರ ಯೋಗೇಶ್ ಸಣ್ಣ ವಯಸ್ಸಿನಲ್ಲಿಯೇ ಚಿತ್ರ ಕಲೆಯಲ್ಲಿ ಅಗಾಧ ಪ್ರತಿಭೆಯನ್ನು ಅಭಿವ್ಯಕ್ತಿಗೊಳಿಸಿದ್ದಾರೆ. ಮನಸ್ಸಿನ ಕಲ್ಪನೆಯಲ್ಲಿ ಮೂಡಿದ ಭಾವನೆಯನ್ನು ಚಿತ್ರಕಲೆಯಾಗಿ ಅರಳಿಸುವ ಸಿದ್ಧಿಯನ್ನು ಪಡೆದಿದ್ದಾರೆ.

ಕೈಗೆ ಸಿಕ್ಕ ಬಣ್ಣದ ಪೆನ್ಸಿಲ್‌ಗಳಿಂದ ಚಿತ್ರ ಬಿಡಿಸುವುದನ್ನು ಕಲಿತುಕೊಂಡ ಯೋಗೇಶ್‌ಗೆ ಇದುವರೆವಿಗೂ ಯಾವುದೇ ಚಿತ್ರ ಕಲೆಯ ಗುರುಗಳು ಸಿಕ್ಕಿಲ್ಲ. ತಾನು ನೋಡಿದ, ಕಲ್ಪಿಸಿಕೊಂಡ ವಸ್ತುವನ್ನು ಡ್ರಾಯಿಂಗ್ ಹಾಳೆಯಲ್ಲಿ ಮೂಡಿಸುತ್ತಿದ್ದಾರೆ.
ರಾಬರ್ಟ್‌ಸನ್‌ ಪೇಟೆಯ ಜೈನ್ ಕಾಲೇಜಿನಲ್ಲಿ ಪ್ರಥಮ ಬಿ.ಕಾಂ ವಿದ್ಯಾಭ್ಯಾಸ ಮಾಡುತ್ತಿರುವ ಈ ಪ್ರತಿಭೆ ಶಾಲಾ ಹಂತದಿಂದಲೂ ಎಲ್ಲಾ ಸ್ಪರ್ಧೆಗಳಲ್ಲಿಯೂ ಪ್ರಥಮ ಸ್ಥಾನಕ್ಕೆ ಪೈಪೋಟಿ ನೀಡುತ್ತ ಬಂದಿದ್ದವರು.

ನರಸಾಪುರದಲ್ಲಿ ನಡೆದ ಅಂತರ
ಕಾಲೇಜು ಚಿತ್ರಕಲಾ ಸ್ಪರ್ಧೆಯಲ್ಲಿ ರಚಿಸಿದ ತಾಜ್‌ಮಹಲ್ ಚಿತ್ರ ಪ್ರಥಮ ಸ್ಥಾನ ಗಳಿಸಿತು. ಹೈಸ್ಕೂಲ್ ಹಂತದಲ್ಲಿ ನಡೆದ ಪ್ರತಿಭಾ ಕಾರಂಜಿಯಲ್ಲಿಯೂ ಕೂಡ ಬಹುಮಾನ ಸಿಕ್ಕಿತ್ತು. ಕಾಲೇಜಿನ ಸೈನ್ಸ್ ಕ್ಲಬ್ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಕೂಡ ಪ್ರಥಮ ಬಹುಮಾನ. ನಗರಸಭೆ ಪರಿಸರ ಉಳಿಸಿ ಸಂಬಂಧವಾಗಿ ಏರ್ಪಡಿಸಿದ್ದ ಮುಕ್ತ ಚಿತ್ರ ಕಲಾ ಸ್ಪರ್ಧೆಯಲ್ಲಿ ಕೂಡ ಪ್ರಥಮ. ಹಾಳೆಗಳಲ್ಲಿ ಚಿತ್ರ ಬಿಡಿಸುವ ಜೊತೆಗೆ ಫೇಸ್ ಪೇಯಿಂಟಿಂಗ್ ಮತ್ತು ಉಗುರಿನ ಮೇಲೆ ಚಿತ್ರ ಬರೆಯುವ ಕಲೆಯನ್ನು ಕೂಡ ಕರಗತ ಮಾಡಿಕೊಂಡಿದ್ದಾರೆ.

‘ಪ್ರಕೃತಿ ಬಗ್ಗೆ ಚಿತ್ರ ಬರೆಯುವಲ್ಲಿ ಅತಿಯಾದ ಆಸಕ್ತಿ. ಪ್ರಕೃತಿ ಚಿತ್ರ ಬರೆಯುವಾಗ ಹೆಚ್ಚು ತರೇವಾರಿ ಬಣ್ಣಗಳನ್ನು ಬಳಸಲು ಅವಕಾಶ ಸಿಗುತ್ತದೆ’ ಎಂಬುದು ಯೋಗೇಶ್ ಅನಿಸಿಕೆ.

ವಿದ್ಯಾಭ್ಯಾಸದ ಜೊತೆಗೆ ಬಿಡುವಿನ ವೇಳೆಯಲ್ಲಿ ಚಿತ್ರ ಕಲೆಯಲ್ಲಿ ಮಗ್ನನಾಗುವ ಈ ಅರಳುವ ಪ್ರತಿಭೆಗೆ ತಂದೆ ತಾಯಿ ಪ್ರೋತ್ಸಾಹ ಅಗತ್ಯಕ್ಕಿಂತ ಹೆಚ್ಚಿಗೆ ಸಿಕ್ಕಿದೆ. ಅದೇ ರೀತಿ ತಾನು ಓದಿದ್ದ ಶಾಲೆಗಳಲ್ಲಿ ಕೂಡ ತನಗೆ ಹೆಚ್ಚು ಅವಕಾಶಗಳನ್ನು ನೀಡುತ್ತಿದ್ದುದನ್ನು ಕೂಡ ಅವರು ನೆನಪಿಸಿಕೊಳ್ಳುತ್ತಾರೆ.

ಅಕ್ರಲಿಕ್ ಚಿತ್ರಕಲೆಯನ್ನು ರೂಢಿ ಮಾಡಿಕೊಳ್ಳುತ್ತಿರುವ ಯೋಗೇಶ್ ಇದುವರೆವಿಗೂ ನೂರಾರು ಚಿತ್ರಗಳನ್ನು ಬಿಡಿಸಿದ್ದಾರೆ. ಬಿಡುವಿನ ವೇಳೆಯಲ್ಲಿ ಹವ್ಯಾಸಕ್ಕಾಗಿ ಚಿತ್ರ ಬಿಡಿಸುತ್ತಿದ್ದೇನೆ. ಅದರಲ್ಲಿ ಪರಿಪೂರ್ಣತೆ ಸಾಧಿಸಬೇಕು ಎಂಬ ಆಸೆ ಕೂಡ ಇದೆ ಎಂದು ಯೋಗೇಶ್‌ ಹೇಳುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.