ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಲಪ್ಪರಿಗೆ ಗೌರವಾರ್ಪಣೆ ಕಾರ್ಯಕ್ರಮ

ಜೀವನ ಚರಿತ್ರೆ ರೂಪಿಸಲು ಸಮಿತಿ ರಚನೆ: ರೂಪುರೇಷೆ ಬಗ್ಗೆ ವಿಸ್ತೃತ ಚರ್ಚೆ
Last Updated 21 ಜುಲೈ 2021, 12:15 IST
ಅಕ್ಷರ ಗಾತ್ರ

ಕೋಲಾರ: ಕೇಂದ್ರದ ಮಾಜಿ ಸಚಿವ ಆರ್‌.ಎಲ್‌.ಜಾಲಪ್ಪ ಅವರಿಗೆ ಅವಿಭಜಿತ ಕೋಲಾರ ಜಿಲ್ಲೆಯಿಂದ ಸೆಪ್ಟೆಂಬರ್‌ 2ನೇ ವಾರದಲ್ಲಿ ಗೌರವ ಸಮರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲು ಇಲ್ಲಿ ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ಪಾಲ್ಗೊಂಡ ಜಾಲಪ್ಪ ಅವರ ಅಭಿಮಾನಿಗಳು ಹಾಗೂ ಅವಳಿ ಜಿಲ್ಲೆಯ ಜನಪ್ರತಿನಿಧಿಗಳು ಗೌರವ ಸಮರ್ಪಣೆ ಕಾರ್ಯಕ್ರಮದ ರೂಪುರೇಷೆ ಬಗ್ಗೆ ವಿಸ್ತೃತ ಚರ್ಚೆ ನಡೆಸಿದರು. ಅಲ್ಲದೇ, ಕಾರ್ಯಕ್ರಮಕ್ಕೂ ಮುನ್ನ ಜಾಲಪ್ಪ ಅವರ ಜೀವನ ಚರಿತ್ರೆಯ ಪುಸ್ತಕ ರೂಪಿಸಲು ಸಮಿತಿ ರಚಿಸಲಾಯಿತು.

‘ಜಾಲಪ್ಪ ಅವರ ಸಮಯಪ್ರಜ್ಞೆ ಎಲ್ಲರಿಗೂ ಆದರ್ಶ. ಅವರು ಕಂದಾಯ ಸಚಿವರಾಗಿದ್ದಾಗ 17ಎ ನಿಯಮ ಬದಲಿಸಿ ರೈತರ ಭೂಮಿಯನ್ನು ಕಾರ್ಪೊರೇಟ್ ಕಂಪನಿಗಳು ಕಬಳಿಸಲು ಅವಕಾಶವಿಲ್ಲದಂತೆ ಮಾಡಿದ್ದನ್ನು ಮರೆಯಲಾಗದು’ ಎಂದು ಗೌರಿಬಿದನೂರು ಶಾಸಕ ಎನ್.ಎಚ್‌.ಶಿವಶಂಕರರೆಡ್ಡಿ ಸ್ಮರಿಸಿದರು.

‘ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗೆ ಜಾಲಪ್ಪರ ಕೊಡುಗೆ ಅಪಾರ. ಅವರು ಆರಂಭಿಸಿದ ಜಾಲಪ್ಪ ಆಸ್ಪತ್ರೆ ಲಕ್ಷಾಂತರ ರೋಗಿಗಳ ಜೀವ ಉಳಿಸಿದೆ. ಅವರಿಗೆ ಗೌರವಾರ್ಪಣೆ ಮಾಡುವ ಮೂಲಕ ಅವರ ಕಾರ್ಯ ಸ್ಮರಿಸುವ ಕೆಲಸ ಮಾಡೋಣ. ಗೌರಿಬಿದನೂರಿನಲ್ಲಿ 8 ಎಕರೆ ಸರ್ಕಾರಿ ಜಮೀನು ಇದ್ದು, ಅಲ್ಲಿ ಸಹಕಾರ ಭವನ ನಿರ್ಮಾಣಕ್ಕೆ ಕ್ರಮ ವಹಿಸುತ್ತೇವೆ’ ಎಂದು ಭರವಸೆ ನೀಡಿದರು.

ಅನನ್ಯ ಕೊಡುಗೆ: ‘ಎಪಿಎಂಸಿಯಲ್ಲಿ ರೈತರಿಗೆ ವಂಚನೆ ತಪ್ಪಿಸಲು ಜಾಲಪ್ಪ ಅವರು ಮಾಡಿದ ಕಾರ್ಯ ಮರೆಯಲಾಗದು. ಅವರು ಸಹಕಾರ ರಂಗಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ. ಎಂ.ವಿ.ಕೃಷ್ಣಪ್ಪ, ಸಿ.ಬೈರೇಗೌಡ, ವೆಂಕಟಗಿರಿಯಪ್ಪ, ರಾಚಯ್ಯ, ಪಟ್ಟಾಭಿರಾಮನ್ ಅವರನ್ನು ಪ್ರತಿ ವರ್ಷ ಸ್ಮರಿಸುವ ಮೂಲಕ ಅವರ ಆದರ್ಶ ಪಾಲಿಸಬೇಕು’ ಎಂದು ವಿಧಾನ ಪರಿಷತ್‌ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಅಭಿಪ್ರಾಯಪಟ್ಟರು.

‘ಜಾಲಪ್ಪರ ಹೆಸರಲ್ಲಿ ಸಹಕಾರ ಭವನ ನಿರ್ಮಿಸಿ, ಅಲ್ಲಿ ತರಬೇತಿಗೂ ಅವಕಾಶ ಕಲ್ಪಿಸಬೇಕು. ಜಾಲಪ್ಪರನ್ನು ಗೌರವಿಸುವ ಕಾರ್ಯಕ್ರಮ ಪಕ್ಷಾತೀತವಾಗಿ ನಡೆಯಬೇಕು. ಜಿಲ್ಲೆಯಲ್ಲೂ ಪಕ್ಷಾತೀತ ರಾಜಕಾರಣವಿದೆ’ ಎಂದರು.

‘ಸರ್ಕಾರ ಬದಲಾದ ಕಾರಣ ಎಂ.ವಿ.ಕೃಷ್ಣಪ್ಪರ ಹೆಸರಲ್ಲಿ ಗೋಲ್ಡನ್ ಡೇರಿ ಸ್ಥಾಪಿಸಲು ಸಾಧ್ಯವಾಗಲಿಲ್ಲ. ಮುಂದಿನ ಅಧಿವೇಶನದಲ್ಲಿ ಎಲ್ಲಾ ಶಾಸಕರ ಸಹಕಾರ ಪಡೆದು ಗೋಲ್ಡನ್ ಡೇರಿ ಸ್ಥಾಪನೆಗೆ ಸರ್ಕಾರದ ಮೇಲೆ ಒತ್ತಡ ತರುತ್ತೇವೆ. ಜಾಲಪ್ಪರ ಅಭಿನಂದನಾ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡುತ್ತೇವೆ’ ಎಂದು ಮಾಲೂರು ಶಾಸಕ ಕೆ.ವೈ.ನಂಜೇಗೌಡ ತಿಳಿಸಿದರು.

ರಸ್ತೆಗೆ ಹೆಸರು: ‘ಜಿಲ್ಲಾ ಕೇಂದ್ರದ ಪ್ರಮುಖ ರಸ್ತೆಯೊಂದಕ್ಕೆ ಜಾಲಪ್ಪರ ಹೆಸರಿಡಬೇಕು. ಕೋಲಾರ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಕೆ.ಸಿ.ರೆಡ್ಡಿ ಅವರ ಪ್ರತಿಮೆ ನಿರ್ಮಿಸಲಾಗುತ್ತದೆ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಹೇಳಿದರು.

‘ಕೋವಿಡ್ ಸಂದರ್ಭದಲ್ಲಿ ಜಾಲಪ್ಪ ಆಸ್ಪತ್ರೆ ಇಲ್ಲದಿದ್ದರೆ ಜಿಲ್ಲೆಯಲ್ಲಿ ಆಗುತ್ತಿದ್ದ ಸಾವು- ನೋವಿನ ಬಗ್ಗೆ ಯೋಚಿಸಿದರೆ ಭಯವಾಗುತ್ತದೆ. ಅವಳಿ ಜಿಲ್ಲೆಯ ಲಕ್ಷಾಂತರ ರೋಗಿಗಳಿಗೆ ಚಿಕಿತ್ಸೆ ನೀಡಿ ಹೃದಯವಂತಿಕೆ ಮೆರೆದಿರುವ ಜಾಲಪ್ಪ ಅವರಿಗೆ ಗೌರವಾರ್ಪಣೆ ಮಾಡುವ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡೋಣ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಸಲಹೆ ನೀಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ನಿಕಟಪೂರ್ವ ಅಧ್ಯಕ್ಷ ಜೆ.ಜಿ.ನಾಗರಾಜ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ನಾಗರಾಜ್, ನಿರ್ದೇಶಕರಾದ ಎಂ.ಎಲ್.ಅನಿಲ್‌ಕುಮಾರ್‌, ಸೋಮಣ್ಣ, ಹನುಮಂತರೆಡ್ಡಿ, ಮೋಹನ್‌ರೆಡ್ಡಿ, ಶಿವಾರೆಡ್ಡಿ, ವೆಂಕಟರೆಡ್ಡಿ, ಚೆನ್ನರಾಯಪ್ಪ, ಗೋವಿಂದರಾಜ್, ನಾಗಿರೆಡ್ಡಿ, ಸಾಹಿತಿ ಪುರುಷೋತ್ತಮರಾವ್, ಜಿಲ್ಲಾ ಸಹಕಾರಿ ಒಕ್ಕೂಟದ ಉಪಾಧ್ಯಕ್ಷ ಗೋವರ್ಧನರೆಡ್ಡಿ, ನಿರ್ದೇಶಕರಾದ ರಮೇಶ್, ನಾಗರಾಜ್, ಗೋಪಾಲಪ್ಪ, ವೆಂಕಟೇಶ್, ಬೈರೇಗೌಡ, ಶಂಕರನಾರಾಯಣಗೌಡ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT