ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಗೆ ಬೆಳೆ ನಷ್ಟ ಪರಿಹಾರ ನೀಡಲು ಕ್ರಮ

ತೋಟಗಾರಿಕೆ ಇಲಾಖೆ ನಿರ್ದೇಶಕ ವೆಂಕಟೇಶ್‌ರಿಂದ ಬೆಳೆ ನಷ್ಟ ವೀಕ್ಷಣೆ
Last Updated 27 ಏಪ್ರಿಲ್ 2019, 13:44 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲಾದ್ಯಂತ ಇತ್ತೀಚಿಗೆ ಬಿದ್ದ ಸಹಿತ ಪೂರ್ವ ಮುಂಗಾರು ಮಳೆಯಿಂದಾಗಿ ₹ 8.60 ಕೋಟಿ ತೋಟಗಾರಿಕೆ ಬೆಳೆಗಳು ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದೆ’ ಎಂದು ರಾಜ್ಯ ತೋಟಗಾರಿಕಾ ಇಲಾಖೆ ನಿರ್ದೇಶಕ ವೆಂಕಟೇಶ್ ತಿಳಿಸಿದರು.

ಮಳೆಯಿಂದಾಗಿ ತೋಟಗಾರಿಕಾ ಬೆಳೆಗಳ ನಷ್ಟದ ಕುರಿತು ವೀಕ್ಷಿಸಲು ಆಗಮಿಸಿದ್ದ ಸಂದರ್ಭದಲ್ಲಿ ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಬೆಳೆ ನಷ್ಟವಾಗಿರುವ ಬಗ್ಗೆ ಈಗಾಗಲೇ ಸಮೀಕ್ಷೆ ನಡೆಸಿದ್ದು 2,095 ಎಕರೆ ಪ್ರದೇಶದಲ್ಲಿ ಮಾವು ಸೇರಿದಂತೆ ಇತರೆ ಬೆಳಗಳು ನಷ್ಟವಾಗಿದೆ’ ಎಂದರು.

‘ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಅತಿ ಹೆಚ್ಚು ಮಾವು ಬೆಳೆ ನಷ್ಟವಾಗಿದ್ದು, ರಾಷ್ಟ್ರೀಯ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ಪ್ರತಿ ಎಕರೆ ಮಾವು ಬೆಳೆ ನಷ್ಟಕ್ಕೆ ₹ 18 ಸಾವಿರ ನೀಡಲು ಅವಕಾಶವಿದೆ. ಮರಗಳು ನಾಶವಾಗಿದ್ದರೆ ನರೇಗಾ ಯೋಜನೆಯಡಿ ಮರ ಬೆಳೆಸಲು ಪ್ರೋತ್ಸಾಹದನ ನೀಡಲಾಗುವುದು’ ಎಂದು ಹೇಳಿದರು.

‘ಅದೇ ರೀತಿ ಮಾವು ಹೊರತುಪಡಿಸಿ ಕ್ಯಾಪ್ಸಿಕಾಂ, ಟೊಮೆಟೊ, ಕಲ್ಲಂಗಡಿ ಬೆಳೆಗಳು 100 ಹೆಕ್ಟೇರ್ ಪ್ರದೇಶದಲ್ಲಿ ನಾಶವಾಗಿದೆ. ಮಾವು ಹೊರತುಪಡಿಸಿ ಇತರೆ ತೋಟಗಾರಿಕಾ ಬೆಳೆಗಳಿಗೆ ರಾಷ್ಟ್ರೀಯ ಪ್ರಕೃತಿ ವಿಕೋಪ ನಿಧಿಯ ಎಕರೆಗೆ ₹ 13 ಸಾವಿರ ನೀಡಲಾಗುವುದು’ ಎಂದು ತಿಳಿಸಿದರು.

‘ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ತೀವ್ರ ಬರಗಾಲ ಎದುರಾಗಿದ್ದು, ಒಣ ಸೇಸಾಯ ಪದ್ದತಿಯ ಬಗ್ಗೆ ರೈತರಿಗೆ ಅರಿವು ಮೂಡಿಸುವುದರ ಜತೆಗೆ ಬೆಳೆ ಬೆಳೆಯಲು ಉತ್ತೇಜನ ನೀಡಲಾಗುವುದು. ಗೋಡಂಬಿ, ಸೀಬೆ ಹಣ್ಣು ಬೆಳೆಯಲು ಅವಕಾಶವಿದ್ದು, ಉದ್ಯೋಗ ಖಾತ್ರಿ ಯೋಜನೆಯಡಿ ರೈತರ ಖರ್ಚಿನೊಂದಿಗೆ ಸಮೀಕರಣಗೊಳಿಸಿ ಅನುಕೂಲ ಕಲ್ಪಿಸಲಾಗುವುದು’ ಎಂದರು.

‘ಮಾವು ರಪ್ತು ಮಾಡಲು ಅವಕಾಶ ಕಲ್ಪಿಸಲು ಇಲಾಖೆ ಸಿದ್ದತೆ ನಡೆಸಿದೆ. ಪ್ರತಿ ಜಿಲ್ಲೆಗೊಬ್ಬರನ್ನು ನೋಡೆಲ್ ಅಧಿಕಾರಿಯನ್ನಾಗಿ ನೇಮಿಸಲಿದ್ದು, ಇವರು ಅಪೆಡಾ ಸಂಸ್ಥೆ ಪ್ರತಿನಿದಿಯಾಗಿ ಕೆಲಸ ಮಾಡುತ್ತಾರೆ’ ಎಂದು ಹೇಳಿದರು.

‘ಹಿಂದಿನ ವರ್ಷಕ್ಕಿಂತ ಈಭಾರಿ ಹೆಚ್ಚಾಗಿ ಬೇಡಿಕೆಯಿದೆ. ಮಾವನ್ನು ಕಾಲಕ್ಕೆ ಮೊದಲೇ ಕಿತ್ತು ಕಾರ್ಬೈಡ್ ಬಳಸಿ ಹಣ್ಣಾಗಿಸುವುದರಿಂದ ವಿದೇಶ ಗುಣಮಟ್ಟ ಕಳೆದುಕೊಳ್ಳುತ್ತಿದೆ. ಈ ಕುರಿತು ರೈತರಲ್ಲಿ ಜಾಗೃತಿ ಮೂಡಿಸಲಾಗುವುದು. ಕಾರ್ಬೈಡ್ ಬಳಕೆ ನಿಯಂತ್ರಿಸಲು ಕ್ರಮಕೈಗೊಳ್ಳಲಾಗುವುದು’ ಎಂದರು.

‘ಧಾರವಾಡ, ಹಾವೇರಿ, ಉತ್ತರಕನ್ನಡ ಜಿಲ್ಲೆಗಳಲ್ಲಿ ಮಾವು ಇಳುವರಿ ಶೇ.50 ರಿಂದ 60 ರಷ್ಟು ಕಡಿಮೆಯಾಗಿದೆ. ಜಿಲ್ಲೆಯ ಮಾವಿಗೆ ಹೆಚ್ಚಿನ ಬೇಡಿಕೆ ಸಿಗಲಿದೆ. ರಪ್ತು ಉತ್ತೇಜಿಸಲು ಈಗಾಗಲೇ ರಾಮನಗರಲ್ಲಿ ಮಾವು ಬೆಳೆಗಾರರ ಕಾರ್ಯಾಗಾರ ನಡೆಸಿದ್ದು, ಕೋಲಾರ ಜಿಲ್ಲೆಯಲ್ಲೂ ನಡೆಸಲಾಗುವುದು’ ಎಂದು ಮಾಹಿತಿ ನೀಡಿದರು.

‘ರಾಜ್ಯದಲ್ಲಿ 93 ರೈತ ಉತ್ಪಾದಕ ಸಂಘಗಳ ಪ್ರತಿನಿಧಿಗಳಿಗೆ ಮಾರುಕಟ್ಟೆ, ರಪ್ತು ಮಾಡುವ ಕುರಿತು ತರಬೇತಿ ನೀಡಲಾಗುವುದು. ಮಾವು ಬೆಳೆ ಬರುವ ತಿಂಗಳುಗಳಲ್ಲಿ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಮಾವು ಮೇಳ ನಡೆಸಲಾಗುತ್ತಿದೆ. ಈ ಬಾರಿ ಮಾವು ಮೇಳವನ್ನು ಕೋಲಾರ ಜಿಲ್ಲೆಯಲ್ಲೂ ನಡೆಸಲಾಗುವುದು’ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಜೆ.ಮಂಜುನಾಥ್, ಜಿಲ್ಲೆಯಲ್ಲಿ ಆಗಿರುವ ಬೆಳೆ ನಷ್ಟದ ಕುರಿತು ಸಮೀಕ್ಷೆ ನಡೆಸಲಾಗಿದ್ದು, ಪರಿಹಾರ ನೀಡಲು ಹಣದ ಕೊರತೆಯಿಲ್ಲ. ಸರ್ಕಾರಕ್ಕೆ ವರದಿ ಕಳುಹಿಸಿ ಅನುಮತಿ ಸಿಕ್ಕೊಡನೇ ರೈತರಿಗೆ ಪರಿಹಾರ ವಿತರಿಸಲಾಗುವುದು’ ಎಂದರು.

ತೋಟಗಾರಿಕಾ ಇಲಾಖೆ ವಿಭಾಗೀಯ ಜಂಟಿ ನಿರ್ದೇಶಕ ವಿಶ್ವನಾಥ್, ಉಪನಿರ್ದೇಶಕ ಕೃಷ್ಣಮೂರ್ತಿ, ಸಹಾಯಕ ನಿರ್ದೇಶಕ ಶಿವಾರೆಡ್ಡಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT