ಶುಕ್ರವಾರ, ಮಾರ್ಚ್ 31, 2023
31 °C
ಒಂದೇ ಮರದಲ್ಲಿ ಮೂರು ಹಂತದ ಫಸಲು: ಬೆಳೆಗಾರರು ಕಂಗಾಲು

ಮಾವು ಕೊಯ್ಲು ಮಾಡಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀನಿವಾಸಪುರ: ಮಾವು ಬೆಳೆಗಾರರು ಬೆಲೆ ಕುಸಿತದಿಂದ ಹತಾಶರಾಗಿ ಒಂದೇ ಬಾರಿಗೆ ಕಾಯಿ ಕೊಯ್ಲು ಮಾಡಬಾರದು. ಲಾಕ್‌ಡೌನ್‌ ಮುಗಿದಿದ್ದು ಬೆಲೆ ಬರುವ ಸಾಧ್ಯತೆ ಇರುವುದರಿಂದ ದುಡುಕಬಾರದು ಎಂದು ಜಿಲ್ಲಾ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ ಸಲಹೆ ಮಾಡಿದರು.

ಹೊರವಲಯದ ಮಾವಿನ ತೋಟವೊಂದರಲ್ಲಿ ಮಾವು ಬೆಳೆಗಾರರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಈ ಬಾರಿ ವಾತಾವರಣ ವೈಪರೀತ್ಯದಿಂದಾಗಿ ಒಂದೇ ಮರದಲ್ಲಿ ಮೂರು ಹಂತದ ಫಸಲಿದೆ. ಬೆಳೆಗಾರರು ಹಂತ ಹಂತವಾಗಿ ಕಾಯಿ ಕಟಾವು ಮಾಡಬೇಕಾದ ಅಗತ್ಯವಿದೆ. ಮೊದಲ ಹಂತದಲ್ಲಿ ಬಲಿತ ಕಾಯಿಗಳನ್ನು ಮಾತ್ರ ಕಟಾವು ಮಾಡಿ ಮಾರುಕಟ್ಟೆಗೆ ತರಬೇಕಾಗಿದೆ. ಆದರೆ, ರೈತರು ಬೇರೆ ಬೇರೆ ಕಾರಣಗಳಿಂದ ಮರದಲ್ಲಿನ ಒಟ್ಟಾರೆ ಕಾಯಿಯನ್ನು ಒಂದೇ ಸಲ ಕೊಯ್ಲು ಮಾಡಿ ಮಂಡಿಗೆ ಹಾಕುತ್ತಿದ್ದಾರೆ. ಇದು ಸಮಸ್ಯೆಗೆ ಕಾರಣ ಎಂದು ಹೇಳಿದರು.

ಕೊಯ್ಲು ಮಾಡಲಾದ ಎಳೆಕಾಯಿ ಸಮಯಕ್ಕೆ ಸರಿಯಾಗಿ ಹಣ್ಣಾಗದೆ ಕೊಳೆಯುತ್ತಿದೆ. ಇದರ ಪರಿಣಾಮ  ಸ್ಥಳೀಯ ಜ್ಯೂಸ್ ಕಾರ್ಖಾನೆ ನಿರೀಕ್ಷಿತ ಪ್ರಮಾಣದಲ್ಲಿ ಮಾವು ಖರೀದಿಸುತ್ತಿಲ್ಲ. ಹೊರಗಿನ ಕಾರ್ಖಾನೆಗಳು ಜ್ಯೂಸ್ ತಯಾರಿಕೆಯಲ್ಲಿ ಹೆಚ್ಚಾಗಿ ಬಳಸುವ ತೋತಾಪುರಿ ಮಾವನ್ನು ಖರೀದಿಸಲು ಹಿಂಜರಿಯುತ್ತಿವೆ. ಇದರ ಪರಿಣಾಮವಾಗಿ ತೋತಾಪುರಿ ಮಾವಿಗೆ ಬೆಲೆ ಕುಸಿತ ಉಂಟಾಗಿದೆ ಎಂದು ಹೇಳಿದರು.

ಬೆಳೆಗಾರರು ವೈಜ್ಞಾನಿಕ ವಿಧಾನ ಅನುಸರಿಸಿ ಕಾಯಿ ಕೊಯ್ಲು ಮಾಡಬೇಕು. ಕೃಷಿ ಕಾರ್ಮಿಕರ ಕೊರತೆ ಹೆಸರಲ್ಲಿ ಅವೈಜ್ಞಾನಿಕವಾಗಿ ಕೊಯ್ಲು ಮಾಡಿ ಮಂಡಿಗೆ ಹಾಕುವುದರಿಂದ ನಿರೀಕ್ಷಿತ ಬೆಲೆ ಸಿಗುವುದಿಲ್ಲ. ತಮ್ಮ ವೈಫಲ್ಯ ಮರೆತು ವ್ಯಾಪಾರಿಗಳ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ. ಮಾವು ಬೆಳೆಗಾರರು ಹಾಗೂ ವ್ಯಾಪಾರಿಗಳು ಮಾರುಕಟ್ಟೆಗೆ ಎರಡು ಕಣ್ಣಿದ್ದಂತೆ ಎಂಬುದನ್ನು ಅರಿಯಬೇಕು ಎಂದು ಅಭಿಪ್ರಾಯಪಟ್ಟರು.

ಮಾವು ಬೆಳೆಗಾರ ನಾರಾಯಣರೆಡ್ಡಿ ಮಾತನಾಡಿ, ಇಲ್ಲಿನ ಮಾರುಕಟ್ಟೆಯಲ್ಲಿ ಕತ್ತೆಗೂ ಒಂದೇ ಬೆಲೆ, ಕುದುರೆಗೂ ಒಂದೇ ಬೆಲೆ. ಬಲಿತ ಕಾಯಿ ಕಿತ್ತು ತಂದ ರೈತರನ್ನು ಪ್ರತ್ಯೇಕವಾಗಿ ನೋಡುವುದಿಲ್ಲ. ಮಂಡಿಗೆ ಬಂದ ಎಲ್ಲ ಕಾಯಿಯನ್ನೂ ಒಂದೇ ರೀತಿಯಲ್ಲಿ ಪರಿಗಣಿಸಲಾಗುತ್ತಿದೆ. ಹಾಗಾಗಿ ರೈತರು ತಮಗೆ ಇಷ್ಟ ಬಂದಂತೆ ಕಾಯಿ ಕೊಯ್ಲು ಮಾಡಿ ತರುತ್ತಾರೆ. ಈ ಪರಿಸ್ಥಿತಿ ಬದಲಾಗಬೇಕು ಎಂದು
ತಿಳಿಸಿದರು.

ಕಾಯಿಯ ಗುಣಮಟ್ಟದ ಮೌಲ್ಯಮಾಪನ ಸರಿಯಾಗಿ ನಡೆಯಬೇಕು. ಗುಣಮಟ್ಟದ ಕಾಯಿಗೆ ಉತ್ತಮ ಬೆಲೆ ಸಿಗುವುದಾದರೆ ಮಾತ್ರ ವೈಜ್ಞಾನಿಕ ಕೊಯ್ಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.