ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೃಷಿ ಜೊತೆಗೆ ಹೈನೋದ್ಯಮಕ್ಕೂ ಆದ್ಯತೆ; ರೈತನ ಕೈಹಿಡಿದ ಏಲಕ್ಕಿ ಬಾಳೆ

ಜಮೀನಿನಲ್ಲಿ ಹುಲ್ಲು, ಭತ್ತ ಬೆಳೆದ ರೈತ
ಮಂಜುನಾಥ ಎಸ್
Published : 25 ಸೆಪ್ಟೆಂಬರ್ 2024, 7:12 IST
Last Updated : 25 ಸೆಪ್ಟೆಂಬರ್ 2024, 7:12 IST
ಫಾಲೋ ಮಾಡಿ
Comments

ಬಂಗಾರಪೇಟೆ: ಕೆಲವೊಮ್ಮೆ ಅತಿವೃತ್ತಿ ಮತ್ತೆ ಕೆಲವೊಮ್ಮೆ ಅನಾವೃಷ್ಟಿಯಿಂದ ಬೆಳೆಗೆ ಹಾನಿ, ಉತ್ತಮ ಮಳೆಯಾಗಿ ಒಳ್ಳೆಯ ಫಸಲು ಬಂದರೆ ರೈತರು ಬೆಳೆ ಬೆಳೆಗೆ ಮಾರುಕಟ್ಟೆಯಲ್ಲಿ ಬೆಲೆಯೇ ಇಲ್ಲದಿರುವುದು ಸೇರಿದಂತೆ ರೈತರು ನಾನಾ ಸಮಸ್ಯೆಗಳನ್ನು ಎದುರಿಸುತ್ತಲೇ ಇರುತ್ತಾರೆ.

ತಾಲ್ಲೂಕಿನ ಬತ್ತಲಹಳ್ಳಿ ಗ್ರಾಮದ ಪ್ರಗತಿಪರ ರೈತ ಸುಬ್ರಮಣಿ ಅವರು ತಮ್ಮ ಬಳಿಯಿರುವ ನಾಲ್ಕು ಎಕರೆ ಜಮೀನಿನಲ್ಲಿ ಏಲಕ್ಕಿ ಬಾಳೆ ಬೆಳೆಯುವ ಮೂಲಕ ಭರಪೂರ ಲಾಭ ಗಳಿಸುತ್ತಿದ್ದಾರೆ. ನಾಲ್ಕು ಎಕರೆ ಜಮೀನಿನಲ್ಲಿ ಎರಡು ಎಕರೆಯಲ್ಲಿ ಏಲಕ್ಕಿಬಾಳೆ ಬೆಳೆದಿದ್ದಾರೆ. ಒಂದು ಎಕರೆಯಲ್ಲಿ ಹುಲ್ಲು ಮತ್ತೊಂದು ಎಕರೆಯಲ್ಲಿ ಭತ್ತ ನಾಟಿ ಮಾಡಿದ್ದಾರೆ.

ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸುಬ್ರಮಣಿ ಅವರು, ಅಲ್ಲಿನ ಕಡಿಮೆ ವೇತನ ಮತ್ತು ಅಧಿಕ ಕೆಲಸದ ಒತ್ತಡದಿಂದಾಗಿ ಕೆಲಸಕ್ಕೆ ರಾಜೀನಾಮೆ ನೀಡಿ, ಕೃಷಿಯತ್ತ ಮುಖ ಮಾಡಿದರು. ಕೃಷಿ ಕ್ಷೇತ್ರದಲ್ಲಿ ವಿನೂತನ ಪ್ರಯೋಗಗಳನ್ನು ಮಾಡುತ್ತಾ ಇದೀಗ ಅಧಿಕ ಲಾಭ ಗಳಿಸುತ್ತಿದ್ದು, ಇತರ ರೈತರಿಗೂ ಮಾದರಿಯಾಗಿದ್ದಾರೆ.

ದೇವರಾಜ ಅರಸು ಅಭಿವೃದ್ಧಿ ನಿಗಮದಿಂದ ಗಂಗಾ ಕಲ್ಯಾಣ ಯೋಜನೆ ಅಡಿ ಕೊಳವೆ ಬಾವಿ ಹಾಕಿಸಿಕೊಂಡು ಅದಕ್ಕೆ ಪಂಪ್‌ಸೆಟ್‌ ಅಳವಡಿಸಿ ಹೊಲಕ್ಕೆ ನೀರಿನ ವ್ಯವಸ್ಥೆಯನ್ನೂ ಮಾಡಿಕೊಂಡಿದ್ದಾರೆ.

ರೈತ ಸುಬ್ರಮಣಿ ಹೊಲದಲ್ಲಿ ಕಟಾವು ಮಾಡಿರುವ ಬಾಳೆ ಗೊನೆ
ರೈತ ಸುಬ್ರಮಣಿ ಹೊಲದಲ್ಲಿ ಕಟಾವು ಮಾಡಿರುವ ಬಾಳೆ ಗೊನೆ

ಈ ಕುರಿತು ಪ್ರತಿಕ್ರಿಯಿಸಿದ ಅವರು, ‘ಕಳೆದ ವರ್ಷ ಬಾಳೆ ನಾಟಿ ಮಾಡಿದ್ದೆ. ಎರಡು ಎಕರೆಯಲ್ಲಿ 2 ಸಾವಿರ ಸಸಿಗಳನ್ನು ನಾಟಿ ಮಾಡಿದ್ದೇನೆ. ಏಲಕ್ಕಿ ಬಾಳೆಹಣ್ಣಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇರುವ ಕಾರಣ, ಪ್ರತಿ ಕೆ.ಜಿ ಹಣ್ಣು ₹50ನಂತೆ ಮಾರಾಟವಾಗಿದೆ. ಇದರಿಂದ ಎರಡು ಎಕರೆ ಜಮೀನಿನಿಂದ ಒಂದೇ ವರ್ಷದಲ್ಲಿ ₹10.25 ಲಾಭ ಬಂದಿದೆ’ ಎಂದು ಹೇಳುತ್ತಾರೆ.

‘ಕೃಷಿಯ ಜೊತೆಗೆ ಹೈನೋದ್ಯಮ ಮಾಡುತ್ತಿದ್ದು, ಮನೆಯಲ್ಲಿರುವ ನಾಲ್ಕು ಹಸುಗಳಿಂದ ದಿನಕ್ಕೆ 40 ಲೀಟರ್ ಹಾಲು ಕರೆದು, ಮಾಸಿಕ ₹36 ಸಾವಿರ ಆದಾಯ ಗಳಿಸುತ್ತಿದ್ದೇನೆ’ ಎಂದು ತಿಳಿಸಿದರು.

ಸುಬ್ರಮಣಿ ಬೆಳೆದ ಬಾಳೆಹಣ್ಣು ಉತ್ತಮ ಗುಣಮಟ್ಟದಿಂದ ಕೂಡಿದ್ದು, ಹೆಚ್ಚಿನ ಬೇಡಿಕೆ ಇದೆ. ಇದರಿಂದಾಗಿ ರಾಜ್ಯದಲ್ಲಷ್ಟೇ ಅಲ್ಲದೆ ಆಂಧ್ರಪ್ರದೇಶ ಸೇರಿದಂತೆ ಇತರ ರಾಜ್ಯಗಳಲ್ಲೂ ಮಾರಾಟ ಮಾಡಲಾಗಿದೆ ಎಂದು ಮತ್ತೊಬ್ಬ ರೈತ ನಾಗಪ್ಪ ಎಂಬುವರು ತಿಳಿಸಿದರು. 

ಯುವಕರು ಕೆಲಸ ಹುಡುಕಿಕೊಂಡು ದೊಡ್ಡ ಪಟ್ಟಣಕ್ಕೆ ತೆರಳುವುದು ಸಾಮಾನ್ಯ. ಆದರೆ ಸುಬ್ರಮಣಿ ಕಡಿಮೆ ಭೂಮಿಯಲ್ಲಿ ಕೈ ತುಂಬಾ ಆದಾಯ ಪಡೆಯಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
–ಕೃಷ್ಣೇಗೌಡ, ಗ್ರಾಮದ ಹಿರಿಯ
ರೈತರು ಶ್ರದ್ಧೆಯಿಂದ ಭೂಮಿ ತಾಯಿಯ ಮಡಿಲಲ್ಲಿ ಕಾಯಕ ಮಾಡಿದರೆ ಉತ್ತಮ ಆದಾಯ ಕಾಣಲು ಸಾಧ್ಯ. ರೈತರು ಹೆಚ್ಚೆಚ್ಚು ತೋಟಗಾರಿಕೆ ಬೆಳೆ ಬೆಳೆಯಲು ಮುಂದಾಗಬೇಕು.
–ಸುಬ್ರಮಣಿ, ಯುವ ರೈತ 
ರೈತರು ಸಮಗ್ರ ತೋಟಗಾರಿಕೆ ಬೆಳೆ ಕೈಗೊಂಡರೆ ಲಾಭ. ವರ್ಷವಿಡೀ ಕೆಲಸ ಜತೆಗೆ ಫಸಲು ಬರುತ್ತದೆ. ಸಮಗ್ರ ಕೃಷಿಯಿಂದ ಒಂದು ಬೆಳೆ ಕೈಕೊಟ್ಟರೂ ಇನ್ನೊಂದು ಕೈ ಹಿಡಿಯಲಿದೆ.
–ಶಿವಾರೆಡ್ಡಿ, ಹಿರಿಯ ಸಹಾಯಕ ನಿರ್ದೇಶಕ ತೋಟಗಾರಿಕ ಇಲಾಖೆ
ಹುಲ್ಲಿನ ಬೆಳೆ
ಹುಲ್ಲಿನ ಬೆಳೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT