ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀನಿವಾಸಪುರ: ಅಕಾಲಿಕ ಹೂ ತೆಗೆದ ಮಾವು ಬೆಳೆಗಾರ

Last Updated 23 ಸೆಪ್ಟೆಂಬರ್ 2021, 22:35 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ತಾಲ್ಲೂಕಿನ ನೀಲಟೂರು ಗ್ರಾಮದ ಮಾವು ಬೆಳೆಗಾರರೊಬ್ಬರು ವೈಜ್ಞಾನಿಕ ವಿಧಾನ ಬಳಸಿ ಅಕಾಲದಲ್ಲಿ ಮಾವಿನ ಹೂ ತೆಗೆಯುವುದರ ಮೂಲಕ ಗಮನ ಸೆಳೆದಿದ್ದಾರೆ.

ಪ್ರಗತಿಪರ ರೈತ ಚಂದ್ರಶೇಖರ್ ಕಳೆದ ಏಪ್ರಿಲ್‌ನಲ್ಲಿ ಮಾವಿನ ಮರಗಳ ಬುಡದ ಸುತ್ತಲೂ ‘ಕಲ್ಟಾರ್’ ಎಂಬ ಔಷಧಿ ಸುರಿಯುವ ಮೂಲಕ ಅಕಾಲದಲ್ಲಿ ಮಾವಿನ ಫಸಲು ಪಡೆಯುವ ಪ್ರಯತ್ನ ಮಾಡಿದ್ದರು. ಈಗ ಅವರ ಪ್ರಯತ್ನ ಸಫಲವಾಗಿದೆ. ಮರಗಳು ಹೂವನ್ನು ಮುಡಿಗೇರಿಸಿಕೊಂಡು ಕಂಗೊಳಿಸುತ್ತಿವೆ.

ಕೃಷಿ ಹಾಗೂ ತೋಟಗಾರಿಕಾ ಕ್ಷೇತ್ರದಲ್ಲಿ ಪ್ರಯೋಗಶೀಲರಾದ ಚಂದ್ರಶೇಖರ್, ಪ್ರತಿವರ್ಷ ಮಾವಿನ ಕಾಯಿ ಬೆಲೆ ಕುಸಿತದಿಂದ ಬೇಸತ್ತು ಆನ್‌ಲೈನ್ ಮೂಲಕ ಮಾವು ವಹಿವಾಟು ಮಾಡಿ ಲಾಭ ಮಾಡಿಕೊಂಡಿದ್ದರು. ಅಕಾಲದಲ್ಲಿ ಮಾವು ಬೆಳೆದು ಉತ್ತಮ ಬೆಲೆ ಪಡೆಯುವ ಬಗ್ಗೆ ಚಿಂತನೆ ನಡೆಸಿದರು. ಅದಕ್ಕೆ ಪೂರಕವಾಗಿ ಮಾವು ತಜ್ಞರನ್ನು ಭೇಟಿ ಮಾಡಿ ಚರ್ಚಿಸಿದರು. ತಜ್ಞರ ಸಲಹೆಯಂತೆ ‘ಕಲ್ಟಾರ್’ ಔಷಧಿ ಬಳಸಿದರು.

ನಿರೀಕ್ಷೆಯಂತೆ ‘ಕಲ್ಟಾರ್’ ಭೂಮಿಗೆ ಸೇರಿಸಿದ 90 ದಿನಗಳಲ್ಲಿ ಮರಗಳಲ್ಲಿ ಹೂ ಬಂದಿತ್ತು. ಆದರೆ, ಆ ಸಮಯದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಹೂ ಉದುರಿ ನೆಲಕಚ್ಚಿತು. ಆದರೆ, ಕಲ್ಟಾರ್ ಪ್ರಭಾವದಿಂದಾಗಿ ಮತ್ತೆ ಹೂ ಬಂದಿದೆ. ಹೂ ಆರೋಗ್ಯವಾಗಿದೆ. ಶಿಲೀಂಧ್ರನಾಶಕ ಸಿಂಪಡಣೆ ಮಾಡಿದರೆ ಸಾಕು ಕಾಯಿ ಕಟ್ಟುತ್ತದೆ ಎಂದು ಅವರು ‘ಪ್ರಜಾವಾಣಿ’ಗೆತಿಳಿಸಿದರು.

ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಪ್ರಯೋಗಾತ್ಮಕವಾಗಿ ಎರಡೂವರೆ ಎಕರೆ ವಿಸ್ತೀರ್ಣದಲ್ಲಿ ಬೆಳೆಯಲಾಗಿರುವ ಮಾವಿನ ಮರಗಳಿಗೆ ‘ಕಲ್ಟಾರ್’ ಬಳಸಿ ಹೂ ತರಿಸಿದ್ದಾರೆ. ಡಿಸೆಂಬರ್‌ನಲ್ಲಿ ಫಸಲು ಬರುವ ನಿರೀಕ್ಷೆಯಿದೆ. ಅಂದರೆ ಅದು ಸ್ವಲ್ಪ ಹೆಚ್ಚು ಕಡಿಮೆ ಸಕಾಲಿಕ ಹೂ ಬರುವ ಕಾಲ. ಸಾಮಾನ್ಯವಾಗಿ ಡಿಸೆಂಬರ್ ಕೊನೆ ಅಥವಾ ಜನವರಿಯಲ್ಲಿ ಮಾವಿನ ಹೂಬರುತ್ತದೆ.

‘ಹೂ ಬರುವ ಕಾಲದಲ್ಲಿ ಕಾಯಿ ಕೊಯ್ಲಿಗೆ ಬರುತ್ತದೆ. ಹಾಗಾಗಿ ಮಾವಿನ ಹಣ್ಣಿಗೆ ಒಳ್ಳೆಯ ಬೆಲೆ ಸಿಗುತ್ತದೆ. ತೋತಾಪುರಿ ಜಾತಿಯ ಮಾವು ಕೆ.ಜಿಯೊಂದಕ್ಕೆ ₹ 70 ರಿಂದ ₹ 100 ರವರೆಗೆ ಮಾರಾಟವಾಗುವ ನಿರೀಕ್ಷೆ ಇದೆ. ಕಳೆದ ವರ್ಷ ತಮಿಳುನಾಡಿನಲ್ಲಿ ಅಕಾಲದಲ್ಲಿ ಬೆಳೆದ ತೋತಾಪುರಿ ಮಾವು ಕೆ.ಜಿಯೊಂದಕ್ಕೆ ₹ 140 ಹಾಗೂ ಬಾದಾಮಿ ಮಾವು ₹ 280ರಂತೆ ಮಾರಾಟವಾಗಿತ್ತು’ ಎಂದು ಚಂದ್ರಶೇಖರ್ ಮಾಹಿತಿ ನೀಡಿದರು.

‘ವೈಜ್ಞಾನಿಕ ವಿಧಾನ ಬಳಸಿ ವರ್ಷಕ್ಕೆ ಎರಡು ಮಾವಿನ ಫಸಲು ಪಡೆದುಕೊಳ್ಳಬಹುದು. ಆದರೆ, ಮರಗಳ ಹಿತದೃಷ್ಟಿಯಿಂದ ವರ್ಷ ಬಿಟ್ಟು ವರ್ಷ ಅಕಾಲಿಕ ಫಸಲು ಬೆಳೆಯುವುದು ಕ್ಷೇಮಕರ. ಅಕಾಲಿಕ ಮಾವು ಮಾರಾಟಕ್ಕೆ ಮಾರುಕಟ್ಟೆ ಸಮಸ್ಯೆ ಉಂಟಾಗುವುದಿಲ್ಲ. ಮಾವಿನ ಕಾಯಿ ಅಪರೂಪವಾಗಿರುವ ಸಂದರ್ಭದಲ್ಲಿ ಮಾವು ಪ್ರಿಯರು ಖರೀದಿಗೆ ಮುಗಿಬೀಳುತ್ತಾರೆ. ಆನ್‌ಲೈನ್ ವ್ಯವಹಾರದಿಂದ ಹೆಚ್ಚು ಲಾಭಗಳಿಸಬಹುದಾಗಿದೆ’ ಎಂದರು.

‘ಬೇರೆ ಬೇರೆ ಕಾರಣಗಳಿಂದ ಪ್ರತಿವರ್ಷ ಮಾವಿನ ಬೆಲೆ ಕುಸಿತಕ್ಕೆ ಒಳಗಾಗುತ್ತಿದೆ. ಮಾವು ಬೆಳೆಗಾರರು ನಷ್ಟ ಅನುಭವಿಸುತ್ತಿದ್ದಾರೆ. ವೈಜ್ಞಾನಿಕ ವಿಧಾನ ಅನುಸರಿಸಿ, ಅಕಾಲದಲ್ಲಿ ಫಸಲು ತೆಗೆದರೆ ಕಷ್ಟಕ್ಕೆ ತಕ್ಕ ಪ್ರತಿಫಲ ಸಿಗುವ ನಿರೀಕ್ಷೆ ಇದೆ. ಚಂದ್ರಶೇಖರ್ ಅವರ ತೋಟದಲ್ಲಿ ಅಕಾಲದಲ್ಲಿ ಬಂದಿರುವ ಹೂ ಇತರ ಮಾವು ಬೆಳೆಗಾರರ ಕಣ್ಣು ಕುಕ್ಕುತ್ತಿದೆ. ಅವರು ಮಾಡಿರುವ ಪ್ರಥಮ ಪ್ರಯತ್ನ ಇತರ ರೈತರಿಗೆ ಪ್ರೇರಣೆ ಆಗುವುದರಲ್ಲಿ ಎರಡು ಮಾತಿಲ್ಲ’ ಎನ್ನುತ್ತಾರೆ ಮಾವು ಕೃಷಿಕ ಎನ್. ಶ್ರೀರಾಮರೆಡ್ಡಿ.

ಬಳಕೆಗೆ ವಿವೇಚನೆ ಅಗತ್ಯ: ‘ಕಲ್ಟಾರ್‌ ಅನ್ನು ವಿವೇಚನೆಯಿಂದ ಬಳಸಬೇಕು. ಅಕಾಲದಲ್ಲಿ ಫಲ ಪಡೆದು ಲಾಭಗಳಿಸುವ ಉದ್ದೇಶದಿಂದ ಅತಿಯಾಗಿ ಬಳಸಿದರೆ ಮರಗಳು ಸಹಜವಾಗಿ ಹೂ ಬಿಡುವ ಶಕ್ತಿ ಕಳೆದುಕೊಳ್ಳುವ ಅಪಾಯವಿದೆ. ಆಯಸ್ಸು ಕಡಿಮೆ ಆಗಬಹುದು. ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಈ ಔಷಧ ಬಳಸಬೇಕು. 5 ರಿಂದ 6 ವರ್ಷಗಳಿಗೊಮ್ಮೆ ಈ ಔಷಧ ಬಳಸಿದರೆ ಒಳ್ಳೆಯದು. ಇಂತಹ ಹಣ್ಣು ಸೇವನೆಯಿಂದ ದೇಹದ ಮೇಲೆ ಯಾವುದೇ ದುಷ್ಪರಿಣಾಮ ಉಂಟಾಗುವುದಿಲ್ಲ’ ಎಂದುಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕಶ್ರೀನಿವಾಸ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT