ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಅಧಿಕಾರಿಗಳು ರೈತ ಸ್ನೇಹಿಯಾಗಿ:" ಕೃಷಿ ಸಚಿವ ಪಾಟೀಲ ಕಿವಿಮಾತು

Last Updated 12 ಜೂನ್ 2021, 14:11 IST
ಅಕ್ಷರ ಗಾತ್ರ

ಕೋಲಾರ: ‘ಪೂರ್ವ ಮುಂಗಾರು ಆರಂಭವಾಗಿದ್ದು, ಜಿಲ್ಲೆಯಲ್ಲಿ ಈ ವರ್ಷ ವಾಡಿಕೆಗಿಂತ ಶೇ 35ರಷ್ಟು ಹೆಚ್ಚು ಮಳೆಯಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಮಳೆಯಾಗುವ ನಿರೀಕ್ಷೆಯಿದೆ’ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ತಿಳಿಸಿದರು.

ಮುಂಗಾರು ಹಂಗಾಮು ಸಿದ್ಧತೆ ಸಂಬಂಧ ಇಲ್ಲಿ ಶನಿವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಜಿಲ್ಲೆಯಲ್ಲಿ ರೈತರಿಗೆ ಯಾವುದೇ ಕಾರಣಕ್ಕೂ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳ ಕೊರತೆ ಆಗದಂತೆ ಕ್ರಮ ವಹಿಸಿ’ ಎಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

‘ಕೃಷಿ ಇಲಾಖೆ ಅಧಿಕಾರಿಗಳು ರೈತ ಸ್ನೇಹಿ ಆಗಿರಬೇಕು. ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಕೃಷಿ ವಿಶ್ವವಿದ್ಯಾಲಯದಿಂದ ಜಿಲ್ಲೆಗೆ ವಿಜ್ಞಾನಿಗಳನ್ನು ಕಳುಹಿಸಿ ಕೊಡುತ್ತೇವೆ. ಮಣ್ಣಿನ ಫಲವತ್ತತೆ, ನೀರಿನ ಸಮಸ್ಯೆ ಹಾಗೂ ಬೆಳೆಗಳಿಗೆ ರೋಗ ಬಂದರೆ ಆಯಾ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರು ಮತ್ತು ಪ್ರೊಫೆಸರ್‌ಗಳು ರೈತರ ಜಮೀನುಗಳಿಗೆ ಭೇಟಿ ಕೊಟ್ಟು ಸೂಕ್ತ ಮಾರ್ಗದರ್ಶನ ನೀಡಬೇಕು’ ಎಂದು ಹೇಳಿದರು.

‘ಸಣ್ಣ ರೈತರಿಗೆ ಟ್ರ್ಯಾಕ್ಟರ್ ಮತ್ತು ಕೃಷಿ ಯಂತ್ರೋಪಕರಣ ಖರೀದಿಸಲು ಸಾಧ್ಯವಾಗುವುದಿಲ್ಲ. ಈ ಕಾರಣಕ್ಕೆ ಸರ್ಕಾರ ಕೃಷಿ ಯಂತ್ರಧಾರೆ ಕೇಂದ್ರಗಳಿಗೆ ಶೇ 70ರಷ್ಟು ಸಬ್ಸಿಡಿ ನೀಡುತ್ತಿದೆ. ಕೃಷಿ ಯಂತ್ರಧಾರೆ ಕೇಂದ್ರಗಳು ರೈತರಿಗೆ ಅನುಕೂಲವಾಗುವಂತೆ ಕಾರ್ಯ ನಿರ್ವಹಿಸಬೇಕು. ದೇಶದಲ್ಲಿ ಕೃಷಿ ಮತ್ತು ಕಂದಾಯ ಇಲಾಖೆಗಳ ಆಧಾರ್‌ ಜೋಡಣೆಯಲ್ಲಿ ರಾಜ್ಯವು ಮೊದಲ ಸ್ಥಾನದಲ್ಲಿದೆ’ ಎಂದು ವಿವರಿಸಿದರು.

‘ರೈತರು ತಾವೇ ಬೆಳೆ ಸಮೀಕ್ಷೆ ಮಾಡಿ, ಅದನ್ನು ವೆಬ್‌ಸೈಟ್‌ ಮೂಲಕ ಸರ್ಕಾರಕ್ಕೆ ಮಾಹಿತಿ ನೀಡುವಂತಾಗಬೇಕು. ಈ ಮಾಹಿತಿಯು ರೈತರಿಗೆ ಆರ್‌ಟಿಸಿಯಲ್ಲಿ ದೊರೆಯುವಂತೆ ಸರ್ಕಾರ ಕ್ರಮ ಕೈಗೊಂಡಿದೆ. ಕೇಂದ್ರ ಸರ್ಕಾರದ ನ್ಯಾಷನಲ್ ಫುಡ್ ಸೆಕ್ಯೂರಿಟಿ ಮಿಷನ್ (ಎನ್‌ಎಫ್‌ಎಸ್‌ಎಂ) ಕನಸಿನ ಯೋಜನೆಯಾಗಿದೆ. ಈ ಯೋಜನೆಯಲ್ಲಿ ರೈತರು ಬಹು ಬೆಳೆಗಳನ್ನು ಬೆಳೆದು ಹೆಚ್ಚಿನ ಆದಾಯ ಗಳಿಸಬಹುದು. ಅಧಿಕಾರಿಗಳು ಈ ಯೋಜನೆ ಬಗ್ಗೆ ರೈತರಿಗೆ ಸಮರ್ಪಕ ಮಾಹಿತಿ ನೀಡಬೇಕು’ ಎಂದರು.

ಮಳೆ ಕೊರತೆಯಿಲ್ಲ: ‘ಜಿಲ್ಲೆಯಲ್ಲಿ ಮಳೆ ಕೊರತೆಯಾಗಿಲ್ಲ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಹೆಚ್ಚಿನ ಮಳೆಯಾಗುತ್ತಿದೆ. ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆಯಲ್ಲಿ ಯಾವುದೇ ತೊಂದರೆಯಿಲ್ಲ. ರೈತ ಸಂಪರ್ಕ ಕೇಂದ್ರಗಳಲ್ಲಿ ಕೋವಿಡ್ ಮಾರ್ಗಸೂಚಿ ಪಾಲನೆಯೊಂದಿಗೆ ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ವಿತರಿಸಲಾಗುತ್ತಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರೂಪಾದೇವಿ ಮಾಹಿತಿ ನೀಡಿದರು.

‘ಜಿಲ್ಲೆಯು ಪೂರ್ವ ಕೃಷಿ ಒಣ ವಲಯವಾಗಿದ್ದು, ವಾರ್ಷಿಕ ಸರಾಸರಿ 775 ಮಿ.ಮೀ ಮಳೆಯಾಗುತ್ತದೆ. ಜಿಲ್ಲೆಯು 3,74,966 ಹೆಕ್ಟೇರ್ ಭೌಗೋಳಿಕ ವಿಸ್ತೀರ್ಣ ಹೊಂದಿದ್ದು, ನಿವ್ವಳ ಬಿತ್ತನೆ ಪ್ರದೇಶ 2,09,566 ಹೆಕ್ಟೇರ್ ಆಗಿದೆ. ಕೃಷಿ ಬೆಳೆಗಳ ವಿಸ್ತೀರ್ಣ 97,900 ಹೆಕ್ಟೇರ್‌ ಇದೆ. ನಿವ್ವಳ ನೀರಾವರಿ ಪ್ರದೇಶ 51,702 ಹೆಕ್ಟೇರ್ ಆಗಿದೆ. ಒಟ್ಟಾರೆ 3,03,475 ಹಿಡುವಳಿದಾರರಿದ್ದಾರೆ’ ಎಂದು ವಿವರಿಸಿದರು.

ರಾಷ್ಟ್ರೀಯ ಆಹಾರ ಭದ್ರತಾ ಮಿಷನ್ ಯೋಜನೆಯಡಿ ರೈತರಿಗೆ ತೊಗರಿ ಬಿತ್ತನೆ ಬೀಜ ವಿತರಿಸಲಾಯಿತು. ಸಂಸದ ಎಸ್.ಮುನಿಸ್ವಾಮಿ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಮುಳಬಾಗಿಲು ಶಾಸಕ ಎಚ್.ನಾಗೇಶ್, ವಿಧಾನ ಪರಿಷತ್ ಸದಸ್ಯ ಗೋವಿಂದರಾಜು, ಜಿಲ್ಲಾಧಿಕಾರಿ ಆರ್.ಸೆಲ್ವಮಣಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎನ್.ಎಂ.ನಾಗರಾಜ್, ಉಪ ವಿಭಾಗಾಧಿಕಾರಿ ಸೋಮಶೇಖರ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT