ಮಂಗಳವಾರ, ಡಿಸೆಂಬರ್ 7, 2021
20 °C

ಕೋಲಾರ: ‘ಅಲ್ಲಮನ ಬಯಲಾಟ’ ನೆಲ ಸಂಸ್ಕೃತಿಯ ಪ್ರತೀಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ‘ಅಲ್ಲಮನ ಬಯಲಾಟ’ ಕೃತಿಯು ನೆಲದ ನಿಜ ಸಂಸ್ಕೃತಿ ಪ್ರತಿನಿಧಿಸುವ ನೆಲದ ಭಾಷೆಯ ನಾಟಕ. ಎಲ್ಲಾ ಸಾಂಸ್ಕೃತಿಕ ನೆಲೆಗಳನ್ನು ರಾಜಕಾರಣ ವ್ಯವಸ್ಥಿತವಾಗಿ ನಿರ್ನಾಮಗೊಳಿಸುತ್ತಿರುವ ಸಂದರ್ಭದಲ್ಲಿ ಇದು ನೆಲ ಸಂಸ್ಕೃತಿ ಕುರಿತು ಅರಿವು ಮೂಡಿಸುವ ಸಾಮರ್ಥ್ಯ ಹೊಂದಿರುವ ಗಟ್ಟಿ ಕೃತಿ’ ಎಂದು ರಂಗ ನಿರ್ದೇಶಕ ಉದಯ್‌ ಸೋಸಲೆ ಅಭಿಪ್ರಾಯಪಟ್ಟರು.

ಇಲ್ಲಿ ಇತ್ತೀಚೆಗೆ ನಡೆದ ಓದುಗ ಕೇಳುಗ–ನಮ್ಮ ನಡೆ ತಿಂಗಳ ಕಾರ್ಯಕ್ರಮದಲ್ಲಿ ಸಾಹಿತಿ ಲಕ್ಷ್ಮೀಪತಿ ಕೋಲಾರ ಅವರ ರಚನೆಯ ‘ಅಲ್ಲಮನ ಬಯಲಾಟ’ ಕೃತಿ ಬಗ್ಗೆ ಮಾತನಾಡಿ, ‘ಈ ನಾಟಕದಲ್ಲಿ ಪಡೆದುಕೊಳ್ಳುತ್ತಾ ಮತ್ತು ಕಳೆದುಕೊಳ್ಳುತ್ತಾ ಅರಿವು, ಜ್ಞಾನದೆಡೆಗೆ ಸಾಗುವ ಪ್ರಕ್ರಿಯೆಯಿದೆ. ಇಲ್ಲಿನ ಪಾತ್ರಗಳಲ್ಲಿ ಸೈದ್ಧಾಂತಿಕ ಒತ್ತಡ, ಮಾನಸಿಕ ಕಟ್ಟುಪಾಡುಗಳಿಂದ ಬಿಡಿಸಿಕೊಳ್ಳುವ ಲಕ್ಷಣವಿದೆ’ ಎಂದು ಬಣ್ಣಿಸಿದರು.

‘ಅಲ್ಲಮನ ಬಯಲಾಟ ಕೃತಿಯು ಮನುಷ್ಯನಲ್ಲಿ ಎಚ್ಚರ ಮೂಡಿಸುವ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತದೆ. ಹಲವು ಕಾರಣಕ್ಕೆ ಹೆಚ್ಚಿನ ಸಾಮಾಜಿಕ ಮನ್ನಣೆಗೆ ಪಾತ್ರವಾಗಿರುವ ತಲೆದಂಡ, ಸಂಕ್ರಾಂತಿ ನಾಟಕಗಳಿಗೆ ಹೋಲಿಸಿದರೆ ನಿಜ ಸಂಸ್ಕೃತಿಯ ಜಿಜ್ಞಾಸೆ, ಜ್ಞಾನವನ್ನು ಪ್ರತಿಪಾದಿಸುವ ಈ ನಾಟಕ ನೆಲಕ್ಕೆ ಒಗ್ಗುವ ಕೃತಿ. ವೈದಿಕ ಪರಂಪರೆ ಕಟ್ಟಿಕೊಡುವ ಕಾರ್ಯ-ಕಾರಣ ಸಂಬಂಧಗಳಿಂದ ಬಿಡಿಸಿಕೊಳ್ಳುವ ಚಿಂತನೆ ಇಲ್ಲಿನ ಮೂಲ ಆಶಯ’ ಎಂದರು.

‘ನಾನು ಅಲ್ಲಮನ ಬಯಲಾಟ ಕೃತಿ ರಚಿಸಲು ರಂಗಕರ್ಮಿ ಸಿಜಿಕೆ ಅವರೇ ಪ್ರೇರಣೆ. ಅಲ್ಲಮನ ಕುರಿತಾಗಿ ನಾಟಕ ರಚಿಸುವುದು ಸುಲಭದ ಕಾರ್ಯವಾಗಿರಲಿಲ್ಲ. ಇದಕ್ಕಾಗಿ ನಾನು ಸತತ 3 ವರ್ಷ ಶ್ರಮ ವಹಿಸಬೇಕಾಯಿತು. ಅಲ್ಲಮ ಎಲ್ಲಾ ತತ್ವ, ಸಿದ್ಧಾಂತ ಮೀರಿದ ವ್ಯಕ್ತಿ. ಯಾವ ಚೌಕಟ್ಟಿಗೂ ಸಿಗದ ವ್ಯಕ್ತಿತ್ವ ಅವರದು’ ಎಂದು ಸಾಹಿತಿ ಲಕ್ಷ್ಮೀಪತಿ ಕೋಲಾರ ಹೇಳಿದರು.

ಗಟ್ಟಿತನದ ಸಾಧ್ಯತೆ: ‘ಚಾಮರಸ, ಹರಿಹರಾದಿಯಾಗಿ ಅನೇಕರು ಅಲ್ಲಮನನ್ನು ಚೌಕಟ್ಟಿನಲ್ಲೇ ಇರಿಸಿ, ಗ್ರಹಿಸಿ ನೋಡಿದರು. ಆದರೆ, ಶಿವಗಣ ಪ್ರಸಾದಿ ಮಹಾದೇವಯ್ಯನ ಶೂನ್ಯ ಸಂಪಾದನೆಯಲ್ಲಿ ಮಾತ್ರ ಈ ಮಿತಿ ಮೀರಲಾಗಿದೆ. ಶೂನ್ಯ ಎಂದರೆ ಏನೂ ಇಲ್ಲದಿರುವುದಲ್ಲ, ಎಲ್ಲವನ್ನೂ ಒಳಗೊಂಡಿರುವ ಆಲೋಚನೆಯ ಗಟ್ಟಿತನದ ಸಾಧ್ಯತೆ’ ಎಂದು ವಿವರಿಸಿದರು.

‘ಮನಸ್ಸಿನಲ್ಲಿ ತುಂಬಿರುವ ಕಸ ಖಾಲಿ ಮಾಡಿಕೊಳ್ಳುವುದು. ಇದೇ ಶೂನ್ಯ ಇಲ್ಲವೆ ಬಯಲು. ಜಗತ್ತಿನ ಒಳಿತನ್ನು ಬಯಸುವ ಮನಸ್ಥಿತಿ. ಭಾಷೆ, ತರ್ಕ, ವ್ಯಾಖ್ಯಾನ ವಿರೋಧಿಸಿದ ಅಲ್ಲಮನ ನಿಶ್ಯಬ್ದವನ್ನು ಜನರೆದುರು ಪ್ರದರ್ಶಿಸಬೇಕಾದ ನಾಟಕದಲ್ಲಿ ಅಳವಡಿಸುವುದು ಸವಾಲಿನ ಪ್ರಶ್ನೆಯಾಗಿತ್ತು. ಈ ಸಾಧ್ಯತೆಯ ಪ್ರಯತ್ನದಿಂದ ಅನೇಕರಿಗೆ ಈ ಕೃತಿ ಸಾಹಿತ್ಯಕ ಪ್ರಾಕಾರವಾಗಿ ಇಷ್ಟವಾಗಿದೆ. ಆದರೆ, ಪ್ರಾಯೋಗಿಕವಾಗಿ ಅಲ್ಲ’ ಎಂದು ಅಭಿಪ್ರಾಯಪಟ್ಟರು.

ರಂಗಕರ್ಮಿ ನಾ.ವೆಂಕಿ, ಬರಹಗಾರ ಕೃಷ್ಣಮೂರ್ತಿ, ಶಿಕ್ಷಕಿ ರಾಧಾಮಣಿ ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.