ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್ ಭವನ: ಶೀಘ್ರ ಪೂರ್ಣಗೊಳಿಸಿ

ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ತಾ.ಪಂ ಅಧ್ಯಕ್ಷ ಆಂಜಿನಪ್ಪ ಸೂಚನೆ
Last Updated 9 ನವೆಂಬರ್ 2020, 15:42 IST
ಅಕ್ಷರ ಗಾತ್ರ

ಕೋಲಾರ: ‘ತಾಲ್ಲೂಕಿನಲ್ಲಿ ನಿರ್ಮಾಣ ಹಂತದಲ್ಲಿರುವ 80 ಅಂಬೇಡ್ಕರ್ ಭವನಗಳ ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸಬೇಕು’ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಆಂಜಿನಪ್ಪ ಸೂಚಿಸಿದರು.

ಇಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಯನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿದೆ. ಅಧಿಕಾರಿಗಳು ವಿಳಂಬ ಮಾಡದೆ ಸಾಧ್ಯವಾದಷ್ಟು ಬೇಗನೆ ಭವನಗಳನ್ನು ನಿರ್ಮಾಣ ಮಾಡಬೇಕು’ ಎಂದು ಹೇಳಿದರು.

‘ಪ್ರತಿ ಅಂಬೇಡ್ಕರ್‌ ಭವನಕ್ಕೆ ₹ 12 ಲಕ್ಷ ಅನುದಾನ ಬಂದಿದೆ. ಅನುದಾನ ಸಮರ್ಪಕವಾಗಿ ಬಳಸಬೇಕು ಮತ್ತು ಕಾಮಗಾರಿಯು ಗುಣಮಟ್ಟದಿಂದ ಕೊಡಿರಬೇಕು. 15ನೇ ಹಣಕಾಸು ಯೋಜನೆ ಅನುದಾನದಲ್ಲಿ ಶಿಥಿಲ ಸರ್ಕಾರಿ ಶಾಲಾ ಕಟ್ಟಡಗಳ ದುರಸ್ತಿ ಮಾಡಬೇಕು’ ಎಂದು ತಿಳಿಸಿದರು.

‘ಕೋವಿಡ್ ಹಿನ್ನೆಲೆಯಲ್ಲಿ ಕೆಲ ಇಲಾಖೆಗಳ ಡಿ ಗ್ರೂಪ್ ನೌಕರರಿಗೆ ವೇತನ ಬಂದಿಲ್ಲ. ಇದರಿಂದ ಅವರ ಜೀವನ ನಿರ್ವಹಣೆಗೆ ಕಷ್ಟವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ನೌಕರರಿಗೆ ಸಕಾಲಕ್ಕೆ ಸಂಬಳ ಸಿಗುವಂತೆ ಮಾಡಬೇಕು. ಬಾಕಿ ವೇತನ ಸಹ ಬಿಡುಗಡೆ ಮಾಡಿಸಬೇಕು’ ಎಂದು ಸೂಚನೆ ನೀಡಿದರು.

‘ಸರ್ಕಾರ ಆದೇಶಿಸಿದರೆ ಯಾವುದೇ ಕ್ಷಣದಲ್ಲಿ ಶಾಲೆಗಳನ್ನು ಆರಂಭಿಸಬೇಕಾಗುತ್ತದೆ. ಹೀಗಾಗಿ ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿಗಳು ಶಾಲೆಗಳ ಸಂಬಂಧಿಸಿದ ದುರಸ್ತಿ ಕೆಲಸಗಳನ್ನು ಪೂರ್ಣಗೊಳಿಸಬೇಕು. ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯಗಳ ದುರಸ್ತಿ, ಕಾಂಪೌಂಡ್ ಮತ್ತು ಇಂಗು ಗುಂಡಿ ನಿರ್ಮಾಣ ಸೇರಿದಂತೆ ಯಾವುದೇ ಕೆಲಸ ಬಾಕಿ ಉಳಿದಿರಬಾರದು’ ಎಂದು ಸಲಹೆ ನೀಡಿದರು.

ಓಡಾಟಕ್ಕೆ ಸಮಸ್ಯೆ: ‘ಮೈಸೂರು ಮಹಾರಾಜರು ಮುದುವಾಡಿ ಕೆರೆಯ ಕಟ್ಟೆ ಕಟ್ಟಿಸಿದ್ದರು. ಇದೀಗ ಕೆರೆಯ ಸುತ್ತ ಕಳೆ ಗಿಡಗಳು ಬೆಳೆದಿದ್ದು, ಜನರ ಓಡಾಟಕ್ಕೆ ಸಮಸ್ಯೆಯಾಗುತ್ತಿದೆ. ಕೆರೆ ಕಟ್ಟೆಯ ಮೇಲಿರುವ ನಿರುಪಯುಕ್ತ ಗಿಡಗಳನ್ನು ತೆರವು ಮಾಡಿಸಿ’ ಎಂದು ತಾ.ಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್‌ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

‘ಕೆ.ಸಿ ವ್ಯಾಲಿ ಯೋಜನೆ ನೀರಿನಿಂದ ಮುದುವಾಡಿ ಕೆರೆ ತುಂಬುತ್ತಿದೆ. ಸದ್ಯದಲ್ಲೇ ಊರ ಜಾತ್ರೆ ನಡೆಯುವುದರಿಂದ ಸಂಪ್ರದಾಯದಂತೆ ಕೆರೆ ಕಟ್ಟೆ ಮೇಲೆ ದೀಪವಿಟ್ಟು ಪೂಜೆ ಮಾಡಲಾಗುತ್ತದೆ. ಶೀಘ್ರವೇ ಕೆರೆ ಕಟ್ಟೆ ಸರಿಪಡಿಸದಿದ್ದರೆ ಗ್ರಾಮದ ಜನರ ಜತೆ ಪಿಡಬ್ಲ್ಯೂಡಿ ಇಲಾಖೆ ಎದುರು ಜಾತ್ರೆ ಮಾಡಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಬಿಇಒಗೆ ತರಾಟೆ: ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜಗೌಡ ಮಾತನಾಡಲು ಮುಂದಾದಾಗ ಆಕ್ಷೇಪ ವ್ಯಕ್ತಪಡಿಸಿದ ಮಂಜುನಾಥ್‌, ‘ನೀವು ಕೆಡಿಪಿ ಸಭೆ, ಸಾಮಾನ್ಯ ಸಭೆ ಸೇರಿದಂತೆ ಯಾವುದೇ ಸಭೆಗೆ ಬಂದಿಲ್ಲ. ಇದೀಗ ಕೊನೆಯ ಸಭೆಗೆ ಹಾಜರಾಗಿ ಮಾಹಿತಿ ನೀಡುವುದು ಸರಿಯಿಲ್ಲ’ ಎಂದು ತರಾಟೆಗೆ ತೆಗೆದುಕೊಂಡರು.

‘ತಾಲ್ಲೂಕಿನ ಸರ್ಕಾರಿ ಶಾಲೆಗಳಿಗೆ 314 ಹೆಚ್ಚುವರಿ ಶೌಚಾಲಯಗಳ ಅಗತ್ಯವಿದೆ. ಈಗಾಗಲೇ ಜಿಲ್ಲೆಯಲ್ಲಿ 1 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಿಗೆ ದಾಖಲಾಗಿದ್ದಾರೆ. ಕೋವಿಡ್‌ ಕಾರಣಕ್ಕೆ ಶಾಲೆಗಳು ಮುಚ್ಚಿದ್ದರೂ ಮಕ್ಕಳಿಗೆ ಸಮವಸ್ತ್ರದ ಬಟ್ಟೆ ಮತ್ತು ಪಠ್ಯಪುಸ್ತಕ ತಲುಪಿಸಲಾಗಿದೆ’ ಎಂದು ನಾಗರಾಜಗೌಡ ವಿವರಿಸಿದರು.

‘ಖಾಸಗಿ ಶಾಲೆಗಳನ್ನು ತೊರೆದು ಸರ್ಕಾರಿ ಶಾಲೆ ಸೇರ ಬಯಸುವ ವಿದ್ಯಾರ್ಥಿಗಳಿಗೆ ಟಿ.ಸಿ ಕೊಡುತ್ತಿಲ್ಲ ಎಂದು ದೂರು ಬಂದಿವೆ. ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಸರ್ಕಾರ ಹೊಸ ಆ್ಯಪ್‌ ಬಿಡುಗಡೆ ಮಾಡಿದೆ. ಖಾಸಗಿ ಶಾಲೆ ಬಿಟ್ಟು ಸರ್ಕಾರಿ ಶಾಲೆಗೆ ಸೇರ ಬಯಸುವ ವಿದ್ಯಾರ್ಥಿಗಳು ಟಿ.ಸಿಯನ್ನು ಈ ಆ್ಯಪ್‌ ಮೂಲಕ ಪಡೆಯಬಹುದು’ ಎಂದು ಮಾಹಿತಿ ನೀಡಿದರು.

ತಾ.ಪಂ ಸದಸ್ಯರು, ಕಾರ್ಯ ನಿರ್ವಹಣಾಧಿಕಾರಿ ಬಾಬು, ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT