ಬುಧವಾರ, ಮೇ 18, 2022
24 °C
ತಾರತಮ್ಯದ ವಿರುದ್ಧ ಹೋರಾಡಿದರು

ಅಂಬಿಗರ ಚೌಡಯ್ಯ ಕಾಂತ್ರಿಕಾರಿ ಶರಣ: ಜಿಲ್ಲಾಧಿಕಾರಿ ಯುಕೇಶ್‌ಕುಮಾರ್ ಹೇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ವಚನಕಾರ ಅಂಬಿಗರ ಚೌಡಯ್ಯರು ಜನ ಸಮೂಹದಲ್ಲಿನ ಮೂಢನಂಬಿಕೆ ತೊಡೆದು ಹಾಕುತ್ತಲೇ ವೈಚಾರಿಕತೆ ಮೂಡಿಸಿದರು’ ಎಂದು ಪ್ರಭಾರ ಜಿಲ್ಲಾಧಿಕಾರಿ ಯುಕೇಶ್‌ಕುಮಾರ್‌ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತವು ಇಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಂಬಿಗರ ಚೌಡಯ್ಯ ಜಯಂತಿಯಲ್ಲಿ ಮಾತನಾಡಿ, ‘ಚೌಡಯ್ಯರು ಸಮಾಜದಲ್ಲಿನ ತಾರತಮ್ಯದ ವಿರುದ್ಧ ಹೋರಾಡಿ ಹೊಸ ವ್ಯವಸ್ಥೆಯ ಸೈದ್ಧಾಂತಿಕ ನೆಲೆಗಟ್ಟು ಭದ್ರಗೊಳಿಸಲು ಅಪಾರ ಕೊಡುಗೆ ನೀಡಿದ್ದಾರೆ’ ಎಂದು ಸ್ಮರಿಸಿದರು.

‘ಬಸವಣ್ಣರ ಕಾಲಘಟ್ಟದ ನೇರ ನಡೆ ನುಡಿಯ ಅಂಬಿಗರ ಚೌಡಯ್ಯ ವೃತ್ತಿಯಿಂದ ಪ್ರವೃತ್ತಿಯಿಂದ ಅನುಭಾವಿ. ಬಸವಣ್ಣನವರ ಅನುಭವ ಮಂಟಪದಲ್ಲಿ ಸಮಾನ ಭೂಮಿಕೆಯ ಸಮ್ಮೇಳನದಲ್ಲಿ ಸೇರಿಕೊಂಡವರು. ಇವರು ಕಾಯಕಕ್ಕೆ ವಿಶೇಷ ಮಾನ್ಯತೆ ನೀಡಿದರು. ಸಮಾಜಕ್ಕೆ ಅಗತ್ಯವಾದ ಮೌಲ್ಯಗಳು ಅವರ ವಚನಗಳಲ್ಲಿ ಅಡಗಿವೆ’ ಎಂದು ಹೇಳಿದರು.

‘ಭಕ್ತಿಯಿಂದ ಪೂಜಿಸಿದರೇ ಶಿವ ಒಲಿಯುತ್ತಾನೆ ಎಂಬ ಸಂದೇಶ ಸಾರಿದ ಚೌಡಯ್ಯರು ಎಲ್ಲರಿಗೂ ಆದರ್ಶ ವ್ಯಕ್ತಿಯಾಗಿದ್ದಾರೆ. ಎಲ್ಲರೂ ಸಮಾನರೆಂದು ಭಾವಿಸಿ ಶೋಷಣೆಯ ವಿರುದ್ಧ ಹೋರಾಟ ಮಾಡಿದ ಇವರು ನಿಜಧೀರ ಚೌಡಯ್ಯ ಎಂಬ ಖ್ಯಾತಿ ಪಡೆದರು’ ಎಂದು ಬಣ್ಣಿಸಿದರು.

‘ಚೌಡಯ್ಯರ ಮಾತು ಕಟುವಾದರೂ ನುಡಿದಂತೆ ನಡೆದವರು. ನಿಜಾರ್ಥದಲ್ಲಿ ಅವರು ಬಂಡುಕೋರ, ಕಾಂತ್ರಿಕಾರಿ ಶರಣರು. ಎಲ್ಲಾ ಶರಣರಂತೆ ಕಾಯಕ ಯೋಗಿ. ಚೌಡಯ್ಯರ 278 ವಚನಗಳು ಲಭ್ಯವಿದ್ದು, ಆ ವಚನಗಳ ಸಾರ ಅರಿತು ಸಮ ಸಮಾಜ ನಿರ್ಮಿಸಬೇಕು’ ಎಂದು ಕಿವಿಮಾತು ಹೇಳಿದರು.

‘ಚೌಡಯ್ಯರು ವಚನ ಸಾಹಿತ್ಯದಲ್ಲಿ ಅಧ್ಯಾತ್ಮಿಕ ನೆಲೆ ತೋರಿಸಿಕೊಟ್ಟಿದ್ದಾರೆ. ಸಮಾಜದ ಅಂಕುಡೊಂಕು ತಿದ್ದಲು ವಚನಗಳನ್ನು ನೀಡಿ, ಸಮಾನತೆಯ ಸಂದೇಶ ಸಾರುವಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದರು. ಆದರೆ, ಇಚ್ಛಾಶಕ್ತಿ ಕೊರತೆಯಿಂದ ಅವರ ವಚನಗಳನ್ನು ಜನರಿಗೆ ಮುಟ್ಟಿಸಲು ಸಾಧ್ಯವಾಗುತ್ತಿಲ್ಲ’ ಎಂದು ವಿಷಾದಿಸಿದರು.

ವಚನಕಾರರ ರಕ್ಷಣೆ: ‘12ನೇ ಶತಮಾನದ ನಿಜಶರಣ ಅಂಬಿಗರ ಚೌಡಯ್ಯರು ವಚನ ಚಳವಳಿಯಲ್ಲಿ ಪ್ರಸಿದ್ಧಿ ಪಡೆದಿದ್ದರು. ಕಲ್ಯಾಣ ಕ್ರಾಂತಿ ಸಮಯದಲ್ಲಿ ವಚನಕಾರರನ್ನು ರಕ್ಷಣೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರು ಧರ್ಮ ಮತ್ತು ವೈಯಕ್ತಿಕವಾಗಿ ಯಾರನ್ನೂ ನಿಂದಿಸುತ್ತಿರಲಿಲ್ಲ. ಧರ್ಮ, ಜಾತಿ ಗುರಿಯಾಗಿಸಿಕೊಂಡು ಟೀಕೆ ಮಾಡುತ್ತಿರಲಿಲ್ಲ’ ಎಂದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಚಿನ್ ಘೋರ್ಪಡೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎನ್.ನರೇಂದ್ರಬಾಬು, ಜಿಲ್ಲಾ ಬೆಸ್ತರ ಸಂಘದ ಅಧ್ಯಕ್ಷ ಜಿ.ಮುನಿಕೃಷ್ಣ, ಗಂಗಾಮತಸ್ಥರ ಅಭಿವೃದ್ಧಿ ಟ್ರಸ್ಟ್‌ ಅಧ್ಯಕ್ಷ ಉದಯ್‌ಕುಮಾರ್‌, ಜಿಲ್ಲಾ ಗೌರವಾಧ್ಯಕ್ಷ ಶ್ರೀಧರ್, ಜಿಲ್ಲಾ ಮೀನುಗಾರಿಕೆ ಸಂಘದ ಅಧ್ಯಕ್ಷ ಕೆ.ಎಂ.ಶಿವಕುಮಾರ್ ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.