ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಳಬಾಗಿಲು: ಪ್ರವಾಸಿ ತಾಣವಾಗಿ ಆನೆಕೆರೆ ಅಭಿವೃದ್ಧಿಗೆ ಮನವಿ

ಕೌಂಡಿನ್ಯ ನದಿ ನೀರು ಆಂಧ್ರ ಪಾಲು
Last Updated 12 ಡಿಸೆಂಬರ್ 2021, 5:43 IST
ಅಕ್ಷರ ಗಾತ್ರ

ಮುಳಬಾಗಿಲು: ತಾಲ್ಲೂಕಿನ ಕುರುಡುಮಲೆ ಗ್ರಾಮದ ಬೆಟ್ಟವು ‘ಕೌಂಡಿನ್ಯ ಬೆಟ್ಟ’ವೆಂದು ಹೆಸರುವಾಸಿಯಾಗಿದೆ. ಇಲ್ಲಿ ಹುಟ್ಟುವ ಕೌಂಡಿನ್ಯ ನದಿಯು ಮಳೆಗಾಲದಲ್ಲಿ ಹಲವಾರು ಗ್ರಾಮಗಳ ಮೂಲಕ ಹರಿದು ನೆರೆಯ ಆಂಧ್ರಪ್ರದೇಶದ ಪಲಮನೇರು, ಕುಪ್ಪಂ ತಾಲ್ಲೂಕಿಗೆ ಸೇರುತ್ತದೆ.

ಇಲ್ಲಿ ಹುಟ್ಟಿ ಬೇರೆಡೆಗೆ ಹರಿ ಯುವ ಕೌಂಡಿನ್ಯ ನದಿಯನ್ನು ನೆನಪಿಸಿ ಕೊಳ್ಳುವವರು ತಾಲ್ಲೂಕಿನಲ್ಲಿ ಕಡಿಮೆ. ಆದರೆ, ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪಲಮನೇರು ಬಳಿ ಕೌಂಡಿನ್ಯ ಹೆಸರಿನಲ್ಲಿ ಜಲಾಶಯ ನಿರ್ಮಿಸಿದ್ದಾರೆ. ಅಲ್ಲಿನ ಅರಣ್ಯ ಪ್ರಾಂತ್ಯಕ್ಕೂ ಕೌಂಡಿನ್ಯ ಋಷಿಯ ಹೆಸರಿಡಲಾಗಿದೆ.

ಕುರುಡುಮಲೆಯ ಕೌಂಡಿನ್ಯ ಬೆಟ್ಟದ ದಕ್ಷಿಣ ಭಾಗದ ನದಿಯ ನೀರು ಬೇರೆಡೆಗೆ ಹರಿದರೆ, ಪೂರ್ವದ ಗ್ರಾಮಕ್ಕೆ ಮುಖ ಮಾಡುವ ಬೆಟ್ಟದ ನೀರು ಗ್ರಾಮದ ಆನೆಕೆರೆಗೆ ಸೇರುತ್ತದೆ. ಈ ಹಿಂದೆ ಆನೆಗಳ ಹಿಂಡು ಇಲ್ಲಿಗೆ ಬಂದು ನೀರು ಕುಡಿಯುತ್ತಿದ್ದ ಕಾರಣ ಇದನ್ನು ‘ಆನೆಕೆರೆ’ಯೆಂದು ಕರೆಯಲಾಗುತ್ತಿತ್ತು ಎಂದು ಇತಿಹಾಸಕಾರರು ಹೇಳುತ್ತಾರೆ.

ಈಚಿನ ದಿನಗಳಲ್ಲಿ ಆನೆಕೆರೆಗೆ ನೀರು ಬರುವ ಮೂಲಗಳು ಹಾಳಾಗಿವೆ. ಕೊಳಚೆ ನೀರು ಸೇರಿ ಕೆರೆಯು ಅಧ್ವಾನವಾಗಿತ್ತು. ತಾಲ್ಲೂಕು ಆಡಳಿತ ಮತ್ತು ಕುರುಡುಮಲೆ ಗ್ರಾಮ ಪಂಚಾಯಿತಿಯು ನರೇಗಾ ಯೋಜನೆಯಡಿ ಕೆರೆಗೆ ನೀರು ಹರಿಯುವ ಮೂಲಗಳ ಅಭಿವೃದ್ಧಿಗೆ ಕ್ರಮಕೈಗೊಂಡಿದ್ದವು. ಈ ಬಾರಿ ಸುರಿದ ಮಳೆಗೆ ಕೆರೆಗೆ ನೀರು ಬಂದಿದೆ ಎನ್ನುತ್ತಾರೆ ಗ್ರಾಮದ ವಕೀಲ ಕುರುಡುಮಲೆ ಮಂಜುನಾಥ್.

‘ಆನೆಕೆರೆ ನೀರನ್ನು ಸಂರಕ್ಷಿಸಲು ಗ್ರಾಮಸ್ಥರು ಸರ್ಕಾರಕ್ಕೆ ನೀಡಿದ ಮನವಿಗಳಿಗೆ ಯಾವುದೇ ಫಲಶ್ರುತಿ ಸಿಕ್ಕಿಲ್ಲ. ರಾಜಕೀಯ ಮುಖಂಡರು ಮಳೆಗಾಲದ ಸಮಯದಲ್ಲಿ ಇಲ್ಲಿಗೆ ಬಂದು ಕೆರೆ ಅಭಿವೃದ್ಧಿಗೆ ಸಹಕರಿಸುವುದಾಗಿ ಭರವಸೆ ನೀಡಿ ಹೋದವರು ಮತ್ತೆ ಬಂದಿಲ್ಲ. ಕೆರೆಯನ್ನು ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿ‍ಪಡಿಸಿದರೆ ರೈತರು ಮತ್ತು ಗ್ರಾಮಸ್ಥರಿಗೆ ಅನುಕೂಲವಾಗಲಿದೆ’ ಎನ್ನುತ್ತಾರೆ ಗ್ರಾಮಸ್ಥ ಕೆ.ವಿ. ವಿಜಯಕುಮಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT