ಮಂಗಳವಾರ, ಮಾರ್ಚ್ 9, 2021
31 °C
ನಗರಸಭೆ ಖರ್ಚು ವೆಚ್ಚದ ಸಭೆಯಲ್ಲಿ ಜಿಲ್ಲಾಧಿಕಾರಿ ಮಂಜುನಾಥ್‌ ಕೆಂಡಾಮಂಡಲ

ಬಿಲ್‌ ಬಾಕಿ: ಅಧಿಕಾರಿಗಳಿಗೆ ತೀವ್ರ ತರಾಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಅಭಿವೃದ್ಧಿ ಕಾಮಗಾರಿಗಳ ಬಿಲ್‌ ಬಾಕಿ ಉಳಿಸಿಕೊಂಡಿರುವ ಸಂಬಂಧ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ನಗರಸಭೆ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ನಗರಸಭೆಯ ಖರ್ಚು ವೆಚ್ಚ ಸಂಬಂಧ ಇಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಮಾತನಾಡಿ, ‘ಈಗಾಗಲೇ ಪೂರ್ಣಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಬಿಲ್‌ನ ಹಣವನ್ನು ಆಯಾ ವರ್ಷದಲ್ಲೇ ಪಾವತಿಸಲು ಏನು ಸಮಸ್ಯೆ?’ ಎಂದು ಪ್ರಶ್ನಿಸಿದರು.

‘ಖರ್ಚು ವೆಚ್ಚದ ಬಗ್ಗೆ ಪ್ರತಿ ತಿಂಗಳು ಸಭೆ ನಡೆಸಿದ್ದರೆ ಸಮಸ್ಯೆ ಎದುರಾಗುತ್ತಿರಲಿಲ್ಲ. ಈಗ ಹಳೆ ಕಾಮಗಾರಿಗಳ ಬಿಲ್‌ಗೆ ಎಲ್ಲಿಂದ ದುಡ್ಡು ತರಬೇಕು ಹೇಳಿ. ಸಮರ್ಪಕವಾಗಿ ತೆರಿಗೆ ವಸೂಲಿ ಮಾಡಿಲ್ಲ. ನಿಮಗೆ ಸಮಯಕ್ಕೆ ಸರಿಯಾಗಿ ಸಂಬಳ ಮಾತ್ರ ಬೇಕು’ ಎಂದು ಗುಡುಗಿದರು.

ಇದಕ್ಕೆ ಪ್ರತಿಕ್ರಿಯಿಸಿದ ನಗರಸಭೆ ಆಯುಕ್ತ ಟಿ.ಆರ್‌. ಸತ್ಯನಾರಾಯಣ, ‘ಈ ಹಿಂದೆ ಪೂರ್ಣಗೊಂಡಿರುವ ಕಾಮಗಾರಿಗಳಿಗೆ ಆಗಿನ ಆಯುಕ್ತರು ಬಿಲ್ ಪಾವತಿ ಮಾಡಿಲ್ಲ. ಗುತ್ತಿಗೆದಾರರು ಈಗ ಬಂದು ಬಿಲ್‌ ನೀಡುವಂತೆ ಒತ್ತಾಯ ಮಾಡುತ್ತಿದ್ದಾರೆ. ಸುಮಾರು ₹ 2 ಕೋಟಿ ಬಿಲ್‌ ಬಾಕಿಯಿದೆ’ ಎಂದು ತಿಳಿಸಿದರು.

‘ವಾಹನಗಳ ಡೀಸೆಲ್‌ಗೆ ಹಾಗೂ ಸಿಬ್ಬಂದಿಯ ವೇತನ ಪಾವತಿಗೆ ತಿಂಗಳಿಗೆ ₹ 30 ಲಕ್ಷಕ್ಕೂ ಹೆಚ್ಚು ಹಣ ಬೇಕು. ನಗರಸಭೆಯಲ್ಲಿ 9 ನೀರಿನ ಟ್ಯಾಂಕರ್ ಹಾಗೂ 18 ಕಸ ವಿಲೇವಾರಿ ವಾಹನಗಳಿದ್ದು, ಡೀಸೆಲ್‌ಗೆ ₹ 4 ಲಕ್ಷ ಬೇಕಾಗುತ್ತದೆ, ಬೀದಿ ದೀಪ ಹಾಗೂ ಕೊಳವೆ ಬಾವಿಗಳ ಪಂಪ್‌ ಮೋಟರ್ ದುರಸ್ತಿಗೂ ಹಣ ವೆಚ್ಚವಾಗುತ್ತಿದೆ. ಈ ಹಿಂದೆ ಮಾಡಿರುವ ಸಣ್ಣಪುಟ್ಟ ಕೆಲಸಗಳ ಬಿಲ್ ಬಾಕಿಯಿದೆ’ ಎಂದು ವಿವರಿಸಿದರು.

ಜನಪರ ಕೆಲಸ ಮಾಡಿ: ‘ನಗರೋತ್ಥಾನ, ಅಮೃತ್ ಸಿಟಿ ಯೋಜನೆಯಡಿ ಅಗತ್ಯ ಇರುವ ಕಡೆ ಪೈಪ್‌ಲೈನ್‌ ಮಾಡಿಸಬಹುದಲ್ಲವೇ? ಕೆಲಸ ನಡೆಯದಿದ್ದರೂ ಬಿಲ್‌ ಪಾವತಿಸಲು ಸಾಧ್ಯವಾಗುತ್ತದೆಯೇ? ಈ ಹಿಂದೆ ಚುನಾಯಿತ ಮಂಡಳಿಯಿದ್ದ ಕಾರಣ ಕೆಲಸ ಮಾಡಲು ಒತ್ತಡ ಹೆಚ್ಚಿತ್ತು. ಈಗ ಆಡಳಿತಾಧಿಕಾರಿಯೇ ಅಧ್ಯಕ್ಷರಾಗಿದ್ದು, ಈಗಲಾದರೂ ಜನಪರ ಕೆಲಸ ಮಾಡಿ’ ಎಂದು ಜಿಲ್ಲಾಧಿಕಾರಿ ನಗರಸಭೆ ಸಿಬ್ಬಂದಿಗೆ ತಾಕೀತು ಮಾಡಿದರು.

‘ನಗರದಲ್ಲಿ 35 ವಾರ್ಡ್‌ಗಳಿದ್ದು, ರಾಜ್ಯ ಹಣಕಾಸು ನಿಧಿಯಲ್ಲಿ (ಎಸ್‌ಎಫ್‌ಸಿ) ₹ 70 ಸಾವಿರದಿಂದ ₹ 80 ಸಾವಿರವರೆಗೆ ವಿದ್ಯುತ್ ಬಿಲ್ ಪಾವತಿಯಾಗುತ್ತಿದೆ. ಕೊಳವೆ ಬಾವಿ ಸೇರಿದಂತೆ ಎಷ್ಟು ವಿದ್ಯುತ್ ಸಂಪರ್ಕಗಳಿವೆ?’ ಎಂದು ಕೇಳಿದರು.

ಇದಕ್ಕೆ ಉತ್ತರಿಸಿದ ನಗರಸಭೆ ಎಂಜಿನಿಯರ್ ಸುಧಾಕರ್ ಶೆಟ್ಟಿ, ‘35 ವಾರ್ಡ್‌ನಲ್ಲಿ 300 ಕೊಳವೆ ಬಾವಿಗಳಿವೆ. ಈ ಪೈಕಿ 120 ಕೊಳವೆ ಬಾವಿಗಳು ಕಾರ್ಯ ನಿರ್ವಹಿಸುತ್ತಿವೆ. ತಿಂಗಳಿಗೆ 2ರಿಂದ 3 ಕೊಳವೆ ಬಾವಿಗಳಲ್ಲಿ ನೀರು ಬತ್ತುತ್ತಿದೆ. 8 ಸಾವಿರ ಬೀದಿ ದೀಪಗಳಿವೆ’ ಎಂದು ಮಾಹಿತಿ ನೀಡಿದರು.

ಜಿಪಿಎಸ್‌ ಕಡ್ಡಾಯ: ‘ಕೊಳವೆ ಬಾವಿಗಳಲ್ಲಿ ನೀರು ಬತ್ತಿದರೆ ವಿದ್ಯುತ್ ಬಳಕೆ ಪ್ರಮಾಣ ಕಡಿಮೆಯಾಗುತ್ತದೆಯಲ್ಲವೇ? ಹೊಸ ಕೊಳವೆ ಬಾವಿಗೆ ಬಿಲ್ ಪಾವತಿಸಲು ನಿಯಮಗಳಿವೆ. ಮೂರು ಹಂತದ ಫೋಟೊ ಹಾಗೂ ಜಿಪಿಎಸ್ ಕಡ್ಡಾಯವಾಗಿ ಇರಬೇಕು’ ಎಂದು ಜಿಲ್ಲಾಧಿಕಾರಿ ಸೂಚಿಸಿದರು.

‘ಕೊಳವೆ ಬಾವಿ ಕೊರೆಯುವ ಸಂದರ್ಭದಲ್ಲಿ ಎಂಜಿನಿಯರ್‌ಗಳು ಸ್ಥಳಕ್ಕೆ ಹೋಗುವುದಿಲ್ಲ ಎಂದು ದೂರು ಬಂದಿವೆ. ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟ ಕಳಪೆಯಾಗಿದ್ದರೂ ಬಿಲ್‌ ಬಿಡುಗಡೆಗೆ ಶಿಫಾರಸ್ಸು ಮಾಡುತ್ತೀರಿ. ಸರಿಯಾಗಿ ಕೆಲಸ ಮಾಡಬೇಕೆಂಬ ಜವಾಬ್ದಾರಿ ಇಲ್ಲವೇ’ ಎಂದು ಕೆಂಡಾಮಂಡಲರಾದರು.

‘ನಗರದ ಕೆವಿಎಸ್ ಕಲ್ಯಾಣ ಮಂಟಪದ ಬಳಿ ರಾಜಕಾಲುವೆಯಲ್ಲಿ ಮ್ಯಾನ್‌ಹೋಲ್‌ ಪೈಪ್‌ಲೈನ್‌ಗೆ ಹಾನಿ ಮಾಡಿರುವ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಿಸಿ ಮತ್ತು ಪೈಪ್‌ಲೈನ್‌ ದುರಸ್ತಿ ಮಾಡಿಸಿ’ ಎಂದು ಆದೇಶಿಸಿದರು.

ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಂಗಸ್ವಾಮಿ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.