ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿ, ಸಿಬ್ಬಂದಿ ಮೇಲೆ ಹಲ್ಲೆ: ಕ್ರಮಕ್ಕೆ ಒತ್ತಾಯ

ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ಧರಣಿ
Last Updated 12 ಫೆಬ್ರುವರಿ 2020, 13:37 IST
ಅಕ್ಷರ ಗಾತ್ರ

ಕೋಲಾರ: ತಾಲ್ಲೂಕಿನ ಸೂಲೂರು ಗ್ರಾಮ ಪಂಚಾಯಿತಿ ಕಚೇರಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿರುವ ಗ್ರಾ.ಪಂ ಸದಸ್ಯನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಜಿಲ್ಲಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಇಲ್ಲಿನ ಜಿ.ಪಂ ಕಚೇರಿ ಎದುರು ಬುಧವಾರ ಧರಣಿ ನಡೆಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಂಪರಾಜ್ ಮಾತನಾಡಿ, ‘ಅಧಿಕಾರಿಗಳು, ಸಿಬ್ಬಂದಿ ಭಯದ ವಾತಾವರಣದಲ್ಲಿ ಕೆಲಸ ಮಾಡುವಂತಾಗಿದೆ. ಸೂಕ್ತ ರಕ್ಷಣೆ ನೀಡುವಂತೆ ಗೃಹ ಇಲಾಖೆ, ಜಿಲ್ಲಾಡಳಿತ, ಜಿಪಂ ಸಿಇಒಗಳಿಗೆ ದೂರು ನೀಡಲಾಗಿದ್ದರೂ ಗೃಹ ಇಲಾಖೆಯಿಂದ ಸ್ಪಂದನೆ ಸಿಕ್ಕಿಲ್ಲ’ ಎಂದು ಅಸಮಾಧಾನವ್ಯಕ್ತಪಡಿಸಿದರು.

‘ಸೂಲೂರು ಗ್ರಾಪಂ ವ್ಯಾಪ್ತಿಯ ಪೆಮ್ಮಶೆಟ್ಟಿಹಳ್ಳಿ ಗ್ರಾಮದ ರಸ್ತೆ ಕಾಮಗಾರಿ ವಿಚಾರದಲ್ಲಿ ಪಿಡಿಒ ಕೆ.ಸಿ. ಬಾಲಾಜಿ ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಎಂ.ಪ್ರದೀಪ್ ಮಂಗಳವಾರ ಮಧ್ಯಾಹ್ನ ಸ್ಥಳ ಪರಿಶೀಲನೆ ನಡೆಸಿ ಸಾರ್ವಜನಿಕರ ಸಮ್ಮುಖದಲ್ಲಿ ಸಮಸ್ಯೆ ಬಗೆಹರಿಸಿ ಕಚೇರಿಗೆ ಬಂದಿದ್ದಾರೆ’ ಎಂದರು.

‘ಇದಕ್ಕೆ ಸ್ಪಲ್ವ ಸಮಯದ ನಂತರ ಗ್ರಾ.ಪಂ ಸದಸ್ಯ ಮುನಿರಾಜು ಕಚೇರಿಗೆ ಆಗಮಿಸಿ ಅನುಮತಿ ಇಲ್ಲದೆ ಗ್ರಾಮಕ್ಕೆ ಹಾಜರಾಗಿ ರಸ್ತೆ ಸಮಸ್ಯೆ ಬಗ್ಗೆ ಏಕೆ ಕ್ರಮವಹಿಸಿದ್ದೀರಿ ಎಂದು ಪ್ರಶ್ನಿಸಿದಲ್ಲದೆ ಇಬ್ಬರನ್ನೂ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಪ್ರದೀಪ್ ಅವರ ಕತ್ತಿನ ಪಟ್ಟಿ ಹಿಡಿದು ಎಳೆದಾಡಿ ಅಂಗಿ ಹರಿದುಹಾಕಿ ಹಲ್ಲೆ ನಡೆಸಿ ಸರ್ಕಾರಿ ಕರ್ತವ್ಯಕ್ಕೆ ಅಡಚಣೆ ಉಂಟು ಮಾಡಿದ್ದಾರೆ’ ಎಂದು ಆರೋಪಿಸಿದರು.

‘ಸೂಲೂರು ಗ್ರಾಮ ಪಂಚಾಯಿತಿ ಪ್ರಕರಣದಲ್ಲೂ ಸಂಜೆ ೭ ಗಂಟೆಗೆ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದರೂ ಎಫ್‌ಐಆರ್ ದಾಖಲಿಸಿಲ್ಲ. ಆದರೆ ಗ್ರಾ.ಪಂ ಸದಸ್ಯ ಮುನಿರಾಜು ಎಸ್‌ಡಿಎ ಪ್ರದೀಪ್ ವಿರುದ್ದ ಜಾತಿ ನಿಂದನೆಯ ಸುಳ್ಳು ದೂರು ದಾಖಲಿಸಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಆರೋಪಿ ಮುನಿರಾಜುನನ್ನು ಈ ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು, ಪ್ರದೀಪ್ ವಿರುದ್ದ ದಾಖಲಿಸಿರುವ ಸುಳ್ಳು ಜಾತಿ ನಿಂದನೆ ದೂರು ರದ್ದುಗೊಳಿಸಲು ಶಿಫಾರಸ್ಸು ಮಾಡಬೇಕು. ಮುನಿರಾಜು ಸದಸ್ಯತವ ರದ್ದುಪಡಿಸಲು ಸರ್ಕಾರಕ್ಕೆ ಶಿಫಾರಸು ಮಾಡಬೇಕು’ ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಜಿ.ಪಂ ಸಿಇಒ ಎಚ್.ವಿ.ದರ್ಶನ್, ‘ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿರುವುದು ಸರಿಯಲ್ಲ. ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವುದರಿಂದ ಪೊಲೀಸರು ತನಿಖೆ ನಡೆಸಿ ಕಾನೂನು ಪ್ರಕಾರ ಕ್ರಮ ವಹಿಸುತ್ತಾರೆ. ನಿಮ್ಮ ಪರ ಜಿ.ಪಂ ಇರುತ್ತದೆ’ ಎಂದು ಭರವಸೆ ನೀಡಿದರು.

ಜಿ.ಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ಮಾತನಾಡಿ, ‘ಜನಪ್ರತಿನಿಧಿ ಅಧಿಕಾರಿ ಮೇಲೆ ಹಲ್ಲೆ ನಡೆಸುವ ಹಂತಕ್ಕೆ ಹೋಗುವುದು ಸರಿಯಲ್ಲ. ಪ್ರಕರಣದ ತನಿಖೆ ಆಗಲಿ. ತಪ್ಪು ಯಾರೇ ಮಾಡಿರಲಿ ಅವರ ವಿರುದ್ದ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಸಂಘದ ಗೌರವಾಧ್ಯಕ್ಷ ಸಿ.ವಿ.ಶಂಕರ್, ರಾಜ್ಯ ಪ್ರತಿನಿಧಿ ಮಹೇಶ್, ಪ್ರಧಾನ ಕಾರ್ಯದರ್ಶಿ ಸುರೇಶ್‌ಗೌಡ, ಪದಾಧಿಕಾರಿಗಳಾದ ಕೃಷ್ಣಪ್ಪ, ಕಾಶಿನಾಥ್, ಮಂಜುನಾಥ್ ಪ್ರಸಾದ್, ಸುರೇಶ್, ಲಕ್ಷ್ಮಿ, ಸರಿತಾ, ಮಮತಾ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT