ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಂಗಾರಪೇಟೆ: ಗುಂಡಿಮಯವಾದ ರಸ್ತೆಗಳು

ಜೀವ ಕೈಯಲ್ಲೇ ಹಿಡಿದು ವಾಹನ ಸವಾರರ ಸಂಚಾರ l ದುರಸ್ತಿಗೊಳಿಸಲು ಜನರ ಆಗ್ರಹ
ಮಂಜುನಾಥ ಎಸ್
Published 30 ಆಗಸ್ಟ್ 2024, 6:02 IST
Last Updated 30 ಆಗಸ್ಟ್ 2024, 6:02 IST
ಅಕ್ಷರ ಗಾತ್ರ

ಬಂಗಾರಪೇಟೆ: ತಾಲ್ಲೂಕು ವ್ಯಾಪ್ತಿಯಲ್ಲಿರುವ ಗ್ರಾಮೀಣ ಪ್ರದೇಶದ ಬಹುತೇಕ ರಸ್ತೆಗಳು ಗುಂಡಿಮಯವಾಗಿವೆ. ಈ ರಸ್ತೆಗಳಲ್ಲಿ ಸಂಚರಿಸುವವರು ಪ್ರಾಣ ಅಂಗೈಯಲ್ಲೇ ಹಿಡಿದುಕೊಂಡು ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಆದರೆ, ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕಣ್ಮುಚ್ಚಿ ಕುಳಿತ್ತಿದ್ದಾರೆ. 

ಬಂಗಾರಪೇಟೆ– ಕಾಮಸಮುದ್ರ ಮುಖ್ಯ ರಸ್ತೆಯಲ್ಲಿ ಪರವನಹಳ್ಳಿಯಿಂದ ಕಾಮಸಮುದ್ರದವರೆಗಿನ ಮಾರ್ಗದ ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿವೆ. ಗಾಜಗನಿಂದ ಬೂದಿಕೋಟೆವರೆಗಿನ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದೆ. ಇನ್ನು ಕಾಮಸಮುದ್ರದಿಂದ ತೋಪ್ಪನಹಳ್ಳಿವರೆಗಿನ ರಸ್ತೆಯು ಬೃಹತ್ ಗುಂಡಿಗಳು ಬಿದ್ದಿದ್ದು, ಮಳೆ ಬಂದರೆ ಕೆಸರು ಗದ್ದೆಯಂತಾಗುತ್ತದೆ. ಈ ರಸ್ತೆಯಲ್ಲಿ ಹಲವು ವಾಹನ ಸವಾರರು ಬಿದ್ದು, ಗಾಯಗೊಂಡಿರುವ ಘಟನೆಗಳೂ ನಡೆದಿವೆ. 

ಬತ್ತಲಾಯೂರಿನಿಂದ ಬಿಸಾನತ್ತ ರೈಲ್ವೆ ನಿಲ್ದಾಣಕ್ಕೆ ಹೋಗುವ ಮಾರ್ಗ ಹಾಗೂ ಡಿಪಿ ಹಳ್ಳಿ ಗ್ರಾಮದ ರಸ್ತೆಯಲ್ಲಿ ಮೊಣಕಾಲು ಉದ್ದದವರೆಗಿನ ಗುಂಡಿಗಳಿವೆ.

ತಾಲ್ಲೂಕಿನಲ್ಲಿ ಓವರ್ ಲೋಡ್ ಹೊತ್ತ ಟಿಪ್ಪರ್‌ಗಳು ಹಗಲಿರುಳು ಸಂಚರಿಸುತ್ತಿವೆ. ಮಣಬಾರ ಹೊತ್ತು ಸಾಗುವ ಟಿಪ್ಪರ್‌ಗಳ ಸಂಚಾರದಿಂದ ರಸ್ತೆಗಳಲ್ಲಿ ತಗ್ಗು ಗುಂಡಿಗಳೇ ಇವೆ. ಆದರೆ, ಜನಪ್ರತಿನಿಧಿಗಳು ಮಾತ್ರ ಈ ರಸ್ತೆಗಳನ್ನು ದುರಸ್ತಿಗೊಳಿಸುವ ಗೋಜಿಗೆ ಹೋಗಿಲ್ಲ ಎಂದು ಗ್ರಾಮಸ್ಥರು ದೂರುತ್ತಾರೆ. 

ಅಭಿವೃದ್ಧಿ ಮರೀಚಿಕೆ: ತಾಲ್ಲೂಕಿನಲ್ಲಿ ಅಲ್ಪಸ್ವಲ್ಪ ಉಳಿದ ಡಾಂಬರೀಕರಣದ ರಸ್ತೆಗಳು ಮಳೆ ಹಾಗೂ ಟಿಪ್ಪರ್ ಸಂಚಾರದಿಂದ ಸಂಪೂರ್ಣ ಕಿತ್ತುಹೋಗಿದೆ. ಈ ರಸ್ತೆಗಳ ಅಭಿವೃದ್ಧಿಗೆ ಹಲವು ಬಾರಿ ಮನವಿ ಮಾಡಿದರೂ ಜನಪ್ರತಿನಿಧಿಗಳು ಅಥವಾ ಅಧಿಕಾರಿಗಳು ಈವರೆಗೆ ಸ್ಪಂದಿಸಿಲ್ಲ ಎಂದು ಗ್ರಾಮಸ್ಥರು ದೂರಿದರು.

ಅನುದಾನ ಬೇಕು: ತಾಲ್ಲೂಕಿನಲ್ಲಿನ ರಸ್ತೆಗಳ ಗುಣಮಟ್ಟವನ್ನು ಸುಧಾರಿಸಲು ಹೆಚ್ಚುವರಿ ಅನುದಾನದ ಅಗತ್ಯವಿದೆ. ರಸ್ತೆ ಅಭಿವೃದ್ಧಿಗೆ ಮಂಜೂರಾದ ಅನುದಾನವನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಮರ್ಪಕವಾಗಿ ಬಳಸಬೇಕು. ಆಗ ಮಾತ್ರವೇ ತಾಲ್ಲೂಕಿನ ರಸ್ತೆಗಳು ಗುಣಮಟ್ಟದ ಮಾದರಿ ರಸ್ತೆಯಾಗಲು ಸಾಧ್ಯ ಎನ್ನುತ್ತಾರೆ ಸಾರ್ವಜನಿಕರು. 

ತಾಲ್ಲೂಕಿನ ಮುಖ್ಯ ಸಂಪರ್ಕ ಹಾಗೂ ಗ್ರಾಮೀಣ ಮುಖ್ಯ ರಸ್ತೆಯಲ್ಲಿ ವಾಹನ ಸಂಚರಿಸಲು ತೊಂದರೆಯಾಗಿದೆ. ಮಳೆಗಾಲದಲ್ಲಿ ರಸ್ತೆಯ ಗುಂಡಿಗಳಲ್ಲಿ ನೀರು ತುಂಬಿಕೊಂಡು ಕೆರೆಯಂತೆ ಕಂಡುಬರುತ್ತಿದೆ. ಗುಂಡಿಗಳನ್ನು ಮುಚ್ಚಲು ಸಂಬಂಧಪಟ್ಟ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಿವಕುಮಾರ ಕೆ ಒತ್ತಾಯಿಸಿದರು.

ಮಳೆಯಿಂದ ಹಾಳಾದ ರಸ್ತೆಗಳನ್ನು ಪಟ್ಟಿ ಮಾಡಿ ಅನುದಾನ ಬಿಡುಗಡೆಗೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಬಂದ ಮೇಲೆ ರಸ್ತೆ ಅಭಿವೃದ್ಧಿಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು

–ಎಸ್.ಎನ್. ನಾರಾಯಣಸ್ವಾಮಿ ಶಾಸಕ 

ಮುಖ್ಯರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ರಸ್ತೆ ದುರಸ್ತಿ ಮೂಲಕ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು.

–ಸೋಮಶೇಖರ ರೆಡ್ಡಿ ಮಾಜಿ ಅಧ್ಯಕ್ಷ ತೋಪ್ಪನಹಳ್ಳಿ ಗ್ರಾಮ ಪಂಚಾಯಿತಿ

ರಾತ್ರಿ ವೇಳೆ ರಸ್ತೆಯಲ್ಲಿರುವ ಗುಂಡಿಗಳು ತಿಳಿಯದೆ ದ್ವಿಚಕ್ರವಾಹನ ಸವಾರರು ಬಿದ್ದು ಗಾಯಗೊಂಡ ಉದಾಹರಣೆಗಳಿವೆ. ರಸ್ತೆ ದುರಸ್ತಿಯನ್ನು ತುರ್ತಾಗಿ ಕೈಗೊಳ್ಳಬೇಕು. 

– ಜಿ.ವಿ. ಶ್ರೀನಿವಾಸ ಕಾಮಸಮುದ್ರ ಸ್ಥಳೀಯ ನಿವಾಸಿ

ದೇಶ ಅಭಿವೃದ್ಧಿ ಹೊಂದಬೇಕಾದರೆ ಮೊದಲು ಗ್ರಾಮಗಳ ಅಭಿವೃದ್ಧಿಯಾಗಬೇಕು. ಗ್ರಾಮೀಣ ಪ್ರದೇಶದಲ್ಲಿ ಮೂಲ ಸೌಲಭ್ಯಗಳು ಸಮರ್ಪಕವಾಗಿ ಜನರಿಗೆ ದೊರೆತಾಗ ಜನರು ಅಭಿವೃದ್ಧಿ ಹೊಂದಲು ಸಾಧ್ಯ. ಕೋದಂಡ.

–ಎನ್ ಖಾಸಗಿ ಕಂಪನಿ ಉದ್ಯೋಗಿ.

ದೂರ ಉಳಿದ ಆರ್‌ಟಿಒ

ಅಧಿಕಾರಿಗಳು ತಾಲ್ಲೂಕಿನಲ್ಲಿ ಅವ್ಯಾಹತವಾಗಿ ಓವರ್‌ಲೋಡ್ ಹೊತ್ತ ಟಿಪ್ಪರ್‌ಗಳ ಸಂಚಾರದಿಂದಲೇ ರಸ್ತೆಗಳ ಸ್ಥಿತಿ ಹದಗೆಡಲು ಕಾರಣವಾಗಿದೆ. ತಾಲ್ಲೂಕಿನಲ್ಲಿ ಇದುವರೆಗೆ ಆರ್‌ಟಿಒ ಅಧಿಕಾರಿಗಳು ಸಂಚರಿಸಿ ನಿಯಮಬಾಹಿರವಾಗಿ ಸಂಚರಿಸುವ ಯಾವುದೇ ವಾಹನಗಳ ಮೇಲೆ ಪ್ರಕರಣ ದಾಖಲಿಸಿದ ಅಥವಾ ದಂಡ ಹಾಕಿದ ಉದಾಹರಣೆಗಳು ಇಲ್ಲವೇ ಇಲ್ಲ. ಹೆಚ್ಚು ಟನ್‌ ಸರಕು (ಎಂಸ್ಯಾಂ ಜೆಲ್ಲಿ ಮರಳು ಪಿಸ್ಯಾಂಡ್ ಮಣ್ಣು) ಹೊತ್ತು ವಾಹನಗಳು ರಾಜಾರೋಷವಾಗಿ ಸಂಚರಿಸಿದರೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂಬುದು ಸ್ಥಳೀಯರ ದೂರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT