ಬುಧವಾರ, ಜನವರಿ 22, 2020
28 °C
ಕೆಜಿಎಫ್‌: ನೆನಪುಗಳನ್ನು ಹಂಚಿಕೊಂಡ ಹಳೆ ವಿದ್ಯಾರ್ಥಿಗಳು

ಬೆಮಲ್‌ ಶಾಲೆ: ಸ್ನೇಹ ಸಮ್ಮಿಲನ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆಜಿಎಫ್‌: ಶಾಲೆಯಲ್ಲಿ ಮಾಡುತ್ತಿದ್ದ ಚೇಷ್ಟೆಗಳು, ಶಿಕ್ಷಕರಿಂದ ಬೈಸಿಕೊಂಡಿದ್ದು, ಹೆಚ್ಚು ಅಂಕಕೊಡುವಂತೆ ಬೇಡಿಕೊಂಡಿದ್ದು, ಗಲಾಟೆ ಸೆಕ್ಷನ್ ಎಂಬ ಬಿರುದು ಪಡೆದುಕೊಂಡಿದ್ದು. ಹೀಗೆ ವಿದ್ಯಾರ್ಥಿ ದಿಸೆಯ ಹಲವಾರು ನೆನಪುಗಳನ್ನು ಹಳೆ ವಿದ್ಯಾರ್ಥಿಗಳು ಹಂಚಿಕೊಂಡರು. ಯೋಗಕ್ಷೇಮ ವಿಚಾರಿಸಿಕೊಂಡರು. ಹೀಗೆ ಹಲವಾರು
ನೆನಪುಗಳ ಹಂಚಿಕೊಂಡು ಸಂಭ್ರಮಿಸಿದರು.

1992–95ರ ಸಮಯದಲ್ಲಿ ಬೆಮಲ್‌ ಹೈಸ್ಕೂಲ್‌ನಲ್ಲಿ ವ್ಯಾಸಂಗ ಮಾಡಿದ್ದ ಸುಮಾರು ಇನ್ನೂರಕ್ಕೂ ಹೆಚ್ಚು ಹಳೆ ವಿದ್ಯಾರ್ಥಿಗಳ ಸ್ನೇಹ– ಸಮ್ಮಿಲನ ಕಾರ್ಯಕ್ರಮ ಶನಿವಾರ ಬೆಮಲ್‌ ಕಲಾಕ್ಷೇತ್ರದಲ್ಲಿ ನಡೆಯಿತು.

ಕಾಲು ಶತಮಾನವಾದ ನಂತರ ಭೇಟಿಯಾದ ಗೆಳೆಯರು ಹೇಗೆ ಇದ್ದಾರೆ ಎಂಬುದನ್ನು ಅರಿಯಲು ಸಾಧ್ಯವಾಗದೆ ಕೆಲವರು ಚಡಪಡಿಸಿದರು. ಗುರುತು ಸಿಕ್ಕವರು ತಮ್ಮ ಕುಟುಂಬದ ಸದಸ್ಯರನ್ನು ಇತರೆ ಸ್ನೇಹಿತರಿಗೆ ಪರಿಚಯಿಸಿದರು. ತಾವು ಮಾಡುತ್ತಿದ್ದ ಚೇಷ್ಟೆಯನ್ನು ಶಿಕ್ಷಕರ ಬಳಿ ಹೇಳಿ ಖುಷಿ ಪಟ್ಟರು.

ಕಾರ್ಯಕ್ರಮದ ಅಂಗವಾಗಿ ಗುರು ವಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ನಿವೃತ್ತಿಯಾದ ಎಲ್ಲ ಶಿಕ್ಷಕರಿಗೂ ಗೌರವ ಸಮರ್ಪಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ನಿವೃತ್ತ ಪ್ರಾಂಶುಪಾಲ ವೆಂಕಟರಾಮರೆಡ್ಡಿ, ಬೆಮಲ್‌ ಹೈಸ್ಕೂಲ್‌ನಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ವಿಶ್ವದ ಎಲ್ಲೆಡೆ ಸಿಗುತ್ತಾರೆ. ದೇಶ ವಿದೇಶಗಳಲ್ಲಿ ಉತ್ತಮ ಸ್ಥಾನ ಮಾನ ಹೊಂದಿದ್ದಾರೆ. ಎಷ್ಟೇ ಉನ್ನತ ಸ್ಥಾನ ಹೊಂದಿರಲಿ. ನಮ್ಮ ಸಂಸ್ಕೃತಿಯನ್ನು ಬಿಡಬಾರದು. ವಯಸ್ಸಾದ ತಂದೆ ತಾಯಿಗಳನ್ನು ಪೋಷಣೆ ಮಾಡಬೇಕು ಎಂದರು.

ಪ್ರಾಂಶುಪಾಲೆ ಸುಧಾ ಮಾತನಾಡಿದರು. ಹಳೇ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಬಿ.ವಿ.ಮಹೇಶ್‌ ಕಾರ್ಯಕ್ರಮ ನಿರ್ವಹಣೆ ಮಾಡಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು