ಗುರುವಾರ , ಜೂನ್ 24, 2021
23 °C
ಎರಡು ದಶಕದ ಹಿಂದೆ ಮುಚ್ಚಿದ್ದ ಆಸ್ಪತ್ರೆ; 250 ಹಾಸಿಗೆಗಳ ವ್ಯವಸ್ಥೆ

ಬಿಜಿಎಂಎಲ್ ಆಸ್ಪತ್ರೆ ಕಾರ್ಯಾರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆಜಿಎಫ್‌: ‘ಇಪ್ಪತ್ತು ವರ್ಷಗಳ ಹಿಂದೆ ಮುಚ್ಚಿದ್ದ ಬಿಜಿಎಂಎಲ್‌ ಆಸ್ಪತ್ರೆಯನ್ನು ಕೋವಿಡ್‌ ನಂತರವೂ ಮುಂದುವರಿಸಿಕೊಂಡು ಹೋಗಬೇಕು. ಅದಕ್ಕಾಗಿ ಗಣಿ ಸಚಿವಾಲಯ ಎಲ್ಲಾ ರೀತಿಯ ನೆರವು ನೀಡಲಿದೆ’ ಎಂದು ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಖಾತೆ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಇಲ್ಲಿನ ಚಾಂಪಿಯನ್ ರೀಫ್ಸ್‌ನಲ್ಲಿರುವ ಬಿಜಿಎಂಎಲ್ ಆಸ್ಪತ್ರೆಯನ್ನು ಗುರುವಾರ ವರ್ಚುಯಲ್ ಮೀಟ್‌ ಮೂಲಕ ಕೋವಿಡ್‌ ಆಸ್ಪತ್ರೆಯನ್ನಾಗಿ ಉದ್ಘಾಟಿಸಿದ ಬಳಿಕ ಅವರು ಮಾತನಾಡಿದರು.

ಈ ಆಸ್ಪತ್ರೆಯನ್ನು 250 ಹಾಸಿಗೆಯುಳ್ಳ ಆಸ್ಪತ್ರೆಯನ್ನಾಗಿ ಪರಿವರ್ತನೆ ಮಾಡಿರುವುದು ಶ್ಲಾಘನೀಯ. ಆಸ್ಪತ್ರೆಯಲ್ಲಿದ್ದ 450 ಟ್ರ್ಯಾಕ್ಟರ್‌ನಷ್ಟು ತ್ಯಾಜ್ಯವನ್ನು ತೆಗೆದುಹಾಕುವಲ್ಲಿ ಸಂಸದ ಎಸ್‌. ಮುನಿಸ್ವಾಮಿ ಮತ್ತು ಅವರ ತಂಡ ಶ್ರಮವಹಿಸಿದೆ. ಆಸ್ಪತ್ರೆಯನ್ನು ಕೋವಿಡ್ ಅವಧಿ ಮುಗಿದ ನಂತರವೂ ಮುಂದುವರಿಸಬೇಕು ಎಂದು ಹೇಳಿದರು.

ಗಣಿ ಸಚಿವಾಲಯದಿಂದ ದೇಶದಲ್ಲಿ 32 ಕಡೆ ಆಮ್ಲಜನಕ ಉತ್ಪಾದನೆ ಮಾಡುವ ಘಟಕ ನೀಡಲಾಗಿದೆ. ಈ ಆಸ್ಪತ್ರೆಗೆ ನಿಮಿಷಕ್ಕೆ 1,000 ಲೀಟರ್ ದ್ರವೀಕೃತ ಆಮ್ಲಜನಕ ಉತ್ಪಾದನೆ ಮಾಡುವ ಘಟಕ ನೀಡಲಾಗುವುದು. ದುರಸ್ತಿ ಮತ್ತು ನವೀಕರಣಕ್ಕಾಗಿ ₹ 20 ಲಕ್ಷ ನೀಡಲಾಗುವುದು. ಉಪ ಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ 30 ಆಮ್ಲಜನಕ ಕಾನ್ಸ್‌ನ್‌ಟ್ರೇಟರ್ ನೀಡುವ ಮೂಲಕ ಉತ್ತಮ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ ಮಾತನಾಡಿ, ಸರ್ಕಾರದಿಂದ ಎಲ್ಲಾ ರೀತಿಯ ನೆರವು ನೀಡಲಾಗುವುದು ಎಂದು ಹೇಳಿದರು.

‘ಸೋಮವಾರದಂದು ಬಿಜಿಎಂಎಲ್ ಆಸ್ಪತ್ರೆಗೆ ಭೇಟಿ ನೀಡಲಾಗುವುದು’ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.

ಸಂಸದ ಎಸ್‌. ಮುನಿಸ್ವಾಮಿ ಮಾತನಾಡಿ, ಸುಮಾರು 200 ಕಾರ್ಯಕರ್ತರು 20 ದಿನಗಳ ಕಾಲ ನಿರಂತರವಾಗಿ ಕೆಲಸ ಮಾಡಿ, ಕೋವಿಡ್‌ ಆಸ್ಪತ್ರೆಯು ಶೀಘ್ರವಾಗಿ ಕಾರ್ಯಾರಂಭ ಮಾಡಲು ಶ್ರಮಿಸಿದ್ದಾರೆ. ಕೋವಿಡ್ ಅವಧಿ ಮುಗಿದ ನಂತರ ಬಿಜಿಎಂಎಲ್ ಆಸ್ಪತ್ರೆಯನ್ನು ವೈದ್ಯಕೀಯ ಕಾಲೇಜನ್ನಾಗಿ ಪರಿವರ್ತನೆ ಮಾಡಬೇಕು. ಈ ಸಂಬಂಧ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು.

ಜಿಲ್ಲಾಧಿಕಾರಿ ಆರ್. ಸೆಲ್ವಮಣಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನಾಗರಾಜ್, ನಗರಸಭೆ ಅಧ್ಯಕ್ಷ ವಳ್ಳಲ್‌ ಮುನಿಸ್ವಾಮಿ, ಉಪ ವಿಭಾಗಾಧಿಕಾರಿ ಸೋಮಶೇಖರ್‌, ತಹಶೀಲ್ದಾರ್ ಕೆ.ಎನ್‌. ಸುಜಾತಾ, ಡಾ.ಚಂದನ್‌, ಡಾ.ಸುನಿಲ್‌ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.