ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಗೀರಥರ ಪ್ರಯತ್ನ ಸ್ಫೂರ್ತಿಯ ಸೆಲೆ: ಜಿಲ್ಲಾಧಿಕಾರಿ ಮಂಜುನಾಥ್‌

ಭಗೀರಥ ಮಹರ್ಷಿ ಜಯಂತಿ
Last Updated 11 ಮೇ 2019, 13:17 IST
ಅಕ್ಷರ ಗಾತ್ರ

ಕೋಲಾರ: ‘ಮನುಷ್ಯ ಧೃತಿಗೆಡದೆ ಭಗೀರಥನ ಹಾದಿಯಲ್ಲಿ ಸಾಗಿದರೆ ಯಶಸ್ಸು ಶತಸಿದ್ಧ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತವು ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ ಭಗೀರಥ ಮಹರ್ಷಿ ಜಯಂತಿಯಲ್ಲಿ ಮಾತನಾಡಿ, ‘ಯಾವುದೇ ಕೆಲಸ ಮಾಡುವಾಗ ಬದ್ಧತೆ ಇದ್ದರೆ ಸಾಧನೆ ಸಾಧ್ಯ ಎಂಬುದಕ್ಕೆ ಭಗೀರಥ ಮಹರ್ಷಿ ಒಳ್ಳೆಯ ನಿದರ್ಶನ’ ಎಂದರು.

‘ರಾಮಾಯಣದಲ್ಲಿ ಭಗೀರಥ ಮಹರ್ಷಿಯ ಕಥೆ ಬರುತ್ತದೆ. ಶಿವನ ಜಡೆಯಲ್ಲಿದ್ದ ಗಂಗೆಯನ್ನು ಧರೆಗೆ ತಂದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರ ಪ್ರಯತ್ನಶೀಲತೆಯು ಭಗೀರಥ ಪ್ರಯತ್ನ ಎಂಬ ನುಡಿಗಟ್ಟಾಗಿ ಸ್ಫೂರ್ತಿಯ ಸೆಲೆಯಾಗಿದೆ. ಗುರುಭಕ್ತಿ, ಏಕಾಗ್ರತೆ ಮತ್ತು ತಪೋನಿಷ್ಠೆಯಲ್ಲಿ ಭಗೀರಥ ಮಹರ್ಷಿ ಆದರ್ಶರಾಗಿದ್ದು, ಅವರ ಹಾದಿಯಲ್ಲಿ ಮನುಕುಲ ಸಾಗಬೇಕು’ ಎಂದು ಸಲಹೆ ನೀಡಿದರು.

‘ಉಪ್ಪಾರ ಜನಾಂಗದವರು ಭಗೀರಥರನ್ನು ತಮ್ಮ ಕುಲದ ಮೂಲ ಪುರುಷನೆಂದು ಆರಾಧಿಸುತ್ತಿದ್ದಾರೆ. ಸಮುದಾಯದವರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಭವಿಷ್ಯ ಉಜ್ವಲಗೊಳಿಸಬೇಕು. ಜತೆಗೆ ಸರ್ಕಾರದ ಸವಲತ್ತು ಸದ್ಬಳಕೆ ಮಾಡಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು’ ಎಂದು ಕಿವಿಮಾತು ಹೇಳಿದರು.

ಆರಾಧ್ಯ ಕುಲದೈವ

‘ಭಗೀರಥ ಮಹರ್ಷಿಯನ್ನು ಉಪ್ಪಾರ ಸಮಾಜದವರು ತಮ್ಮ ಆರಾಧ್ಯ ಕುಲದೈವವೆಂದು ಒಪ್ಪಿಕೊಂಡು ಪ್ರತಿ ವರ್ಷ ಜಯಂತಿ ಆಚರಿಸುತ್ತಿದ್ದಾರೆ. ರಾಜ್ಯ ಸರ್ಕಾರ ಭಗೀರಥ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸುತ್ತಿದೆ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ನಿಕಟಪೂರ್ವ ಅಧ್ಯಕ್ಷ ಜೆ.ಜಿ.ನಾಗರಾಜ್‌ ವಿವರಿಸಿದರು.

‘12ನೇ ಶತಮಾನದಲ್ಲಿ ಸಜ್ಜಳ ಭಾಸಂತ ಎಂಬ ವಚನಕಾರರು ಬಸವೇಶ್ವರರ ಸಮಕಾಲೀನರಾಗಿದ್ದರು. ಆಗಲೇ ಉಪ್ಪಾರ ಜಾತಿಯ ಕಲ್ಪನೆ ಇತ್ತು. ಈಗ ದಕ್ಷಿಣ ಕನ್ನಡ ಹೊರತುಪಡಿಸಿ ಉಳಿದ 29 ಜಿಲ್ಲೆಗಳಲ್ಲಿ ಉಪ್ಪಾರ ಸಮುದಾಯ ಇದೆ. ಬೆಳಗಾವಿ ಜಿಲ್ಲೆಯಲ್ಲಿ ಉಪ್ಪಾರ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ’ ಎಂದು ತಿಳಿಸಿದರು.

‘ಯಾವುದೇ ವಿಷಯದಲ್ಲಿ ಬದ್ಧತೆ ಇಲ್ಲದಿದ್ದರೆ ಏನೂ ಸಾಧಿಸಲು ಸಾಧ್ಯ ಆಗುವುದಿಲ್ಲ ಎಂಬುದು ಇತಿಹಾಸದಿಂದ ತಿಳಿಯುತ್ತದೆ. ರಾಜ್ಯದಲ್ಲಿ ಉಪ್ಪಾರ ಸಮುದಾಯದ ಜನಸಂಖ್ಯೆ ಸುಮಾರು 15 ಲಕ್ಷವಿದೆ. ಈ ಜನಾಂಗದವರು ಬೇರೆ ಬೇರೆ ಕ್ಷೇತ್ರದಲ್ಲಿ ತೊಡಗಿದ್ದು, ಇವರಿಗೆ ಸರ್ಕಾರ ಉನ್ನತ ಶಿಕ್ಷಣ ಮತ್ತು ಉದ್ಯೋಗಾವಕಾಶ ನೀಡಬೇಕು’ ಎಂದು ಮನವಿ ಮಾಡಿದರು.

ಶಿಕ್ಷಣವೊಂದೇ ಅಸ್ತ್ರ

‘ಮಹನೀಯರು ಯಾವುದೇ ಪ್ರಾಂತ್ಯ ಅಥವಾ ಜಾತಿಗೆ ಸೀಮಿತರಲ್ಲ. ಮಾನಸಿಕ ಗುಲಾಮಗಿರಿ ಹೋಗುವವರೆಗೂ ಜಾತೀಯತೆ ಪಿಡುಗು ನಿರ್ಮೂಲನೆ ಆಗುವುದಿಲ್ಲ. ಸಮಾಜದಲ್ಲಿ ಅಸಮಾನತೆ ಹೋಗಲಾಡಿಸಲು ಶಿಕ್ಷಣವೊಂದೇ ಅಸ್ತ್ರ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಚಕ್ರಪಾಣಿ ಅಭಿಪ್ರಾಯಪಟ್ಟರು.

‘ದುಡಿಮೆಗೆ ಸಾಕಷ್ಟು ದಾರಿಗಳಿವೆ. ಸಮ ಚಿತ್ತವಿದ್ದರೆ ದುಡಿಮೆಯ ಮಾರ್ಗಗಳು ತಾವಾಗಿಯೇ ತೆರೆಯುತ್ತವೆ. ಉಪ್ಪಾರ ಸಮಾಜವು ಶೈಕ್ಷಣಿಕವಾಗಿ ಮುಂದುವರಿದರೆ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ರತ್ನಯ್ಯ ಹೇಳಿದರು.

ಉಪ್ಪಾರ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT