ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರವು ಕಾರ್ಯಾಚರಣೆಯಲ್ಲಿ ಪಕ್ಷಪಾತ: ಧರಣಿ

Last Updated 24 ಜನವರಿ 2021, 13:33 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲಾಡಳಿತವು ಜಿಲ್ಲಾ ಕೇಂದ್ರದ ರಸ್ತೆ ಅಗಲೀಕರಣದಲ್ಲಿ ಉಳ್ಳವರಿಗೊಂದು, ಬಡವರಿಗೊಂದು ಎಂಬಂತೆ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿ ಜೈ ಭೀಮ್ ದಲಿತ ಸೇನೆ ಕಾರ್ಯಕರ್ತರು ನಗರದ ಕಾಲೇಜು ವೃತ್ತದಲ್ಲಿ ಶನಿವಾರ ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿದರು.

‘ಜಿಲ್ಲಾ ಕೇಂದ್ರದ ಮೆಕ್ಕೆ ವೃತ್ತದಿಂದ ಬಂಗಾರಪೇಟೆ ವೃತ್ತದವರೆಗೆ ರಸ್ತೆ ಅಗಲೀಕರಣ ಮಾಡಲಾಗುತ್ತಿದೆ. ಅಗಲೀಕರಣದಲ್ಲಿ ಪ್ರಭಾವಿ ವ್ಯಕ್ತಿಗಳ ಕಟ್ಟಡಗಳನ್ನು ತೆರವುಗೊಳಿಸದೆ ಬಡವರ ಮನೆಗಳನ್ನು ಮಾತ್ರ ತೆರವುಗೊಳಿಸಲಾಗುತ್ತಿದೆ’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

‘ಸಾಮಾಜಿಕ ನ್ಯಾಯವೆಂದರೆ ಎಲ್ಲರನ್ನೂ ಸಮಾನತೆಯಿಂದ ಕಾಣುವುದು. ಆದರೆ, ರಸ್ತೆ ಅಗಲೀಕರಣ ವಿಚಾರದಲ್ಲಿ ಅಧಿಕಾರಿಗಳು ಪಕ್ಷಪಾತಿಗಳಾಗಿದ್ದಾರೆ. ಶ್ರೀಮಂತರಿಂದ ಲಂಚ ಪಡೆದು ಕಟ್ಟಡಗಳನ್ನು ತೆರವುಗೊಳಿಸಿಲ್ಲ’ ಎಂದು ಜೈ ಭೀಮ್ ದಲಿತ ಸೇನೆ ರಾಜ್ಯ ಘಟಕದ ಅಧ್ಯಕ್ಷ ಜೆ.ಬಿ.ನಿರಂಜನ್ ದೂರಿದರು.

‘ಈಗಾಗಲೇ ರಸ್ತೆ ಅಗಲೀಕರಣ ಕಾಮಗಾರಿ ಆರಂಭವಾಗಿದೆ. ಕಾಮಗಾರಿಗಾಗಿ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು, ಡಿಡಿಪಿಐ ಕಚೇರಿ, ರಂಗಮಂದಿರದ ತಡೆಗೋಡೆ ತೆರವು ಮಾಡಲಾಗಿದೆ. ಬಡ ಜನರ ಮನೆಗಳು, ಅಂಗಡಿಗಳನ್ನು ತೆರವುಗೊಳಿಸಲಾಗಿದೆ. ಇದರಿಂದ ಸಾಕಷ್ಟು ಬಡ ಕುಟುಂಬಗಳು ಬೀದಿಗೆ ಪಾಲಾಗಿವೆ. ಆದರೆ, ಅಧಿಕಾರಿಗಳು ಖಾಸಗಿ ಆಸ್ಪತ್ರೆ ಮತ್ತು ಕೆಲ ಅಂಗಡಿಗಳನ್ನು ತೆರವು ಮಾಡುವ ಗೋಜಿಗೆ ಹೋಗಿಲ್ಲ’ ಎಂದು ಆರೋಪಿಸಿದರು.

ಅಧಿಕಾರಿಗಳ ಪಕ್ಷಪಾತ: ‘ಕೆಲ ಖಾಸಗಿ ವ್ಯಕ್ತಿಗಳ ಕಟ್ಟಡಗಳು ಅಳತೆ ಮೀರಿ ರಸ್ತೆಗೆ ಹೊಂದಿಕೊಂಡಂತಿವೆ. ಆ ಕಟ್ಟಡಗಳನ್ನು ತೆರವು ಮಾಡಿಲ್ಲ. ಮತ್ತೆ ಕೆಲ ಕಟ್ಟಡಗಳನ್ನು ನಿಗದಿಪಡಿಸಿದ ಅಳತೆಗಿಂತಲೂ ಕಡಿಮೆ ಅಳತೆಗೆ ತೆರವುಗೊಳಿಸಲಾಗಿದೆ. ಅಧಿಕಾರಿಗಳು ಕಟ್ಟಡಗಳ ಮಾಲೀಕರಿಂದ ಲಂಚ ಪಡೆದು ಪಕ್ಷಪಾತ ಮಾಡುತ್ತಿದ್ದಾರೆ’ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

‘ಕಾನೂನು ಚೌಕಟ್ಟಿನಲ್ಲಿ ಎಲ್ಲರಿಗೂ ಒಂದೇ ನ್ಯಾಯ. ಅಧಿಕಾರಿಗಳು ಹಣದಾಸೆಗೆ ಅಥವಾ ರಾಜಕೀಯ ಒತ್ತಡಕ್ಕೆ ಮಣಿಯದೆ ನಿಯಮಾನುಸಾರ ಕಟ್ಟಡಗಳನ್ನು ತೆರವು ಮಾಡಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಹೋರಾಟ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಸಂಘಟನೆ ಸದಸ್ಯರಾದ ಮಂಜುನಾಥ್, ಅರುಣ್, ಸಂತೊಷ್, ಮುರುಳಿ, ಅನಿಲ್, ರಾಮಣ್ಣ, ಕಿರಣ್‌ಕುಮಾರ್, ವಿನೋದ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT