ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಎ: ಮರು ಚಿಂತನೆ ಅಗತ್ಯ

ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಅಭಿಪ್ರಾಯ
Last Updated 16 ಜನವರಿ 2020, 13:29 IST
ಅಕ್ಷರ ಗಾತ್ರ

ಕೋಲಾರ: ‘ವ್ಯವಸ್ಥೆ ಪರವಾಗಿ ನಿಲ್ಲುವ ಸಾಹಿತಿಗಳು ಒಳ್ಳೆಯ ಬರಹಗಾರರಾಗಲು ಸಾಧ್ಯವಿಲ್ಲ, ಸಾಹಿತಿಗಳು ಆಂತರಿಕ ಲೆಕ್ಕ ಪರಿಶೋಧಕರಂತೆ ಆಳುವ ವರ್ಗದ ವಿರುದ್ಧ ಟೀಕೆ ಟಿಪ್ಪಣಿ ಮಾಡುತ್ತಾ ಅವರನ್ನು ಎಚ್ಚರಗೊಳಿಸಬೇಕು’ ಎಂದು ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಅಭಿಪ್ರಾಯಪಟ್ಟರು.

ಇಲ್ಲಿ ಗುರುವಾರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ‘ದೇಶ ಇಂದು ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿದೆ. ಆಳುವ ಮಂದಿ ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನೋಂದಣಿ ಪ್ರಕ್ರಿಯೆ ವಿರುದ್ಧ ನಿರಂತರವಾಗಿ ಪ್ರತಿಭಟನೆ ನಡೆಯುತ್ತಿವೆ. ಹೋರಾಟಗಾರರ ಕೂಗು ಏನೆಂದು ಕೇಳುವವರಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ದೇಶದಲ್ಲಿ ಪ್ರಚೋದನಾತ್ಮಕ ಹೇಳಿಕೆಗಳಿಗೆ ಕೊನೆ ಮೊದಲಿಲ್ಲ. ಬೇಡವಾದದ್ದನ್ನು ಮೈ ಮೇಲೆ ಎಳೆದುಕೊಂಡು ವಿವಾದ ಸೃಷ್ಟಿಸಲಾಗುತ್ತಿದೆ. ದೇಶದ ಉದ್ದಗಲಕ್ಕೂ ಅಶಾಂತಿ ಸೃಷ್ಟಿಯಾಗಿದೆ. ಕೇಂದ್ರದಲ್ಲಿ ಆಡಳಿತವು ಕಾನೂನಿನ ಪರಿಮಿತಿಯಲ್ಲಿ ನಡೆಯುತ್ತಿಲ್ಲ. ಕಾನೂನಿನ ಹಂಗಿಲ್ಲದೆ ಸರ್ಕಾರ ನಡೆಯುತ್ತಿದೆ. ಹೇಳಿದ್ದೇ ಕಾನೂನು, ಅದನ್ನು ಎಲ್ಲರೂ ಒಪ್ಪಿಕೊಳ್ಳಬೇಕೆಂಬ ಅರಾಜಕತೆ ಸೃಷ್ಟಿಯಾಗಿದೆ’ ಎಂದು ಕಿಡಿಕಾರಿದರು.

‘ಬುದ್ಧಿವಂತರು ಮತ್ತು ಮೇಧಾವಿಗಳು ಹೇಳುವ ಮಾತು ಸರ್ಕಾರದ ಕಿವಿಗೆ ಬೀಳುತ್ತಿಲ್ಲ. ಸಿಎಎ ಬಗ್ಗೆ ಮರು ಚಿಂತನೆ ಅಗತ್ಯವಿದೆ. ರಾಷ್ಟ್ರದಲ್ಲಿ ಇಷ್ಟೆಲ್ಲಾ ಚರ್ಚೆ, ಹೋರಾಟ ನಡೆಯುತ್ತಿದ್ದರೂ ಹಟಮಾರಿತನದಿಂದ ಸಿಎಎ ಜಾರಿಗೆ ತರುವುದು ದೇಶದ ಹಿತದೃಷ್ಟಿಯಿಂದ ಒಳ್ಳೆಯದಲ್ಲ. ಈ ಮಣ್ಣಿನ ಎಲ್ಲರ ಭಾವನೆ ಗೌರವಿಸುವುದು ಸರ್ಕಾರದ ಹಾಗೂ ಆಳುವವರ ಜವಾಬ್ದಾರಿ’ ಎಂದು ತಿಳಿಸಿದರು.

‘ಪರ ಧರ್ಮ ಸಹಿಷ್ಣುತೆ ಬೇಕು. ಮತ್ತೊಬ್ಬರನ್ನು ಗೌರವಿಸುವುದೇ ಮೂಲ ಸಂಸ್ಕೃತಿ ಆಗಬೇಕು. ದೇಶದೆಲ್ಲೆಡೆ ನಿರುದ್ಯೋಗ ಕಾಡುತ್ತಿದೆ. ಅನೇಕ ಗಂಭೀರ ಸಮಸ್ಯೆ ಎದುರಾಗಿವೆ. ಇದಕ್ಕೆಲ್ಲಾ ಸರ್ಕಾರವೇ ಉತ್ತರಿಸಬೇಕು. ಸರ್ಕಾರ ಭಂಡತನ ಬಿಡಬೇಕು. ಪ್ರಜೆಗಳ ಹಿತ ಕಾಪಾಡುವುದು ಪ್ರಭುತ್ವದ ಜವಾಬ್ದಾರಿ ಎಂಬುದನ್ನು ಅರಿಯಬೇಕು’ ಎಂದು ಕಿವಿಮಾತು ಹೇಳಿದರು.

ರಾಜಕೀಯ ಬೆರೆಸಬಾರದು: ‘ಬದುಕು ಮತ್ತು ಸಾಹಿತ್ಯ ಬೇರೆಯಲ್ಲ. ಇವೆರಡೂ ನಾಣ್ಯದ ಎರಡು ಮುಖಗಳಿದ್ದಂತೆ. ಹೀಗಾಗಿ ಎರಡೂ ಒಟ್ಟಿಗೆ ಹೋಗಬೇಕು. ಕನ್ನಡ ಭಾಷೆ ಅಭಿವೃದ್ಧಿಗೆ ಅಡ್ಡಿಯಾಗಬಾರದು. ಭಾಷೆ ವಿಚಾರದಲ್ಲಿ ರಾಜಕೀಯ ಬೆರೆಸಬಾರದು’ ಎಂದು ಸಲಹೆ ನೀಡಿದರು.

‘ಕೋಲಾರ ಜಿಲ್ಲೆಯ ಚಿನ್ನ, ರೇಷ್ಮೆ, ಹಾಲಿನ ಉತ್ಪಾದನೆಗೆ ಹೆಸರಾಗಿದೆ. ಜಿಲ್ಲೆಯು ಸಾಹಿತ್ಯ ಕ್ಷೇತ್ರಕ್ಕೂ ಅಪಾರ ಕೊಡುಗೆ ನೀಡಿದೆ. ಗಡಿ ಜಿಲ್ಲೆಗಳಾಗಿರುವ ಕೋಲಾರ ಮತ್ತು ಚಾಮರಾಜನಗರ ಜಿಲ್ಲೆಯು ಹೋಲಿಕೆಯಲ್ಲಿ ಒಂದೇ ಆಗಿವೆ. ಈ ಜಿಲ್ಲೆಗಳ ಸಂಸ್ಕೃತಿ ಒಂದೇ ರೀತಿಯಿದೆ. ಜತೆಗೆ ಎರಡೂ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದಲಿತರಿದ್ದಾರೆ’ ಎಂದರು.

ಅಸ್ಮಿತೆಗೆ ಧಕ್ಕೆ: ‘ರಾಜ್ಯದ ರೈತರ ನೋವು ಕನ್ನಡ ಅಸ್ಮಿತೆಯ ಗುರುತು. ಈಗ ಕನ್ನಡದ ಅಸ್ಮಿತೆಗೆ ಧಕ್ಕೆ ಬಂದಿದೆ. ಕನ್ನಡವು ಪರಂಪರೆ ಉದ್ದಕ್ಕೂ ಪ್ರತಿರೋಧ ನೋಡುತ್ತಲೇ ಬಂದಿದೆ. ಕುವೆಂಪುರ ಆಶಯದಂತೆ ಕರ್ನಾಟಕವು ಸರ್ವ ಜನಾಂಗದ ಶಾಂತಿಯ ತೋಟವಾಗಬೇಕು’ ಎಂದು ಸಮ್ಮೇಳನದ ನಿಕಟ ಪೂರ್ವ ಅಧ್ಯಕ್ಷರಾದ ವಕೀಲ ಸಿ.ಎಸ್‌.ದ್ವಾರಕನಾಥ್‌ ಆಶಿಸಿದರು.

‘ಕುವೆಂಪು 1980ರಲ್ಲೇ ಬುದ್ಧ ಪ್ರಜ್ಞೆಯ ಬಗ್ಗೆ ಮಾತನಾಡಿದ್ದರು. ಅವರು ಕನ್ನಡದ ಅಸ್ಮಿತೆಯ ಸಾಕ್ಷಿಪ್ರಜ್ಞೆಯಾಗಿದ್ದಾರೆ. ಜಿಲ್ಲೆಯಲ್ಲಿ ವೈದಿಕ ನೆಲೆಯಿದೆ. ಅಪರಾಧ ಖಂಡಿಸುವವನೇ ಅಪರಾಧ ಮಾಡಿದರೆ ಪ್ರಶ್ನಿಸುವವರು ಯಾರು? ದೇಶದಲ್ಲಿ ನಡೆಯುತ್ತಿರುವ ಅನ್ಯಾಯವನ್ನು ಪ್ರತಿಭಟಿಸಬೇಕು. ಅಸ್ಮಿತೆಯ ಉಳಿವಿಗೆ ಹೋರಾಟ ಅಗತ್ಯ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT