ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲು ಗಣಿಗಾರಿಕೆ ಅನುಮೋದನೆ ರದ್ದುಪಡಿಸಿ; ವಿಧಾನ ಪರಿಷತ್ ಸದಸ್ಯ ಗೋವಿಂದರಾಜು

ಅಧಿಕಾರಿಗಳ ಜತೆ ಚರ್ಚೆ: ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಹೇಳಿಕೆ
Last Updated 14 ಆಗಸ್ಟ್ 2021, 15:23 IST
ಅಕ್ಷರ ಗಾತ್ರ

ಕೋಲಾರ: ‘ತಾಲ್ಲೂಕಿನ ದೊಡ್ಡ ಅಯ್ಯೂರು ಗ್ರಾಮದ ಸರ್ವೆ ನಂಬರ್‌ 76ರಲ್ಲಿನ 11 ಎಕರೆ 20 ಗುಂಟೆ ಜಾಗವನ್ನು ಕಲ್ಲು ಗಣಿಗಾರಿಕೆಗೆ ಕೊಟ್ಟಿರುವ ಅನುಮೋದನೆ ರದ್ದುಪಡಿಸುವಂತೆ ಸರ್ಕಾರದ ಮಟ್ಟದಲ್ಲಿ ಅಧಿಕಾರಿಗಳ ಜತೆ ಚರ್ಚಿಸುತ್ತೇನೆ’ ಎಂದು ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಹೇಳಿದರು.

ಕಲ್ಲು ಗಣಿಗಾರಿಕೆಗೆ ಅನುಮೋದನೆ ನೀಡಲಾಗಿರುವ ಸ್ಥಳಕ್ಕೆ ಶನಿವಾರ ಭೇಟಿ ನೀಡಿ ಸ್ಥಳೀಯರಿಂದ ಮನವಿ ಸ್ವೀಕರಿಸಿ ಮಾತನಾಡಿ, ‘ಈ ಜಾಗವು ಧಾರ್ಮಿಕ ಕ್ಷೇತ್ರವಾಗಿದ್ದು, ಪ್ರತಿ ವರ್ಷ ಜಾತ್ರೆ ನಡೆಯುತ್ತದೆ. ಹೀಗಾಗಿ ಈ ಜಾಗವು ಗಣಿಗಾರಿಕೆಗೆ ಸೂಕ್ತವಲ್ಲ’ ಎಂದು ಅಭಿಪ್ರಾಯಪಟ್ಟರು.

‘ಗಣಿಗಾರಿಕೆ ನಡೆದರೆ ವಾಯುಮಾಲಿನ್ಯ ಉಂಟಾಗಿ ಪರಿಸರ ಹಾಳಾಗುತ್ತದೆ. ಹೀಗಾಗಿ ಈ ಜಾಗದಲ್ಲಿ ಗಣಿಗಾರಿಕೆಗೆ ನೀಡಿರುವ ಅನುಮೋದನೆ ರದ್ದುಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಮುಖ್ಯಮಂತ್ರಿಗಳಿಗೆ ಹಾಗೂ ಗಣಿ ಸಚಿವರಿಗೆ ಮನವಿ ಮಾಡುತ್ತೇನೆ’ ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದರು.

‘ಅಯ್ಯೂರು ಗ್ರಾಮದ ಬಳಿಯ ಬೆಟ್ಟದಲ್ಲಿ ಪ್ರಾಣಿಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಇಲ್ಲಿ ಕಲ್ಲು ಗಣಿಗಾರಿಕೆ ನಡೆದರೆ ಪ್ರಾಣಿ ಪಕ್ಷಿ ಸಂಕುಲಕ್ಕೆ ಸಮಸ್ಯೆಯಾಗುತ್ತದೆ. ಜತೆಗೆ ಗ್ರಾಮಸ್ಥರಿಗೂ ತೊಂದರೆಯಾಗುತ್ತದೆ. ಆದ ಕಾರಣ ಅಧಿಕಾರಿಗಳು ಸಾರ್ವಜನಿಕರ ಹಿತದೃಷ್ಟಿಯಿಂದ ಅನುಮೋದನೆ ರದ್ದುಪಡಿಸಬೇಕು. ಇಲ್ಲವಾದರೆ ಗ್ರಾಮಸ್ಥರು ಅಥವಾ ಸಂಘ ಸಂಸ್ಥೆಗಳು ನ್ಯಾಯಾಲಯದ ಮೆಟ್ಟಿಲೇರಿ ಗಣಿಗಾರಿಕೆ ನಡೆಸದಂತೆ ತಡೆಯಾಜ್ಞೆ ತರಬೇಕು’ ಎಂದು ಸಲಹೆ ನೀಡಿದರು.

‘ಅಯ್ಯೂರು ಬೆಟ್ಟದಲ್ಲಿ ಹಿಂದಿನಿಂದಲೂ ಧಾರ್ಮಿಕ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಈ ಜಾಗದಲ್ಲಿ ಗಣಿಗಾರಿಕೆಗೆ ಅವಕಾಶ ನೀಡದೆ ಪ್ರವಾಸೋದ್ಯಮ ಕ್ಷೇತ್ರವಾಗಿ ಅಭಿವೃದ್ಧಿಪಡಿಸುತ್ತೇವೆ. ಮಳೆಗಾಲದಲ್ಲಿ ಮಳೆ ನೀರು ಶೇಖರಣೆ ಮಾಡುವ ಮೂಲಕ ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುತ್ತೇವೆ’ ಎಂದರು.

ಕೃಷಿಗೆ ಸಮಸ್ಯೆ: ‘ಕಲ್ಲು ಗಣಿಗಾರಿಕೆ ನಡೆದರೆ ಗಾಳಿಯಲ್ಲಿ ಕೃಷಿಗೆ ಸಮಸ್ಯೆಯಾಗುತ್ತದೆ. ಗಣಿಗಾರಿಕೆ ದೂಳಿನಿಂದ ಬೆಳೆಗಳು ಹಾಳಾಗುತ್ತವೆ. ಅರಣ್ಯ ಮತ್ತು ಬೆಟ್ಟದಲ್ಲಿ ವಾಸಿಸುವ ವನ್ಯಜೀವಿಗಳು ಸಾಯುತ್ತವೆ. ಕ್ರಷರ್ ಆರಂಭಕ್ಕೆ ಅನುಮೋದನೆ ನೀಡಿರುವ ಜಾಗದಿಂದ 8 ಕೆರೆಗಳಿಗೆ ನೀರು ಬರುತ್ತದೆ. ಅಧಿಕಾರಿಗಳು ಅಂತಹ ಜಾಗ ನಾಶ ಮಾಡಲು ಹೊರಟಿದ್ದಾರೆ’ ಎಂದು ಅರಾಭಿಕೊತ್ತನೂರು ಗ್ರಾ.ಪಂ ಸದಸ್ಯ ನಂಜುಂಡಗೌಡ ಕಿಡಿಕಾರಿದರು.

ದೊಡ್ಡ ಅಯ್ಯೂರು ಗ್ರಾ.ಪಂ ಸದಸ್ಯ ಎಸ್.ಗೋಪಾಲಕೃಷ್ಣ, ಎಪಿಎಂಸಿ ಮಾಜಿ ಸದಸ್ಯ ಈರಣ್ಣ, ಅಯ್ಯೂರು, ವೆಂಕಟಾಪುರ, ಚಿಕ್ಕ ಅಯ್ಯೂರು, ಅರಾಭಿಕೊತ್ತನೂರು, ಗುಡ್ಡಣ್ಣಪುರ, ಖಾಜಿಕಲ್ಲಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT