ಶುಕ್ರವಾರ, ಅಕ್ಟೋಬರ್ 22, 2021
29 °C

ಮೋಡಿ ಮಾಡಿದ ಮುದವಾಡಿ ಕೆರೆ ಕೋಡಿ

ಆರ್.ಚೌಡರೆಡ್ಡಿ Updated:

ಅಕ್ಷರ ಗಾತ್ರ : | |

Prajavani

ಶ್ರೀನಿವಾಸಪುರ: ಮುದವಾಡಿ ಕೆರೆ ಎರಡು ದಶಕಗಳ ಬಳಿಕ ಕೋಡಿ ಹರಿಯುತ್ತಿದೆ. ವೇಗವಾಗಿ ಹರಿಯು ತ್ತಿರುವ ಕೋಡಿ ಜನರಿಗೆ ಮೋಡಿ ಮಾಡಿದೆ. ಪ್ರತಿದಿನ ಸಾವಿರಾರು ಜನ ಬಂದು ಕೊಡಿ ನೋಡಿ ಸಂತೋಷಪಡುತ್ತಿದ್ದಾರೆ.

ಜಿಲ್ಲೆಯಲ್ಲಿಯೇ ಎರಡನೆಯ ಅತಿದೊಡ್ಡ ಕೆರೆ ಎಂಬ ಖ್ಯಾತಿ ಹೊಂದಿರುವ ಮುದವಾಡಿ ಕೆರೆ, ಕೋಡಿ ಬಿದ್ದರೆ ವಿಶಾಲವಾದ ಗದ್ದೆ ಬಯಲಿನ ಸುತ್ತಲಿನ ಗ್ರಾಮಗಳ ರೈತರ ಕಣಜ ತುಂಬುತ್ತಿತ್ತು. ಕೆರೆ ನಾಟಿ ಮೀನಿನ ಕಣಜವಾಗಿತ್ತು. ಗಿರ್ಲು, ಕೊಡದನ, ಚೇಳು, ಪಕ್ಕೆ, ಉಣಸೆ ಮುಂತಾದ ಮೀನುಗಳು ಮೀನು ಪ್ರಿಯರ ಬಾಯಲ್ಲಿ ನೀರೂರಿಸುತ್ತಿದ್ದವು. ನೀರು ಕಡಿಮೆಯಾದಾಗ ಸುತ್ತಮುತ್ತಲಿನ ಗ್ರಾಮಗಳ ಜನರು ಸಾಂಘಿಕವಾಗಿ ಮೀನು ಹಿಡಿದು ಹಂಚಿಕೊಳ್ಳುತ್ತಿದ್ದರು.

ಕಾಲಾಂತರದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿ, ಎಲ್ಲ ಕೆರೆಗಳಂತೆಯೇ ಈ ಕೆರೆಯೂ ಬಯಲಾಯಿತು. ಬಂದ ಅಷ್ಟಿಷ್ಟು ನೀರು ತೂಬಿನ ಸಮೀಪವೂ ಬರುತ್ತಿರಲಿಲ್ಲ. ಹಾಗಾಗಿ, ಗದ್ದೆ ಬಯಲು ಹೊಲವಾಗಿ ಪರಿಣಮಿಸಿತು. ಕೆಲವರು ಕೊಳವೆಬಾವಿ ಕೊರೆದು ತೋಟ ಮಾಡತೊಡಗಿದರು. ಇನ್ನು ಕೆಲವರು ನೀಲಗಿರಿ ಮರ ಬೆಳೆಸಿ ಕೈತೊಳೆದುಕೊಂಡರು.

ಇತ್ತೀಚೆಗೆ ಕೆ.ಸಿ ವ್ಯಾಲಿ ನೀರು ಹರಿಸಿದ ಮೇಲೆ ಕೆರೆಯ ಸೌಂದರ್ಯ ಮರುಕಳಿಸಿತ್ತು. ನೀರು ಆಶ್ರಿತ ಹಕ್ಕಿಗಳ ಕಲರವ ಆರಂಭಗೊಂಡಿತ್ತು. ನೀರು ಕೋಳಿಗಳ ಈಜು ನೋಡುಗರ ಮನಸ್ಸಿಗೆ ಮುದ ನೀಡುತ್ತಿತ್ತು. ನಾಟಿ ಮೀನಿಗೆ ಬದಲಾಗಿ ಬಗೆ ಬಗೆಯ ಹೈಬ್ರೀಡ್‌ ಮೀನುಗಳು ಅಭಿವೃದ್ಧಿಗೊಂಡವು. ಈ ನಡುವೆ ಈ ಭಾಗದಲ್ಲಿ ಭಾರಿ ಮಳೆ ಸುರಿಯುತ್ತಿದೆ. ಅದರ ಪರಿಣಾಮವಾಗಿ ಈ ಸಾಲಿನ ಕೆರೆಗಳು ತುಂಬಿ ಹರಿಯು ತ್ತಿವೆ. ಕೆ.ಸಿ ವ್ಯಾಲಿ ನೀರಿಗೆ ಮಳೆ ನೀರು ಸೇರಿಕೊಂಡು ಕೋಡಿ ಹರಿಯುವ ವೇಗ ಹೆಚ್ಚಿದೆ. ಕೆರೆ ಶ್ರೀನಿವಾಸಪುರ-ಕೋಲಾರ ರಸ್ತೆಯ ಪಕ್ಕದಲ್ಲಿ ಇರುವುದರಿಂದ ಈ ರಸ್ತೆಯಲ್ಲಿ ಸಂಚರಿಸುವ ಎಲ್ಲ ವಾಹನಗಳೂ ರಸ್ತೆಯ ಮೇಲೆ ಹರಿಯುವ ಕೋಡಿಯಲ್ಲಿಯೇ ಸಂಚರಿಸಬೇಕು. ಹಾಗಾಗಿ, ಪ್ರತಿದಿನ ಸಾವಿರಾರು ಪ್ರಯಾಣಿಕರು ಕೋಡಿಯ ಎರಡೂ ದಡಗಳಲ್ಲಿ ವಾಹನಗಳನ್ನು ನಿಲ್ಲಿಸಿ, ಹರಿಯುವ ಕೋಡಿಯಲ್ಲಿ ಓಡಾಡಿ ಸೆಲ್ಫಿ ತೆಗೆದುಕೊಂಡು ಹೋಗುವುದು ಸರ್ವೇ ಸಾಮಾನ್ಯವಾಗಿದೆ. 

ಕೆಲವು ಸಲ ಕೋಡಿಯಲ್ಲಿ ವಾಹನ ದಟ್ಟಣೆ ಹೆಚ್ಚಿ ಟ್ರಾಫಿಕ್ ಜಾಮ್ ಆಗುವುದುಂಟು.
ರಸ್ತೆಯಲ್ಲಿ ಪ್ರಯಾಣಿಸುವ ಪ್ರಯಾಣಿಕರ ಜತೆಗೆ, ಸುತ್ತಮುತ್ತಲಿನ ಗ್ರಾಮಗಳ ಜನರು ವಿಶೇಷವಾಗಿ ಬಾಲಕ, ಬಾಲಕಿಯರು ಟ್ರ್ಯಾಕ್ಟರ್, ಟೆಂಪೊಗಳಲ್ಲಿ ಬಂದು ಕೆರೆ ಹಾಗೂ ಕೋಡಿಯ ಸೌಂದರ್ಯ ಸವಿದು ಹೋಗುತ್ತಾರೆ.

ಅಪರೂಪಕ್ಕೆ ಹರಿಯುತ್ತಿರುವ ಕೋಡಿ ಪ್ರವಾಸಿ ತಾಣವಾಗಿ ಪರಿಣಮಿಸಿದೆ. ಹರಿಯುವ ನೀರನ್ನು ಕಣ್ತುಂಬಿಸಿಕೊಳ್ಳಲು ಬರುವ ಜನರಿಗಾಗಿ ಕುರುಕಲು ತಿಂಡಿ, ಜೋಳದ ತೆನೆ, ಕಾಫಿ, ಟೀ ಮುಂತಾದವುಗಳನ್ನು ಮಾರುವ ಅಂಗಡಿಗಳು ತಲೆಯೆತ್ತಿವೆ.

ವಿಶಾಲವಾದ ತುಂಬಿದ ಮದವಾಡಿ ಕೆರೆ ನೋಡುಗರಿಗೆ ಮುದ ನೀಡುತ್ತಿದೆ. ಕೆರೆ ಕಟ್ಟೆಯ ಮೇಲೆ ನಿರ್ಮಿಸಲಾಗಿರುವ ರಸ್ತೆಬದಿಯಲ್ಲಿ ನಿಂತು ಸೂರ್ಯಾಸ್ತ ನೋಡುವುದು ನಿಜಕ್ಕೂ ಖುಷಿ ಕೊಡುತ್ತದೆ. ಕೆಲವರು ತೆಪ್ಪ, ನಾಡ ದೋಣಿಯಲ್ಲಿ ಕುಳಿತು ಕೆರೆಯಲ್ಲಿ ವಿಹರಿಸುತ್ತಾರೆ. ಜಲರಾಶಿಯ ಮಧ್ಯೆ ತಮ್ಮ ಸಂತೋಷವನ್ನು ಅಲೆ ಅಲೆಯಾಗಿ ತೇಲಿಬಿಡುತ್ತಾರೆ.

‘ನಾನು ಇದೇ ಮೊದಲ ಸಲ ಕೆರೆ ಕೋಡಿ ಹರಿಯುವುದನ್ನು ನೋಡುತ್ತಿದ್ದೇನೆ. ಮನಸ್ಸಿಗೆ ಸಂತೋಷ ವಾಗಿದೆ’ ಎಂದು ರವಿ ತಿಳಿಸಿದರು.

ಕೆಲವರು ಹರಿಯುವ ಕೋಡಿಗೆ ಅಡ್ಡಲಾಗಿ ಬಲೆ ಅಳವಡಿಸಿ ಮೀನು ಹಿಡಿಯುತ್ತಾರೆ. ಮೀನು ಪ್ರಿಯರು ಖರೀದಿಸಿ ಕೊಂಡೊಯ್ಯುತ್ತಾರೆ. ಕೆರೆ ಅಂಚಲ್ಲಿ ಗಾಳ ಹಾಕಿ ಮೀನು ಹಿಡಿಯುವವರಿಗೂ ಕೊರತೆಯಿಲ್ಲ. ಹರಿಯುವ ಕೋಡಿಯಲ್ಲಿ ನಿಂತ ಜನ, ಓಡುವ ನೀರನ್ನು ಕಂಡು ಹಾಡಿ ಹೊಗಳುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು