ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಲಾರ: ಬಿರು ಬಿಸಿಲಿಗೆ ಸತ್ತಿದ್ದು ಕೇವಲ 5 ಕೋಳಿ ಅಂತೆ!

ಸಾವಿರಾರು ಕೋಳಿ ಸಾವು–ಮಾಲೀಕರ ಆಕ್ರೋಶ; ‘ಪ್ರಜಾವಾಣಿ’ ವರದಿ ಬಳಿಕ ಪಶು ಇಲಾಖೆ ಅಧಿಕಾರಿಗಳು ಭೇಟಿ
Published 31 ಮೇ 2024, 6:08 IST
Last Updated 31 ಮೇ 2024, 6:08 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯಲ್ಲಿ ಏಪ್ರಿಲ್‌ ಹಾಗೂ ಮೇ ಮೊದಲ ವಾರದಲ್ಲಿ ತಾಪಮಾನ ಅತಿರೇಕಕ್ಕೆ ಹೋಗಿದ್ದರಿಂದ ಸಾವಿರಾರು ಕೋಳಿಗಳು ಸತ್ತು ಬಿರು ಬಿಸಿಲಿಗೆ ಕುಕ್ಕುಟೋದ್ಯಮ ತತ್ತರಿಸಿ ಹೋಗಿದೆ. ಕೋಳಿ ಫಾರಂ ಮಾಲೀಕರಿಗೆ ಲಕ್ಷಾಂತರ ನಷ್ಟ ಉಂಟಾಗಿದೆ.

ಈ ಸಂಬಂಧ ‘ಪ್ರಜಾವಾಣಿ’ಯಲ್ಲಿ ಮೇ 3ರಂದು ‘ಬಿರು ಬಿಸಿಲಿಗೆ ಸಾವಿರಾರು ಕೋಳಿ ಸಾವು’ ಎಂಬ ವಿಶೇಷ ವರದಿ ಪ್ರಕಟವಾಗಿತ್ತು. ವರದಿಗೆ ಸ್ಪಂದಿಸಿ ಸ್ಥಳಕ್ಕೆ ಭೇಟಿ ನೀಡಿದ್ದ ಪಶು ಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಅಧಿಕಾರಿಗಳು ‘ಉಷ್ಣಾಂಶ ಹೆಚ್ಚಾಗಿದ್ದರಿಂದ ಮೊಟ್ಟೆ ಇಡುವ ಐದು ಕೋಳಿಗಳು ಸತ್ತಿವೆ’ ಎಂದು ಮಾಹಿತಿಯನ್ನು ಮೇಲಧಿಕಾರಿಗಳಿಗೆ ನೀಡಿದ್ದಾರೆ.

ಇದಕ್ಕೆ ಕೋಳಿ ಫಾರಂ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಇದೊಂದು ಸುಳ್ಳು ಮಾಹಿತಿ. ಜಿಲ್ಲೆಯ ವಿವಿಧ ಕೋಳಿ ಫಾರಂಗಳಲ್ಲಿ ಸಾವಿರಾರು ಕೋಳಿ ಸತ್ತು ನಷ್ಟ ಉಂಟಾಗಿದೆ. ಸ್ಥಳೀಯ ಅಧಿಕಾರಿಗಳು, ಮೇಲಧಿಕಾರಿಗಳನ್ನು ದಾರಿ ತಪ್ಪಿಸುತ್ತಿದ್ದಾರೆ’ ಎಂದು ದೂರಿದ್ದಾರೆ.

ರಾಜ್ಯ ಪಶು ಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಆಯುಕ್ತರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವಂತೆ ಇಲಾಖೆಯ ಜಿಲ್ಲೆಯ ಉಪನಿರ್ದೇಶಕರಿಗೆ (ಆಡಳಿತ) ಸೂಚನೆ ನೀಡಿದ್ದರು.

ಅಧಿಕಾರಿಗಳು ವಿಧಾನ ಪರಿಷತ್‌ ಸದಸ್ಯ ಇಂಚರ ಗೋವಿಂದರಾಜು ಅವರ ತಿಮ್ಮಸಂದ್ರ ಗ್ರಾಮದ ಕೋಳಿ ಫಾರಂಗೆ ಹೋಗಿ ಪರಿಶೀಲನೆ ನಡೆಸಿದ್ದಾರೆ.

‘ಪ್ರಜಾವಾಣಿ ಪತ್ರಿಕೆ ವರದಿ ನಂತರ ಫಾರಂಗೆ ಭೇಟಿ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ವಿಪರೀತ ತಾಪಮಾನ ವೈಪರೀತ್ಯದಿಂದ, ಬಿಸಿ ಗಾಳಿಯಿಂದ ಕಳೆದ ಎರಡು ತಿಂಗಳಲ್ಲಿ ಸರಿ ಸುಮಾರು 600ರಿಂದ 800 ಕೋಳಿಗಳು ಸತ್ತಿರುವುದಾಗಿ ಗೋವಿಂದರಾಜು ಹೇಳಿದ್ದಾರೆ. ಕೋಳಿ ಸಾಕಣೆ ಮಾಡುವ ರೈತರ ಉನ್ನತಿ ಹಾಗೂ ಕಲ್ಯಾಣಕ್ಕಾಗಿ ಸರ್ಕಾರದಿಂದ ದೀರ್ಘಕಾಲಿಕ ಯೋಜನೆ ರೂಪಿಸುವಂತೆ ತಿಳಿಸಿರುತ್ತಾರೆ. ಅವರು ನೀಡಿರುವ ಸಲಹೆ ಸೂಚನೆಗಳನ್ನು ಉನ್ನತ ವೇದಿಕೆಯಲ್ಲಿ ಚರ್ಚಿಸಿ ಅನುಷ್ಠಾನಗೊಳಿಸಲಾಗುವುದು’ ಎಂದು ಇಲಾಖೆ ಆಯುಕ್ತರು ಸ್ಪಷ್ಟಪಡಿಸಿದ್ದಾರೆ. 

ಈ ಕುರಿತು ಪತ್ರಿಕೆಗೆ ಪ್ರತಿಕ್ರಿಯಿಸಿರುವ ಇಂಚರ ಗೋವಿಂದರಾಜು, ‘ತಾಪಮಾನ ಹೆಚ್ಚಿದ್ದರಿಂದ ನಮ್ಮ ಫಾರಂನಲ್ಲೇ ಸಾವಿರಕ್ಕೂ ಅಧಿಕ ಕೋಳಿಗಳು ಸತ್ತು ಹೋಗಿವೆ. ಬೇರೆಯವರ ಕೋಳಿ ಫಾರಂನಲ್ಲೂ ಇದೇ ಸಮಸ್ಯೆ ಉಂಟಾಗಿದೆ. ಮತ್ತೆ ಗುರುವಾರ (ಮೇ 30) ಮತ್ತೆ ಬಿಸಿಲು ಧಗೆ ಹೆಚ್ಚಾಗಿ 14 ದಿನಗಳ 175 ಮರಿಗಳು ಸತ್ತು ಹೋಗಿದೆ’ ಎಂದು ಹೇಳಿದರು.

ಏಪ್ರಿಲ್‌ ಅಂತ್ಯದಲ್ಲಿ ಜಿಲ್ಲೆಯಲ್ಲಿ 43.5 ಡಿಗ್ರಿ ಸೆಲ್ಸಿಯಸ್‌ ವರೆಗೆ ತಾಪಮಾನ ದಾಖಲಾಗಿತ್ತು. ಜೊತೆಗೆ ಬಿಸಿ ಗಾಳಿ ನಿರ್ಮಾಣವಾಗಿ ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆಯನ್ನೂ ನೀಡಿತ್ತು.

ಕೋಲಾರ ತಾಲ್ಲೂಕಿನ ಚೆಲುವನಹಳ್ಳಿ ಗ್ರಾಮದ ತಿಮ್ಮೇಗೌಡ ಎಂಬುವರ ಜಮೀನಿನಲ್ಲಿರುವ ಕೋಳಿ ಫಾರಂನಲ್ಲಿ ನೂರಾರು ಕೋಳಿಗಳು ಸತ್ತು ಹೋಗಿದ್ದವು. ಬಂಗಾರಪೇಟೆ ತಾಲ್ಲೂಕಿನ ವಿವಿಧ ಕೋಳಿ ಫಾರಂನಲ್ಲಿ ಎರಡು ಸಾವಿರಕ್ಕೂ ಅಧಿಕ ಕೋಳಿಗಳು ಮೃತಪಟ್ಟಿದ್ದವು. ಹೀಗಾಗಿ, ಕೆಲವರು ಕೋಳಿ ಫಾರಂಗೆ ಹವಾನಿಯಂತ್ರಿತ ವ್ಯವಸ್ಥೆ, ಫ್ಯಾನ್‌ ಅಳವಡಿಕೆ ಮಾಡಿಕೊಂಡಿದ್ದಾರೆ.

ಮೇ 3ರಂದು ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿದ್ದ ವರದಿ
ಮೇ 3ರಂದು ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿದ್ದ ವರದಿ
‘ಪ್ರಜಾವಾಣಿ’ ವರದಿಗೆ ಪಶು ಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸ್ಪಂದನೆ
‘ಪ್ರಜಾವಾಣಿ’ ವರದಿಗೆ ಪಶು ಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸ್ಪಂದನೆ
ಬಿಸಿಲ ಝಳಕ್ಕೆ ಸಿಲುಕಿ ಮೃತಪಟ್ಟ ಫಾರಂ ಕೋಳಿ
ಬಿಸಿಲ ಝಳಕ್ಕೆ ಸಿಲುಕಿ ಮೃತಪಟ್ಟ ಫಾರಂ ಕೋಳಿ
ಪಶುಪಾಲನಾ ಇಲಾಖೆ ಅಧಿಕಾರಿಗಳು ಪ್ರಕರಣ ಮುಚ್ಚಿ ಹಾಕಲು ಸುಳ್ಳು ಮಾಹಿತಿ ನೀಡಿದ್ದಾರೆ. ನಮ್ಮ ಬಳಿ ದಾಖಲೆಗಳಿವೆ. ಈ ಸಂಬಂಧ ಕೆಡಿಪಿ ಸಭೆಯಲ್ಲಿ ಪರಿಷತ್‌ನಲ್ಲಿ ಪ್ರಸ್ತಾಪಿಸುತ್ತೇನೆ
ಇಂಚರ ಗೋವಿಂದರಾಜು ವಿಧಾನ ಪರಿಷತ್‌ ಸದಸ್ಯ
ಹೆಚ್ಚು ಉಷ್ಣಾಂಶದ ಕಾರಣ ಏಪ್ರಿಲ್‌ ಕೊನೆಯಲ್ಲಿ 600 ಕೋಳಿ ಸತ್ತು ₹ 1 ಲಕ್ಷ ನಷ್ಟ ಉಂಟಾಯಿತು. ಯಾವುದೇ ಅಧಿಕಾರಿ ಈವರೆಗೆ ನಮ್ಮ ಕೋಳಿ ಫಾರಂಗೆ ಭೇಟಿ ಕೊಟ್ಟಿಲ್ಲ
ತಿಮ್ಮೇಗೌಡ ಕೋಳಿ ಫಾರಂ ಮಾಲೀಕ ಕೋಲಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT