ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಟ್‌ಫಂಡ್ ವಂಚನೆ: ಹಿಗ್ಗಾಮುಗ್ಗಾ ಥಳಿತ

ಠೇವಣಿ ಹಣ– ಬಡ್ಡಿ ಕೊಡದೆ ಸತಾಯಿಸುತ್ತಿದ್ದ ಮಾಲೀಕ
Last Updated 30 ಏಪ್ರಿಲ್ 2019, 10:12 IST
ಅಕ್ಷರ ಗಾತ್ರ

ಕೋಲಾರ: ಚಿಟ್‌ಫಂಡ್‌ ಹಾಗೂ ಚೀಟಿ ವ್ಯವಹಾರದ ಸೋಗಿನಲ್ಲಿ ಕೋಟ್ಯಂತರ ರೂಪಾಯಿ ಹಣ ಪಡೆದು ವಂಚಿಸಿದ್ದ ಶ್ರೀನಿವಾಸ್‌ ಎಂಬುವರಿಗೆ ಸಾರ್ವಜನಿಕರು ತಾಲ್ಲೂಕಿನ ವೇಮಗಲ್‌ನಲ್ಲಿ ಸೋಮವಾರ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರ ವಶಕ್ಕೆ ಒಪ್ಪಿಸಿದರು.

ಶ್ರೀನಿವಾಸ್‌, ಪದ್ಮಾವತಿ ಎಂಬ ಮಹಿಳೆಯ ಜತೆ ಸೇರಿ ವೇಮಗಲ್‌ನಲ್ಲಿ ಸೂರ್ಯೋದಯ ಕ್ರೆಡಿಟ್‌ ಕೋಆಪರೇಟಿವ್‌ ಸೊಸೈಟಿ ಹೆಸರಿನಲ್ಲಿ 3 ವರ್ಷಗಳ ಹಿಂದೆ ಸಂಸ್ಥೆ ಆರಂಭಿಸಿದ್ದರು. ಅಲ್ಲದೇ, ಕೋಲಾರ ನಗರದಲ್ಲಿ ತಿರುಮಲ ಸೌಹಾರ್ದ ಕ್ರೆಡಿಟ್‌ ಕೋಆಪರೇಟಿವ್‌ ಸೊಸೈಟಿ ಹೆಸರಿನಲ್ಲಿ ಸಂಸ್ಥೆ ತೆರೆದಿದ್ದರು.

ಶ್ರೀನಿವಾಸ್‌ ಮತ್ತು ಪದ್ಮಾವತಿ ಶೇ 10ರಷ್ಟು ಬಡ್ಡಿ ಕೊಡುವುದಾಗಿ ನಂಬಿಸಿ 50ಕ್ಕೂ ಹೆಚ್ಚು ಮಹಿಳೆಯರಿಂದ ಸುಮಾರು ₹ 1.50 ಕೋಟಿ ಠೇವಣಿ ಇರಿಸಿಕೊಂಡಿದ್ದರು. ಸಂಸ್ಥೆಯಲ್ಲಿ ಸ್ಥಳೀಯರಿಗೆ ಉದ್ಯೋಗ ಕೊಟ್ಟು ಗ್ರಾಹಕರನ್ನು ಆಕರ್ಷಿಸಿ ಠೇವಣಿ ಸಂಗ್ರಹಿಸಿದ್ದರು. ಆರಂಭದಲ್ಲಿ ಕೆಲ ತಿಂಗಳು ಗ್ರಾಹಕರಿಗೆ ಬಡ್ಡಿ ಕೊಟ್ಟಿದ್ದರು. ಹೀಗಾಗಿ ಅವರನ್ನು ನಂಬಿದ ಗ್ರಾಹಕರು ಹೆಚ್ಚಿನ ಹಣ ಹೂಡಿಕೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಶ್ರೀನಿವಾಸ್‌ ಏಳೆಂಟು ತಿಂಗಳಿಂದ ಗ್ರಾಹಕರಿಗೆ ಬಡ್ಡಿ ಹಣ ಕೊಡದೆ ಸತಾಯಿಸುತ್ತಿದ್ದರು. ಇದರಿಂದ ಬೇಸರಗೊಂಡ ಗ್ರಾಹಕರು ಠೇವಣಿ ಹಣ ಹಿಂದಿರುಗಿಸುವಂತೆ ಒತ್ತಾಯಿಸುತ್ತಿದ್ದರು. ಆದರೆ, ಅವರು ಗ್ರಾಹಕರ ಕೈಗೆ ಸಿಗದೆ ಕದ್ದುಮುಚ್ಚಿ ಓಡಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಶ್ರೀನಿವಾಸ್‌ ಸೋಮವಾರ ಮಧ್ಯಾಹ್ನ ವೇಮಗಲ್‌ನಲ್ಲಿನ ಸಂಸ್ಥೆಯ ಕಚೇರಿಗೆ ಬಂದಿರುವ ಸಂಗತಿ ತಿಳಿದ ಗ್ರಾಹಕರು ಅಲ್ಲಿಗೆ ಧಾವಿಸಿ ಬಂದು ಅವರಿಗೆ ಚಪ್ಪಲಿಯಿಂದ ಹೊಡೆದಿದ್ದಾರೆ. ಅಲ್ಲದೇ, ಕಚೇರಿಯಿಂದ ಹೊರಗೆ ಎಳೆದುಕೊಂಡು ಬಂದು ಕಪಾಳಮೋಕ್ಷ ಮಾಡಿದ್ದಾರೆ.

ಸಮಸ್ಯೆಯಾಗಿದೆ: ‘ಅನಾರೋಗ್ಯದ ಕಾರಣ ಕೆಲ ತಿಂಗಳಿಂದ ಕಚೇರಿಗೆ ಬರಲು ಸಾಧ್ಯವಾಗಿಲ್ಲ. ನನಗೆ ಶಸ್ತ್ರಚಿಕಿತ್ಸೆಯಾಗಿದ್ದ ಕಾರಣ ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದೆ. ನನ್ನಿಂದ ಹಣ ಪಡೆದವರು ವಾಪಸ್‌ ಕೊಡದೆ ಬೆದರಿಕೆ ಹಾಕುತ್ತಿದ್ದಾರೆ. ಹೀಗಾಗಿ ಬಡ್ಡಿ ಕೊಡಲು ಮತ್ತು ಠೇವಣಿ ಹಿಂದಿರುಗಿಸಲು ಸಮಸ್ಯೆಯಾಗಿದೆ’ ಎಂದು ಶ್ರೀನಿವಾಸ್‌ ಗ್ರಾಹಕರ ಎದುರು ಅಲವತ್ತುಕೊಂಡರು.

‘ನಾನು ಯಾರಿಗೂ ಮೋಸ ಮಾಡಲ್ಲ, ತಲೆಮರೆಸಿಕೊಂಡಿಲ್ಲ. 2 ತಿಂಗಳು ಕಾಲಾವಕಾಶ ಕೊಡಿ. ಬಡ್ಡಿಯ ಜತೆ ಠೇವಣಿ ಹಣ ಸಹ ಹಿಂದಿರುಗಿಸುತ್ತೇನೆ’ ಎಂದು ಶ್ರೀನಿವಾಸ್‌ ಮನವಿ ಮಾಡಿದರು. ಆದರೆ, ಅವರನ್ನು ನಂಬದ ಗ್ರಾಹಕರು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದರು.

ಬಳಿಕ ವೇಮಗಲ್‌ ಠಾಣೆಗೆ ಎಳೆದೊಯ್ದು ಪೊಲೀಸರ ವಶಕ್ಕೆ ಒಪ್ಪಿಸಿದರು. ಪೊಲೀಸರು ಗ್ರಾಹಕರ ದೂರು ಆಧರಿಸಿ ತನಿಖೆ ಆರಂಭಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT