ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಾಮಣಿ | ನಗರಸಭೆ: ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನೆನಗುದಿಗೆ

Published 19 ಡಿಸೆಂಬರ್ 2023, 5:41 IST
Last Updated 19 ಡಿಸೆಂಬರ್ 2023, 5:41 IST
ಅಕ್ಷರ ಗಾತ್ರ

ಚಿಂತಾಮಣಿ: ನಗರಸಭೆಯ ಮೊದಲ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷರ ಅವಧಿ ಮುಕ್ತಾಯವಾಗಿ ಸುಮಾರು 8 ತಿಂಗಳಾಗಿದ್ದು, ಸಾರ್ವಜನಿಕ ಕೆಲಸ ಕಾರ್ಯಗಳು ವಿಳಂಬವಾಗಿ ಸಾಗುತ್ತಿವೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮೊದಲ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷರ ಅವಧಿಯು 2023ರ ಮೇ 1 ಕ್ಕೆ ಮುಕ್ತಾಯವಾಗಿದ್ದು, ಜಿಲ್ಲಾಧಿಕಾರಿಯನ್ನು ನಗರಸಭೆಯ ಆಡಳಿತಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಎರಡನೇ ಅವಧಿಯ ಮೀಸಲಾತಿ ಪ್ರಕ್ರಿಯೆ ಪೂರ್ಣಗೊಳಿಸಿ ಪ್ರಕಟಿಸದ ಕಾರಣ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನೆನಗುದಿಗೆ ಬಿದ್ದಿದೆ. ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. 

ನಗರಸಭೆಯಲ್ಲಿ ಜನಪ್ರತಿನಿಧಿಗಳ ಆಡಳಿತವಿಲ್ಲ. ಅಧಿಕಾರಿಗಳ ಹಿಡಿತದಲ್ಲಿ ಆಡಳಿತ ನಡೆಯುತ್ತಿದ್ದು ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದನೆ ದೊರೆಯುತ್ತಿಲ್ಲ ಎಂಬ ಆರೋಪಗಳು ವ್ಯಾಪಕವಾಗಿ ವ್ಯಕ್ತವಾಗಿವೆ. ನಗರಸಭೆ ಆಡಳಿತಾಧಿಕಾರಿಯಾಗಿ ಜಿಲ್ಲಾಧಿಕಾರಿ ಹೆಚ್ಚುವರಿ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಇಡೀ ಜಿಲ್ಲೆಯ ಕೆಲಸದ ಒತ್ತಡಗಳ ನಡುವೆ ನಗರಸಭೆಯ ಆಡಳಿತದ ಬಗ್ಗೆ ಗಮನಹರಿಸಬೇಕಾದ ಅನಿವಾರ್ಯತೆ ಸೃಷ್ಠಿಯಾಗಿದೆ. ಅಧಿಕಾರ ವಹಿಸಿಕೊಂಡು ಸುಮಾರು 8 ತಿಂಗಳಾದರೂ ಒಮ್ಮೆಯೂ ನಗರಸಭೆಗೆ ಭೇಟಿ ನೀಡಿಲ್ಲ. ನಗರದ 31 ವಾರ್ಡ್‌ಗಳ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ ತೀರ್ಮಾನಗಳನ್ನು ಕೈಗೊಳ್ಳಬೇಕಾಗಿದ್ದ ಒಂದೂ ಸಾಮಾನ್ಯ ಸಭೆ ಕೂಡ ನಡೆದಿಲ್ಲ. ಅಭಿವೃದ್ಧಿ ಕುಂಠಿತವಾಗಿದೆ ಎಂದು ನಾಗರಿಕರು ಬೇಸರ ವ್ಯಕ್ತಪಡಿಸುತ್ತಾರೆ.

ಅಧ್ಯಕ್ಷ, ಉಪಾಧ್ಯಕ್ಷರಿಲ್ಲದೆ ಅಧಿಕಾರಿಗಳು ನಗರಸಭೆ ಸದಸ್ಯರ ಮಾತಿಗೆ ಕಿವಿಗೊಡುತ್ತಿಲ್ಲ. ಅಧಿಕಾರಿಗಳು ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ. ಸರ್ಕಾರದ ನಿಧಾನಗತಿಯಿಂದಾಗಿ ನಗರಸಭೆಯಲ್ಲಿ ಹೇಳುವವರು, ಕೇಳುವವರು ಇಲ್ಲ ಎನ್ನುವಂತಾಗಿದೆ ಎಂಬುದು ನಾಗರಿಕ ಸುರೇಶ್ ಅವರ ಮಾತಾಗಿದೆ.

ಈ ವರ್ಷ ಮಳೆ ಕೈಕೊಟ್ಟಿದ್ದು ಬರಗಾಲದ ಘೋಷಣೆ ಆಗಿದೆ. ಅಂತರ್ಜಲ ಮಟ್ಟ ಕುಸಿತದಿಂದ ಕೊಳವೆಬಾವಿಗಳಲ್ಲಿ ನೀರು ಕಡಿಮೆಯಾಗುತ್ತಿದೆ. ಕೆಲವು ಕಡೆ 8-10 ದಿನಗಳಿಗೆ ಒಮ್ಮೆ ನೀರು ಬಿಡುತ್ತಾರೆ. ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದೆ. ಈ ಬಗ್ಗೆ ಯಾರನ್ನು ಕೇಳುವುದು ಎಂಬುದು ರಾಜೀವ ನಗರದ ನಿವಾಸಿ ಲಕ್ಷ್ಮಣ್ ಅವರ ಪ್ರಶ್ನೆಯಾಗಿದೆ.

ವಾರ್ಡ್‌ಗೆ ಸಂಬಂಧಿಸಿದ ಕೆಲಸ ಕಾರ್ಯಗಳು ವಿಳಂಬವಾಗುತ್ತಿದ್ದು, ಕಸ ವಿಲೇವಾರಿ, ಕುಡಿಯುವ ನೀರಿನ ಪೂರೈಕೆ, ಒಳಚರಂಡಿ ಸಮಸ್ಯೆ, ಹೂಳು ತುಂಬಿದ ಚರಂಡಿಗಳ ದುರ್ನಾತದಿಂದ ನಗರದ ನಾಗರಿಕರು ಹೈರಾಣಾಗಿದ್ದಾರೆ. ಕನಿಷ್ಠ ಸೌಲಭ್ಯಗಳಿಲ್ಲದೆ ಜನರು ಪರದಾಡುತ್ತಿದ್ದಾರೆ. ಎರಡನೇ ಅವಧಿಯ ಮೀಸಲಾತಿ ವಿಳಂಬವಾದಷ್ಟು ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಮತ್ತಷ್ಟು ತೊಂದರೆಯಾಗುತ್ತದೆ. ಸದಸ್ಯರಿಗೆ ಅಧಿಕಾರವಿಲ್ಲದೆ ಚುನಾಯಿತ ಮಂಡಳಿ ಇದ್ದೂ ಇಲ್ಲದಂತಾಗಿದೆ.
ನಗರಸಭೆಗೆ 2019ರ ನವೆಂಬರ್ 12 ರಂದು ಚುನಾವಣೆ ನಡೆದಿತ್ತು. 2020ರ ನವೆಂಬರ್ 1 ರಂದು ಸುಮಾರು ಒಂದು ವರ್ಷಕ್ಕೆ ಮೊದಲ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆದಿತ್ತು. ಎರಡನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೂ ಒಂದು ವರ್ಷ ಕಾಯಬೇಕೇನೋ ಎಂದು ನಾಗರಿಕರು ವ್ಯಂಗ್ಯವಾಡುತ್ತಾರೆ. ಚುನಾಯಿತ ಪ್ರತಿನಿಧಿಗಳ ಆಡಳಿತ ಪ್ರಜಾಪ್ರಭುತ್ವದ ಜೀವಾಳವಾಗಿದೆ. ಸದಸ್ಯರಿಗೆ ಅಧಿಕಾರ ನೀಡದಿರುವುದು ಪ್ರಜಾಪ್ರಭುತ್ವದ ಅಣಕವಾಗಿದೆ ಎನ್ನುವ ಆರೋಪಗಳು ಕೇಳಿಬರುತ್ತಿವೆ.

ಸಮಸ್ಯೆಯನ್ನು ಪೌರಾಯುಕ್ತರ ಗಮನಕ್ಕೆ ತನ್ನಿ

ನಗರಸಭೆಯ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ಹಾಗೂ ಚುನಾವಣೆ ನಡೆಸುವುದಕ್ಕೆ ಸರ್ಕಾರ ತೀರ್ಮಾನ ಕೈಗೊಳ್ಳಬೇಕಾಗಿದೆ. ನಮಗೆ ಇರುವ ಇತಿಮಿತಿಗಳಲ್ಲಿ ಸಾಧ್ಯವಾದಷ್ಟು ಎಲ್ಲಾ ಕೆಲಸ ಕಾರ್ಯಗಳು ನಡೆಯುವಂತೆ ಮಾಡುತ್ತಿದ್ದೇವೆ. ನಾಗರಿಕರ ಸಮಸ್ಯೆಗಳಿಗೂ ಸ್ಪಂದಿಸುತ್ತಿದ್ದೇವೆ. ಸಾರ್ವಜನಿಕರು ಸಮಸ್ಯೆಗಳಿದ್ದರೆ ಪೌರಾಯುಕ್ತರ ಗಮನಕ್ಕೆ ತರಬೇಕು. ಜಿ.ಎನ್.ಚಲಪತಿ ಪೌರಾಯುಕ್ತ

ನಗರಸಭೆಯ ಮೊದನೇ ಅವಧಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅವಧಿ ಮುಗಿದು ಎಂಟು ತಿಂಗಳು ಕಳೆದಿದ್ದರೂ ಸರ್ಕಾರ ಎರಡನೇ ಅವಧಿಯ ಮೀಸಲಾತಿ ಪ್ರಕಟಿಸಿಲ್ಲ. ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ತೊಂದರೆಯಾಗಿದೆ.
ದೇವಳಂ ಶಂಕರ್, ನಗರಸಭೆ ಸದಸ್ಯ
ನಗರಸಭೆಯಲ್ಲಿ ಚುನಾಯಿತ ಅಧ್ಯಕ್ಷ ಉಪಾಧ್ಯಕ್ಷರಿದ್ದರೆ ವಾರ್ಡ್‌ ಸಮಸ್ಯೆಗಳನ್ನು ಹೇಳಿ ಬಗೆಹರಿಸುವ ಪ್ರಯತ್ನ ಮಾಡಬಹುದಾಗಿತ್ತು. ಈಗ ಅವರಲ್ಲದೆ ಸಮಸ್ಯೆಯಾಗಿದೆ. ಅಧಿಕಾರಿಗಳು ಕೈಗೆ ಸಿಗುವುದಿಲ್ಲ ಸಿಕ್ಕರೂ ಮನವಿಗೆ ಸ್ಪಂದಿಸುವುದಿಲ್ಲ.
ನರಸಿಂಹಯ್ಯ, ನಾಗರಿಕ, ಚಿಂತಾಮಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT