ಮಂಗಳವಾರ, ಮೇ 17, 2022
23 °C

ಶೌಚಾಲಯ ಟೆಂಡರ್ ಪಡೆದ ಪೌರ ಕಾರ್ಮಿಕ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆಜಿಎಫ್‌: ಸರ್ಕಾರಿ ಶೌಚಾಲಯವನ್ನು ಅಕ್ರಮವಾಗಿ ನಿರ್ವಹಣೆ ಮಾಡುತ್ತಿರುವ ಪೌರಕಾರ್ಮಿಕನನ್ನು ಸೇವೆಯಿಂದ ವಜಾಗೊಳಿಸಿ ಕಟ್ಟಡವನ್ನು ಮರಳಿ ನಗರಸಭೆಯ ವಶಕ್ಕೆ ಪಡೆಯಲು ಮಂಗಳವಾರ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಯಿತು.

ಪೌರಾಯುಕ್ತ ನವೀನಚಂದ್ರ ಮಾತನಾಡಿ, ‘₹ 15 ಲಕ್ಷ ವೆಚ್ಚದಡಿ ಬಸ್‌ನಿಲ್ದಾಣದಲ್ಲಿ ಸುಲಭ ಶೌಚಾಲಯ ನಿರ್ಮಾಣಕ್ಕೆ ತೀರ್ಮಾನಿಸಲಾಗಿತ್ತು. ಆದರೆ, ಶೌಚಾಲಯ ನಿರ್ವಹಣೆ ಮಾಡುತ್ತಿದ್ದವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಕಾನೂನು ಪ್ರಕಾರ ಕ್ರಮಕೈಗೊಳ್ಳಬೇಕೆಂದು ಕೋರ್ಟ್‌ ಸೂಚಿಸಿದೆ. ಆದ್ದರಿಂದ ಸರ್ಕಾರಿ ನೌಕರನಾಗಿದ್ದು, ಅಕ್ರಮವಾಗಿ ಕಟ್ಟಡದ ಉಸ್ತುವಾರಿ ಪಡೆದಿರುವ ಕಾರ್ಮಿಕನ ವಿರುದ್ಧ ಕ್ರಮಕೈಗೊಳ್ಳಲು ಸದಸ್ಯರು ಅನುಮೋದನೆ ನೀಡಬೇಕು’ ಎಂದು ಕೋರಿದರು.

ಅಧ್ಯಕ್ಷ ವಳ್ಳಲ್‌ ಮುನಿಸ್ವಾಮಿ ಮಾತನಾಡಿ, ‘2020ರ ಮಾರ್ಚ್‌ನಲ್ಲಿ ಶೌಚಾಲಯ ನಿರ್ವಹಣೆ ಮಾಡುತ್ತಿದ್ದ ಮಗೇಶ್ ಎಂಬಾತ ಒಂದು ವರ್ಷ ಹೆಚ್ಚಿನ ಅವಧಿ ಕೊಡಬೇಕು ಎಂದು ಕೋರಿದ್ದರು. ಅವರಿಗೆ ಆರು ತಿಂಗಳು ಹೆಚ್ಚುವರಿಯಾಗಿ ನಿರ್ವಹಣೆ ಮಾಡಲು ಅವಕಾಶ ನೀಡಲಾಗಿತ್ತು. ಪುನಃ ಆತನಿಗೆ ಶೌಚಾಲಯ ನಿರ್ವಹಣೆಗೆ ಅವಕಾಶ ನೀಡಬೇಕು ಎಂದು ಹಿಂದಿನ ಪ್ರಭಾರ ಪೌರಾಯುಕ್ತ ಶ್ರೀಧರ್ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು’ ಎಂದು
ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಿಂದ ಉತ್ತರ ಬರಲಿಲ್ಲ. ನಗರಸಭೆಯಿಂದ ಜಿಲ್ಲಾಧಿಕಾರಿಗೆ ಶಿಫಾರಸು ಮಾಡಿದ ಸಂದರ್ಭದಲ್ಲಿ ಸರ್ವರ್ ಮರ್ಚೆಂಟ್ ಪೌರಾಯುಕ್ತರಾಗಿದ್ದರು. ಶ್ರೀಧರ್ ಪೌರಾಯುಕ್ತರಾಗಿರಲಿಲ್ಲ. ಆದ್ದರಿಂದ ಆ ಪತ್ರಕ್ಕೆ ಬೆಲೆ ಇಲ್ಲ. ನಗರಸಭೆಯ ಬಸ್‌ನಿಲ್ದಾಣದಲ್ಲಿರುವ ಶೌಚಾಲಯವನ್ನು ಟೆಂಡರ್ ಮೂಲಕ ನಿರ್ವಹಣೆ ಮಾಡುತ್ತಿರುವ ವ್ಯಕ್ತಿ ನಗರಸಭೆಯಿಂದ ನೇರ ಪಾವತಿ ಪಡೆಯುವ ನೌಕರನಾಗಿದ್ದಾನೆ. ನೇರ ಪಾವತಿ ಪಡೆಯುವವರಿಗೆ ಟೆಂಡರ್‌ನಲ್ಲಿ ಭಾಗವಹಿಸುವ ಅರ್ಹತೆ ಇರುವುದಿಲ್ಲ ಎಂದು ಹೇಳಿದರು.

‘ನಗರಸಭೆಯ ನೌಕರಾಗಿದ್ದೂ, ಆತ ಕರ್ತವ್ಯಕ್ಕೆ ಹಾಜರಾಗದೆ ಶೌಚಾಲಯ ನಿರ್ವಹಣೆ ಮಾಡಿದ್ದು ಹೇಗೆ. ಆತನಿಗೆ ಪ್ರತಿನಿತ್ಯ ಹಾಜರಾತಿ ಹೇಗೆ ನೀಡಲಾಯಿತು’ ಎಂದು ಸದಸ್ಯ ಪ್ರವೀಣ್ ಪ್ರಶ್ನಿಸಿದರು.

‘ವಿನಾಕಾರಣ ಕಾಲಹರಣ ಮಾಡಿದರೆ ಬಸ್‌ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಶೌಚಾಲಯವೇ ಇಲ್ಲದಂತಾಗುತ್ತದೆ. ಕೂಡಲೇ ಅದನ್ನು ನಗರಸಭೆಯ ವಶಕ್ಕೆ ಪಡೆಯಿರಿ’ ಎಂದು ಸದಸ್ಯ ರಮೇಶ್‌ ಕುಮಾರ್ ಆಗ್ರಹಿಸಿದರು.

‘ನಗರಸಭೆ ಅಧಿವೇಶನದಲ್ಲಿ ನಡೆಯುವ ಪ್ರಕ್ರಿಯೆ ಮತ್ತು ನಿರ್ಣಯಗಳ ಪ್ರತಿಯನ್ನು ಸದಸ್ಯರಿಗೆ ಕೊಡಬೇಕೆಂದು ಹಲವಾರು ಬಾರಿ ಕೋರಿದ್ದರೂ ಉಪಯೋಗವಾಗಲಿಲ್ಲ. ಸಭೆಯ ನಡವಳಿಕೆಯ ಸಿ.ಡಿ ಕೊಡಿ ಎಂದರೆ ಮದುವೆಯ ಸಿ.ಡಿ ಕೊಡುತ್ತೀರಾ’ ಎಂದು ಸದಸ್ಯ ರಾಜೇಂದ್ರನ್‌ ಆಕ್ರೋಶ ವ್ಯಕ್ತಪಡಿಸಿದರು.

‘ಎಂ.ಜಿ. ಮಾರುಕಟ್ಟೆ ಹೊರತು ಪಡಿಸಿ ಉಳಿದೆಡೆ ಮಾಂಸದ ಅಂಗಡಿ ಇಡಲು ನಗರಸಭೆಯಿಂದ ಅನುಮತಿ ನೀಡುವುದಿಲ್ಲ. ಈ ಅನುಮತಿ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಮೈನಿಂಗ್ ಪ್ರದೇಶದ ಅಂಗಡಿಗಳಿಗೆ ಅನ್ವಯಿಸುವುದಿಲ್ಲ. ನಗರಸಭೆಯ ಅಂಗಡಿಗಳನ್ನು ಬಾಡಿಗೆ ತೆಗೆದುಕೊಂಡು, ಅದಕ್ಕೆ ಬಾಡಿಗೆ ಕಟ್ಟುತ್ತಿರುವ ಮಾಲೀಕರಿಗೆ ನಷ್ಟವುಂಟಾಗುತ್ತಿದೆ. ದೇವಾಲಯ, ಶಾಲೆ ಮತ್ತು ಸಾರ್ವಜನಿಕರಿಗೆ ತೊಂದರೆ ಯಾಗುವ ಜಾಗದಲ್ಲಿ ಇನ್ನು ಮುಂದೆ ಅನುಮತಿ ನೀಡುವುದಿಲ್ಲ’ ಎಂದು ವಳ್ಳಲ್‌ ಮುನಿಸ್ವಾಮಿ ಹೇಳಿದರು.

ಸಭೆಯಲ್ಲಿ ಉಪಾಧ್ಯಕ್ಷೆ ದೇವಿ ಗಣೇಶ್, ನಗರಸಭೆ ವಕೀಲ ವೆಂಕಟರಾಮಯ್ಯ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.