ಸೋಮವಾರ, ಏಪ್ರಿಲ್ 12, 2021
30 °C
ಅಂಬೇಡ್ಕರ್‌ ಭವನಕ್ಕೆ ಮೂಲಸೌಕರ್ಯ ಕಲ್ಪಿಸುವ ವಿಚಾರ: ಕಾವೇರಿದ ಚರ್ಚೆ

ಅಂಬೇಡ್ಕರ್‌ ಭವನಕ್ಕೆ ಮೂಲಸೌಕರ್ಯ ಕಲ್ಪಿಸುವ ವಿಚಾರ: ಸದಸ್ಯರ ಜಟಾಪಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಇಲ್ಲಿ ಗುರುವಾರ ನಗರಸಭೆ ತುರ್ತು ಸಭೆಯಲ್ಲಿ ಅಂಬೇಡ್ಕರ್‌ ಭವನಕ್ಕೆ ಮೂಲಸೌಕರ್ಯ ಕಲ್ಪಿಸುವ ವಿಚಾರವಾಗಿ ಸದಸ್ಯರ ನಡುವೆ ಜಟಾಪಟಿ ನಡೆದು ಸಭೆ ರಣಾಂಗಣವಾಯಿತು.

ಪಾಲಸಂದ್ರ ಲೇಔಟ್‌ ಬಳಿಯ ಅಂಬೇಡ್ಕರ್‌ ಭವನಕ್ಕೆ ಬಣ್ಣ ಬಳಿಯುವುದು, ರಸ್ತೆ ನಿರ್ಮಿಸುವುದು ಮತ್ತು ಮೂಲಸೌಕರ್ಯ ಕಲ್ಪಿಸುವ ವಿಚಾರವಾಗಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಸದಸ್ಯರ ವಾಗ್ವಾದ ವಿಕೋಪಕ್ಕೆ ತಿರುಗಿ ಪರಸ್ಪರರು ಕೈ ಮಿಲಾಯಿಸುವ ಹಂತ ತಲುಪಿದರು.

ಎನ್‌.ಅಂಬರೀಷ್‌, ಎಂ.ಸುರೇಶ್‌ಬಾಬು ಹಾಗೂ ಕೆಲ ಸದಸ್ಯರು ಸಭೆಯಲ್ಲಿ ಅಂಬೇಡ್ಕರ್‌ ಭವನಕ್ಕೆ ಮೂಲಸೌಕರ್ಯ ಕಲ್ಪಿಸುವ ವಿಚಾರ ಪ್ರಸ್ತಾಪಿಸಿ ಒಪ್ಪಿಗೆ ಸೂಚಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ಬಿ.ಎಂ.ಮುಬಾರಕ್, ‘ಅಂಬೇಡ್ಕರ್‌ ಭವನ ಅಭಿವೃದ್ಧಿಗೆ ಮೀಸಲಿಟ್ಟಿರುವ ಅನುದಾನ ಹಿಂಪಡೆಯಬೇಕು. ಆ ಅನುದಾನದಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ಅಥವಾ ಟ್ಯಾಬ್‌ ವಿತರಿಸಬೇಕು’ ಎಂದು ಆಗ್ರಹಿಸಿದರು.

ಇದಕ್ಕೆ ಕುಪಿತರಾದ ಸದಸ್ಯ ಅಂಬರೀಷ್‌, ‘ಅಂಬೇಡ್ಕರ್ ಭವನ ನಗರಸಭೆ ವ್ಯಾಪ್ತಿಯಲ್ಲಿ ಇಲ್ಲವೇ? ಅದರ ಅಭವೃದ್ಧಿಗೆ ಯಾಕೆ ವಿರೋಧ ಮಾಡುತ್ತೀರಿ?’ ಕಿಡಿಕಾರಿದರು.

ಆಗ ಮುಬಾರಕ್, ‘ನಾನು ಅಂಬೇಡ್ಕರ್ ವಿರೋಧಿಯಲ್ಲ. ಅಂಬೇಡ್ಕರ್‌ ಭವನ ಅರಹಳ್ಳಿ ಗ್ರಾ.ಪಂ ವ್ಯಾಪ್ತಿಯಲ್ಲಿದೆ. ಭವನದ ಅಭಿವೃದ್ಧಿಗೆ ಜಿ.ಪಂ, ಸಮಾಜ ಕಲ್ಯಾಣ ಇಲಾಖೆ ಅಥವಾ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಅನುದಾನ ಪಡೆಯಲು ಅವಕಾಶವಿದೆ. ಭವನಕ್ಕೆ ಮೀಸಲಿರುವ ಅನುದಾನವನ್ನು ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಬಳಸೋಣ’ ಎಂದು ಸಲಹೆ ನೀಡಿದರು.

ಕ್ರಿಮಿನಲ್ ಪ್ರಕರಣ: ಮತ್ತಷ್ಟು ಸಿಡಿಮಿಡಿಗೊಂಡ ಸದಸ್ಯರಾದ ರಾಕೇಶ್, ಅಂಬರೀಷ್‌, ಸುರೇಶ್‌ಬಾಬು, ‘ಅಂಬೇಡ್ಕರ್‌ ಭವನವು ನಗರಸಭೆ ವ್ಯಾಪ್ತಿಯಲ್ಲಿ ಇಲ್ಲವೆಂದರೆ ನಗರಸಭೆಯಿಂದ ಹೇಗೆ ಖಾತೆ ಮಾಡಿ ಕೊಟ್ಟಿದ್ದೀರಿ? ಅನುದಾನ ಮೀಸಲಿಟ್ಟು ಈಗ ಹೇಗೆ ಹಿಂಪಡೆಯುತ್ತೀರಿ’ ಎಂದು ಮುಬಾರಕ್‌ ವಿರುದ್ಧ ಮುಗಿಬಿದ್ದರು.

‘ನಗರಸಭೆಯ ಪ್ರತಿ ಸದಸ್ಯರು ಅಂಬೇಡ್ಕರ್‌ ರಚಿಸಿರುವ ಸಂವಿಧಾನದಡಿ ಆಯ್ಕೆಯಾಗಿ ಬಂದಿದ್ದೀರಿ. ಆದರೆ, ದುರುದ್ದೇಶಪೂರ್ವಕವಾಗಿ ಅಂಬೇಡ್ಕರ್‌ ಭವನದ ಅಭಿವೃದ್ಧಿಗೆ ಅಡ್ಡಗಾಲು ಹಾಕುತ್ತಿದ್ದೀರಿ. ಪರಿಶಿಷ್ಟ ಸದಸ್ಯರನ್ನು ಬೆದರಿಸುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು’ ಎಂದು ಪಟ್ಟು ಹಿಡಿದರು.

ಆಗ ಮುಬಾರಕ್‌ರ ಬೆನ್ನಿಗೆ ನಿಂತ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಮಂಜುನಾಥ್‌ ವಿರುದ್ಧ ಅಂಬರೀಷ್‌ ಬಣದ ಸದಸ್ಯರು ಹರಿಹಾಯ್ದರು. ಆಗ ಸದಸ್ಯರ ವಾಗ್ವಾದ ತಾರಕಕ್ಕೇರಿ ಪರಸ್ಪರರು ಕೈ ಮಿಲಾಯಿಸುವ ಹಂತ ತಲುಪಿದರು.

ಗೂಂಡಾಗಿರಿ ನಡೆಯಲ್ಲ: ಶರ್ಟ್‌ ಬಿಚ್ಚಿ ಬಾವಿಗಿಳಿದ ಅಂಬರೀಷ್‌, ‘ಇಲ್ಲಿ ನಿನ್ನ ಗೂಂಡಾಗಿರಿ ನಡೆಯಲ್ಲ. ಚುನಾಯಿತ ಜನಪ್ರತಿನಿಧಿಯಾಗಿ ಜವಾಬ್ದಾರಿಯುತವಾಗಿ ವರ್ತಿಸು’ ಎಂದು ಮಂಜುನಾಥ್‌ಗೆ ತಾಕೀತು ಮಾಡಿದರು. ಆಗ ಅಧ್ಯಕ್ಷೆ ಶ್ವೇತಾ, ಉಪಾಧ್ಯಕ್ಷ ಪ್ರವೀಣ್‌ಗೌಡ, ಇತರೆ ಸದಸ್ಯರು ಮಧ್ಯಪ್ರವೇಶಿಸಿ ಪರಸ್ಪರರನ್ನು ಸಮಾಧಾನಪಡಿಸಿದರು.

ಬಳಿಕ ಅಂಬೇಡ್ಕರ್‌ ಭವನದ ದಾಖಲೆಪತ್ರ ಪರಿಶೀಲಿಸಿದ ನಗರಸಭೆ ಆಯುಕ್ತ ಶ್ರೀಕಾಂತ್‌ ಅವರು, ‘ಅಂಬೇಡ್ಕರ್‌ ಭವನವು ನಗರಸಭೆ ವ್ಯಾಪ್ತಿಗೆ ಬರುತ್ತದೆ’ ಎಂದು ಸ್ಪಷ್ಟಪಡಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.