ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲೇಜು ಪುನರಾರಂಭ: ಹಾಜರಾತಿ ಕಡಿಮೆ

ಮೊದಲ ಡೋಸ್‌ ಕೋವಿಡ್‌ ಲಸಿಕೆ ಪಡೆದ ವಿದ್ಯಾರ್ಥಿಗಳಿಗೆ ಪ್ರವೇಶ
Last Updated 26 ಜುಲೈ 2021, 16:01 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯಲ್ಲಿ ಕೋವಿಡ್‌ ಕಾರಣಕ್ಕೆ 3 ತಿಂಗಳಿಂದ ಬಂದ್‌ ಆಗಿದ್ದ ಪದವಿ, ಸ್ನಾತಕೋತ್ತರ ಪದವಿ ಹಾಗೂ ಎಂಜಿನಿಯರಿಂಗ್‌ ಕಾಲೇಜುಗಳು ಸೋಮವಾರ ಪುನರಾರಂಭವಾದವು. ಆದರೆ, ಮೊದಲ ದಿನ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ತೀರಾ ಕಡಿಮೆಯಿತ್ತು.

ಜಿಲ್ಲಾ ಕೇಂದ್ರ ಸೇರಿದಂತೆ ಜಿಲ್ಲೆಯಾದ್ಯಂತ ವಿವಿಧ ಕಾಲೇಜುಗಳಲ್ಲಿ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಮಾತ್ರ ಕಾಲೇಜಿಗೆ ಬಂದರು. ಮೊದಲ ಡೋಸ್‌ ಕೋವಿಡ್‌ ಲಸಿಕೆ ಪಡೆದ ವಿದ್ಯಾರ್ಥಿಗಳಿಗೆ ಮಾತ್ರ ತರಗತಿಗೆ ಹೋಗಲು ಅವಕಾಶ ನೀಡಲಾಯಿತು.

ಕಾಲೇಜುಗಳ ಪ್ರವೇಶದ್ವಾರದಲ್ಲೇ ವಿದ್ಯಾರ್ಥಿಗಳ ಲಸಿಕೆ ಪ್ರಮಾಣಪತ್ರ ಪರಿಶೀಲಿಸಿ ಪ್ರವೇಶ ನೀಡಲಾಯಿತು. ಕಾಲೇಜು ಆವರಣ ಹಾಗೂ ತರಗತಿಗಳಲ್ಲಿ ಕೋವಿಡ್‌ ಸುರಕ್ಷತಾ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಲಾಯಿತು.

ಕಾಲೇಜಿನ ಪ್ರತಿ ಕೊಠಡಿಯನ್ನು ಬೆಳಿಗ್ಗೆಯೇ ಸ್ವಚ್ಛಗೊಳಿಸಿ ಸ್ಯಾನಿಟೈಸ್‌ ಮಾಡಲಾಯಿತು. ವಿದ್ಯಾರ್ಥಿಗಳು ಮಾಸ್ಕ್‌ ಧರಿಸಿ ಕಾಲೇಜಿಗೆ ಬಂದಿದ್ದರು. ಕಾಲೇಜುಗಳ ಪ್ರವೇಶ ದ್ವಾರದಲ್ಲೇ ವಿದ್ಯಾರ್ಥಿಗಳ ಕೈಗೆ ಸ್ಯಾನಿಟೈಸರ್‌ ಹಾಕಲಾಯಿತು. ವಿದ್ಯಾರ್ಥಿಗಳಿಗೆ ಅಂತರ ಕಾಯ್ದುಕೊಳ್ಳಲು ಅನುಕೂಲವಾಗುವಂತೆ ತರಗತಿಗಳಲ್ಲಿ ಮೇಜುಗಳ ವ್ಯವಸ್ಥೆ ಮಾಡಲಾಗಿತ್ತು.

ದೀರ್ಘ ಕಾಲದ ಬಳಿಕ ಕಾಲೇಜುಗಳು ಆರಂಭವಾದರೂ ವಿದ್ಯಾರ್ಥಿಗಳಲ್ಲಿ ಉತ್ಸಾಹ ಕಾಣಲಿಲ್ಲ. ಮೊದಲ ದಿನವಾದ ಕಾರಣ ಹಾಗೂ ವಿದ್ಯಾರ್ಥಿಗಳ ಹಾಜರಾತಿ ಕಡಿಮೆಯಿದ್ದ ಕಾರಣಕ್ಕೆ ಹೆಚ್ಚಿನ ಕಡೆ ತರಗತಿಗಳು ನಡೆಯಲಿಲ್ಲ. ಭೌತಿಕ ತರಗತಿಗೆ ಹಾಜರಾಗದ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಮೂಲಕ ತರಗತಿ ನಡೆಸಲಾಯಿತು.

ಕೋವಿಡ್‌ 2ನೇ ಅಲೆ ತೀವ್ರಗೊಂಡ ಕಾರಣ ಏಪ್ರಿಲ್‌ ತಿಂಗಳಲ್ಲಿ ತರಗತಿಗಳು ಸ್ಥಗಿತಗೊಂಡಿದ್ದವು. ಲಾಕ್‌ಡೌನ್‌ ನಡುವೆಯೂ ಆನ್‌ಲೈನ್‌ ತರಗತಿಗಳು ನಡೆದಿದ್ದವು. ದೀರ್ಘ ಕಾಲದ ಬಳಿಕ ಸೋಮವಾರ ಕಾಲೇಜಿಗೆ ಬಂದ ವಿದ್ಯಾರ್ಥಿಗಳು ಸಹಪಾಠಿಗಳ ಜತೆ ಸಂತಸ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT