ಕೋಲಾರ: ‘ಆಯುಷ್ಮಾನ್ ಭಾರತ್– ಆರೋಗ್ಯ ಕರ್ನಾಟಕ ಯೋಜನೆಯ ಗುರುತಿನ ಚೀಟಿಗೆ ಹೆಚ್ಚುವರಿ ಹಣ ಕೇಳಿದರೆ ಅಂತಹವರ ವಿರುದ್ಧ ಸಾರ್ವಜನಿಕರು ಸಹಾಯವಾಣಿಗೆ ಕರೆ ಮಾಡಿ ದೂರು ನೀಡಬಹುದು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎನ್.ವಿಜಯ್‌ಕುಮಾರ್ ತಿಳಿಸಿದರು.
ಇಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಆಯುಷ್ಮಾನ್ ಮತ್ತು ಆರೋಗ್ಯ ಚೀಟಿಗೆ ಕೇಂದ್ರಗಳಲ್ಲಿ ಶುಲ್ಕ ನಿಗದಿಪಡಿಸಲಾಗಿದೆ. ಚೀಟಿ ವಿತರಣೆಗೆ ಯಾವುದೇ ಕ್ಯಾಂಪ್ ಏರ್ಪಡಿಸಿಲ್ಲ. ಯಾರಾದರೂ ಕ್ಯಾಂಪ್ ಆಯೋಜಿಸಿರುವುದಾಗಿ ಹೇಳಿದರೆ ಸಾರ್ವಜನಿಕರು ನಂಬಬಾರದು’ ಎಂದರು.
‘ಚೀಟಿ ನೀಡುವ ಉದ್ದೇಶಕ್ಕೆ ಜಿಲ್ಲಾಸ್ಪತ್ರೆ, ತಾಲ್ಲೂಕು ಮಟ್ಟದ ಸಾರ್ವಜನಿಕ ಆಸ್ಪತ್ರೆ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ₹ 10 ಶುಲ್ಕ ಪಡೆದು ಬಿಳಿ ಹಾಳೆ ಮೇಲೆ ಮಾಹಿತಿ ಮುದ್ರಿಸಿ ನೀಡಲಾಗುತ್ತದೆ. ಸೇವಾ ಸಿಂಧು ಯೋಜನೆಯಡಿ ಜಿಲ್ಲೆಯಲ್ಲಿ 140 ಕೇಂದ್ರಗಳಿಗೆ ಸೇವೆ ಒದಗಿಸಲು ಅನುಮತಿ ನೀಡಲಾಗಿದೆ. ಪ್ರಸ್ತುತ 46 ಕೇಂದ್ರಗಳಲ್ಲಿ ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ ಕಾರ್ಡ್‌ಗಳನ್ನು ₹ 10 ದರದಲ್ಲಿ ಕಾಗದದ ಕಾರ್ಡ್ ಹಾಗೂ ₹ 35ಕ್ಕೆ ಪಿವಿಸಿ ಕಾರ್ಡ್ ಪಡೆಯಬಹುದು’ ಎಂದು ವಿವರಿಸಿದರು.
‘ನಿಗದಿತ ಶುಲ್ಕಕ್ಕಿಂತ ಹೆಚ್ಚುವರಿ ಹಣ ಪಡೆದಲ್ಲಿ 080 44554455 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ದೂರು ಸಲ್ಲಿಸಬಹುದು. ಹೆಚ್ಚುವರಿಯಾಗಿ ಹಣ ಪಡೆಯುತ್ತಿರುವ ಬಗ್ಗೆ ಸಾಕಷ್ಟು ದೂರು ಬಂದಿರುವ ಹಿನ್ನೆಲೆಯಲ್ಲಿ ಬಂಗಾರಪೇಟೆಯ 2 ಕೇಂದ್ರ ಮತ್ತು ಮುಳಬಾಗಿಲಿನ 1 ಕೇಂದ್ರವನ್ನು ಮುಚ್ಚಿಸಲಾಗಿದೆ. ಬೇರೆ ಕೇಂದ್ರಗಳ ಬಗ್ಗೆ ದೂರು ಬಂದರೆ ಮುಲಾಜಿಲ್ಲದೆ ಶಿಸ್ತುಕ್ರಮ ಜರುಗಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.
1,53,253 ಮಂದಿಗೆ ಕಾರ್ಡ್: ‘ಜಿಲ್ಲೆಯಲ್ಲಿ ಏ.23ರ ಅಂತ್ಯಕ್ಕೆ 1,53,253 ಮಂದಿ ಆಯುಷ್ಮಾನ್ ಕಾರ್ಡ್ ಪಡೆದಿದ್ದಾರೆ. ಕೋಲಾರ ತಾಲ್ಲೂಕಿನಲ್ಲಿ 1,06,209 ಮಂದಿ, ಶ್ರೀನಿವಾಸಪುರ 11,860, ಮುಳಬಾಗಿಲು 6,541, ಬಂಗಾರಪೇಟೆ 14,153, ಕೆಜಿಎಫ್ 9,337 ಮತ್ತು ಮಾಲೂರು ತಾಲ್ಲೂಕಿನಲ್ಲಿ 5,153 ಮಂದಿ ಕಾರ್ಡ್ ಪಡೆದಿದ್ದಾರೆ’ ಎಂದು ವಿವರಿಸಿದರು.
‘ಆಯುಷ್ಮಾನ್ ಭಾರತ್– ಆರೋಗ್ಯ ಕರ್ನಾಟಕ ಯೋಜನೆಯು ಸಾರ್ವತ್ರಿಕ ಯೋಜನೆಯಾಗಿದೆ. ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಬಡವರಿಗೆ ವಾರ್ಷಿಕ ₹ 5 ಲಕ್ಷದವರೆಗೆ ಹಾಗೂ ಎಪಿಎಲ್ ಪಡಿತರ ಚೀಟಿ ಹೊಂದಿರುವವರಗೆ ಶೇ 30ರಷ್ಟು ಚಿಕಿತ್ಸಾ ವೆಚ್ಚ ಭರಿಸಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ವತಿಯಿಂದ ನೊಂದಾಯಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.
ಕಡ್ಡಾಯವಲ್ಲ: ‘ಯೋಜನೆಯಡಿ ಆರೋಗ್ಯ ಸೇವೆ ಪಡೆಯಲು ಆಯುಷ್ಮಾನ್ ಭಾರತ್– ಆರೋಗ್ಯ ಕರ್ನಾಟಕ ಕಾರ್ಡ್ ಕಡ್ಡಾಯವಲ್ಲ. ರೋಗಿಗಳು ತಮ್ಮ ಬಳಿ ಇರುವ ಪಡಿತರ ಚೀಟಿ ಅಥವಾ ಆಧಾರ್ ಕಾರ್ಡ್ ತೋರಿಸಿ ಚಿಕಿತ್ಸೆ ಪಡೆಯಬಹುದು’ ಎಂದರು.
‘ಯೋಜನೆ ಸೇವೆಯನ್ನು ಸುಲಲಿತವಾಗಿ ಮತ್ತು ಸರಳೀಕೃತವಾಗಿ ಪಡೆಯಲು ಕಾರ್ಡ್ ವಿತರಿಸಲಾಗುತ್ತಿದೆ. ಸದ್ಯ ಕೋಲಾರದ ಆರ್.ಎಲ್.ಜಾಲಪ್ಪ ವೈದ್ಯಕೀಯ ಸಂಸ್ಥೆ, ನ್ಯೂ ಕೋಲಾರ್ ನರ್ಸಿಂಗ್ ಹೋಂ, ಮುಳಬಾಗಿಲಿನ ಪೂರ್ಣಿಮಾ ಆಸ್ಪತ್ರೆ ಹಾಗೂ ಮಾಲೂರಿನ ಸಂಜನಾ ಆಸ್ಪತ್ರೆಯಲ್ಲಿ ಆರೋಗ್ಯ ಸೇವೆಗೆ ಅವಕಾಶ ಕಲ್ಪಿಸಲಾಗಿದೆ’ ಎಂದು ಸ್ಪಷ್ಟಪಡಿಸಿದರು.
ಅಪಾಯದ ಮುನ್ಸೂಚನೆ: ‘ಬೇಸಿಗೆಯಲ್ಲಿ ಬಿಸಿಲ ಪ್ರಮಾಣ ತೀವ್ರಗೊಂಡಿರುವುದು ಅಪಾಯದ ಮುನ್ಸೂಚನೆಯಾಗಿದ್ದು, ಇದರಿಂದ ಸೂರ್ಯಾಘಾತ (ಸನ್ ಸ್ಟ್ರೋಕ್), ಉಷ್ಣಾಘಾತ (ಹೀಟ್ ಸ್ಟ್ರೋಕ್) ಆಗುವ ಸಾಧ್ಯತೆಯಿದೆ. ಹೀಗಾಗಿ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಬೇಕು. ಮನೆಯಿಂದ ಹೊರಗೆ ಹೋಗುವಾಗ ಶುದ್ಧ ಕುಡಿಯುವ ನೀರು ಕೊಂಡೊಯ್ಯಬೇಕು. ಬಿಸಿಲಿನಲ್ಲಿ ಕೆಲಸ ಮಾಡುವವರು ಬೆಳಿಗ್ಗೆ 11 ಗಂಟೆಯೊಳಗೆ ಮತ್ತು ಸಂಜೆ 4 ಗಂಟೆ ಮೇಲೆ ಕಾರ್ಯ ನಿರ್ವಹಿಸಬೇಕು’ ಎಂದು ಸಲಹೆ ನೀಡಿದರು.
‘ಯಾರಾದರೂ ಬಿಸಿಲ ತಾಪದಿಂದ ತೊಂದರೆಗೆ ಒಳಗಾದರೆ ನೆರಳಿಗೆ ಕೊಂಡೊಯ್ದು, ಕೂಡಲೇ ವೈದ್ಯರನ್ನು ಕರೆಸಬೇಕು ಅಥವಾ ಸಹಾಯವಾಣಿ ಸಂಖ್ಯೆ 108ಕ್ಕೆ ಕರೆ ಮಾಡಿ ಆಂಬುಲೆನ್ಸ್‌ನಲ್ಲಿ ಹತ್ತಿರದ ಆಸ್ಪತ್ರೆಗೆ ದಾಖಲಿಸಬೇಕು’ ಎಂದು ಮನವಿ ಮಾಡಿದರು.
ಜಿಲ್ಲಾ ಕುಷ್ಠ ರೋಗ ನಿಯಂತ್ರಣಾಧಿಕಾರಿ ಡಾ.ನಾರಾಯಣಸ್ವಾಮಿ, ಆರೋಗ್ಯ ಶಿಕ್ಷಣಾಧಿಕಾರಿ ಪ್ರಸನ್ನ ಹಾಜರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.