ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕಾಲದಲ್ಲಿ ಬೆಳೆ ಸಮೀಕ್ಷೆ ಪೂರ್ಣಗೊಳಿಸಿ: ಜಿಲ್ಲಾಧಿಕಾರಿ ಆರ್.ಸೆಲ್ವಮಣಿ

ಸಭೆಯಲ್ಲಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ
Last Updated 26 ಫೆಬ್ರುವರಿ 2021, 15:16 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆಯಲ್ಲಿ ಹೆಚ್ಚಿನ ರೈತರು ಕೃಷಿ ಹಾಗೂ ತೋಟಗಾರಿಕೆ ಬೆಳೆಗಳನ್ನು ಅವಲಂಬಿಸಿದ್ದು, ಸಕಾಲದಲ್ಲಿ ಬೆಳೆ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಬೇಕು’ ಎಂದು ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ಅಧಿಕಾರಿಗಳಿಗೆ ಆದೇಶಿಸಿದರು.

ಇಲ್ಲಿ ಶುಕ್ರವಾರ ನಡೆದ ಬೆಳೆ ಸಮೀಕ್ಷೆ ಹಾಗೂ ಜನನ ಮರಣ ನೋಂದಣಿ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿ, ‘ಬೆಳೆ ಸಮೀಕ್ಷೆಯಿಂದ ಕೃಷಿ ಚಟುವಟಿಕೆ ಹಾಗೂ ಆಹಾರ ಭದ್ರತೆ ಬಗ್ಗೆ ಪರಿಪೂರ್ಣ ಚಿತ್ರಣ ದೊರೆಯುತ್ತದೆ. ಜತೆಗೆ ಬೆಂಬಲ ಬೆಲೆ ಪೋಷಣೆ ಮತ್ತು ಖರೀದಿಗೆ ಅನುಕೂಲವಾಗುತ್ತದೆ’ ಎಂದರು.

‘ಬೆಳೆ ವಿಸ್ತೀರ್ಣ ಲೆಕ್ಕ ಹಾಕಲು, ಬೆಳೆ ಹಾನಿ ಫಲಾನುಭವಿಗಳನ್ನು ಗುರುತಿಸಲು, ಬೆಳೆ ವಿಮೆ, ಬೆಂಬಲ ಬೆಲೆ, ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯಲ್ಲಿ ಫಲಾನುಭವಿ ಆಧಾರಿತ ಯೋಜನೆಗಳಲ್ಲಿ, ಆರ್‌ಟಿಸಿಯಲ್ಲಿ ಬೆಳೆ ವಿವರ ದಾಖಲಿಸಲು, ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಬೆಳೆ ಹಾನಿ ವರದಿ ಸಿದ್ಧಪಡಿಸಲು ಬೆಳೆ ಸಮೀಕ್ಷೆ ಮಾಹಿತಿ ಬಳಸಬಹುದು’ ಎಂದು ತಿಳಿಸಿದರು.

‘ಪಾರದರ್ಶಕವಾಗಿ ಬೆಳೆ ಸಮೀಕ್ಷೆ ಮಾಡುವುದರಿಂದ ಬೆಳೆ ನಷ್ಟದ ಸಂದರ್ಭದಲ್ಲಿ ರೈತರಿಗೆ ಸಕಾಲದಲ್ಲಿ ಬೆಳೆ ವಿಮೆ ಮೊತ್ತ ದೊರೆಯುತ್ತದೆ. ರೈತರು ಬೆಳೆದ ಬೆಳೆಗಳ ವಿವರವನ್ನು ತಮ್ಮ ಮೊಬೈಲ್‌ ಆ್ಯಪ್‌ನಲ್ಲಿ ದಾಖಲಿಸುವ ಮೂಲಕ ಬೆಳೆ ಸಮೀಕ್ಷೆ ನಡೆಸಬಹುದು. ಆಂಡ್ರಾಯ್ಡ್ ಮೊಬೈಲ್ ಇಲ್ಲದ ರೈತರು ಪಕ್ಕದ ಜಮೀನಿನ ರೈತರ ಮೊಬೈಲ್‌ ಬಳಸಿ ಮಾಹಿತಿ ದಾಖಲಿಸಬಹುದು’ ಎಂದು ಹೇಳಿದರು.

‘ಬೆಳೆ ಸಮೀಕ್ಷೆಯಿಂದ ಯಾವ ರೈತರು ಯಾವ ಬೆಳೆ ಬೆಳೆದಿದ್ದಾರೆ ಎಂಬ ನಿಖರ ಮಾಹಿತಿ ಸಿಗಲಿದೆ. ಈ ಮಾಹಿತಿಯಿಂದ ಬೆಳೆ ಪರಿಹಾರಧನ ವಿತರಣೆಗೆ ಅನುಕೂಲವಾಗುತ್ತದೆ. ಬೆಳೆ ಸಮೀಕ್ಷೆ ಗುಣಾತ್ಮಕತೆಯಲ್ಲಿ ನಿಖರತೆ ಕಾಯ್ದುಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

1.7 ಲಕ್ಷ ಹೆಕ್ಟೇರ್‌: ‘ಜಿಲ್ಲೆಯ 1.7 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೇಸಾಯ ಮಾಡಲಾಗುತ್ತಿದೆ. ಈ ಪೈಕಿ 47 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಿದೆ. 66,602 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆಯಲಾಗಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರೂಪಾದೇವಿ ಮಾಹಿತಿ ನೀಡಿದರು.

‘ಜನರು ಕಡ್ಡಾಯವಾಗಿ ಜನನ ಮರಣ ನೋಂದಣಿ ಮಾಡಿಸಬೇಕು. ನೋಂದಣಿಗೆ 21 ದಿನಗಳ ಕಾಲಾವಕಾಶ ಇರುತ್ತದೆ. ಮನೆಗಳಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು, ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳು ಜನನ ಮರಣ ನೋಂದಣಿ ಮಾಡುವ ಅಧಿಕಾರಿಗಳಾಗಿರುತ್ತಾರೆ’ ಎಂದು ಜಿಲ್ಲಾ ಸಾಂಖಿಕ ಅಧಿಕಾರಿ ಕೇಶವಮೂರ್ತಿ ವಿವರಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ಎನ್.ಎಂ.ನಾಗರಾಜ್, ಹೆಚ್ಚುವರಿ ಜಿಲ್ಲಾಧಿಕಾರಿ ಸ್ನೇಹಾ, ಜಿ.ಪಂ ಉಪ ಕಾರ್ಯದರ್ಶಿ ಸಂಜೀವಪ್ಪ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT