ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುನಿಯಪ್ಪ ಚೇಲಾಗಳಿಂದ ಕಾಂಗ್ರೆಸ್‌ ನಾಶ

ಮಾಜಿ ಶಾಸಕ ಕೊತ್ತೂರು ಮಂಜುನಾಥ್ ವಾಗ್ದಾಳಿ
Last Updated 23 ಮೇ 2019, 20:36 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆಯಲ್ಲಿ ಕೆ.ಎಚ್.ಮುನಿಯಪ್ಪ ಮತ್ತು ಅವರ ಚೇಲಾಗಳಿಂದ ಕಾಂಗ್ರೆಸ್ ಪಕ್ಷ ಸರ್ವನಾಶವಾಗಿದೆ’ ಎಂದು ಮಾಜಿ ಶಾಸಕ ಕೊತ್ತೂರು ಮಂಜುನಾಥ್ ತೀವ್ರ ವಾಗ್ದಾಳಿ ನಡೆಸಿದರು.

ಲೋಕಸಭಾ ಚುನಾವಣೆ ಫಲಿತಾಂಶ ಘೋಷಣೆ ಬಳಿಕ ಇಲ್ಲಿ ಗುರುವಾರ ನಡೆದ ಬಿಜೆಪಿಯ ವಿಜಯೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿ, ‘ಮುನಿಯಪ್ಪ ಮತ್ತು ಅವರ ಶಿಷ್ಯರಿಂದಲೇ ಕಾಂಗ್ರೆಸ್‌ಗೆ ಈ ದುರ್ಗತಿ ಬಂದಿದೆ. ರಾಜಕೀಯವಾಗಿ ನನ್ನನ್ನು ಮುಗಿಸುವ ಸಂಚು ಮಾಡಿದ್ದವರಿಗೆ ತಕ್ಕಪಾಠ ಕಲಿಸಿದ್ದೇನೆ’ ಎಂದು ಮುನಿಯಪ್ಪ ವಿರುದ್ಧ ಹರಿಹಾಯ್ದರು.

‘ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿ ಅವರನ್ನು ನಾನು, ಮಾಜಿ ಶಾಸಕರಾದ ಸುಧಾಕರ್‌ರೆಡ್ಡಿ, ಮಂಜುನಾಥ್‌ಗೌಡ ಹಾಗೂ ಶಾಸಕ ಶ್ರೀನಿವಾಸಗೌಡ ಸೇರಿಯೇ ಕ್ಷೇತ್ರಕ್ಕೆ ಕರೆತಂದಿದ್ದೆವು. ಹಿಂದಿನ ಚುನಾವಣೆಗಳಲ್ಲಿ ನಮ್ಮೆಲ್ಲರ ಸಹಕಾರದಿಂದ ಗೆದ್ದು, ನಂತರ ಬೆನ್ನಿಗೆ ಚೂರಿ ಹಾಕಿ ಸೋಲಿಸುವ ಪ್ರಯತ್ನ ಮಾಡಿದ ಮುನಿಯಪ್ಪಗೆ ಈ ಬಾರಿ ಸೋಲಿನ ರುಚಿ ತೋರಿಸಿದ್ದೇವೆ’ ಎಂದು ಗುಡುಗಿದರು.

‘ಮುನಿಯಪ್ಪ ಎಂಬ ದುಷ್ಟಶಕ್ತಿಗೆ ಸೋಲಾಗಿದೆ. ಇನ್ನು ಅವರು ಜನರ ಕೈಗೆ ಸಿಗೋದಿಲ್ಲ. ಇನ್ನು ಬಿಜೆಪಿ ಅಭ್ಯರ್ಥಿ ಮಾತ್ರ ಜನರ ಜತೆಗಿರುತ್ತಾರೆ. ನಾನು ಬಿಜೆಪಿ ಸೇರೋದಿಲ್ಲ. ಆದರೆ, ಬಿಜೆಪಿ ಅಭ್ಯರ್ಥಿಗೆ ಬೆಂಬಲ ನೀಡಿ ಗೆಲ್ಲಿಸಿದ್ದೇನೆ. ದೇಶದಲ್ಲಿ ಮೋದಿ ಪ್ರಧಾನಿಯಾಗುವುದು ಖಚಿತವಾಗಿರುವುದರಿಂದ ನನಗೆ ಸಂತಸವಾಗಿದೆ’ ಎಂದರು.

ಬಿಜೆಪಿ ಬೆಂಬಲಿಸಿದೆ: ‘ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳಲ್ಲೂ ಮತದಾರರು ಬಿಜೆಪಿ ಬೆಂಬಲಿಸಿದ್ದಾರೆ. ನಾನು ಜನರಿಂದಲೇ ಶಾಸಕನಾಗಿರುವುದರಿಂದ ಅವರ ಆಶಯಕ್ಕೆ ತಕ್ಕಂತೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಿದೆ’ ಎಂದು ಜೆಡಿಎಸ್‌ ಶಾಸಕ ಕೆ.ಶ್ರೀನಿವಾಸಗೌಡ ಸ್ಪಷ್ಟಪಡಿಸಿದರು.

‘ಮುನಿಯಪ್ಪ ಬಣ್ಣ ಬದಲಿಸುವ ಊಸರವಳ್ಳಿಯಂತೆ. ಸತತ 7 ಬಾರಿ ಗೆದ್ದರೂ ಜಿಲ್ಲೆಯಲ್ಲಿ ಒಂದೇ ಗಿಡ ನಾಟಿ ಮಾಡಲಿಲ್ಲ. ಈ ಹಿಂದೆ ಅವರನ್ನು ಗೆಲ್ಲಿಸಲು ಶ್ರಮಿಸಿದ ನನಗೂ, ಸುಧಾಕರ್‌ರೆಡ್ಡಿ, ಕೃಷ್ಣ ಬೈರೇಗೌಡರಿಗೆ ಮುನಿಯಪ್ಪ ದ್ರೋಹ ಬಗೆದರು. ಸಹಾಯ ಮಾಡಿದವರನ್ನು ಮುಗಿಸುವ ಮುನಿಯಪ್ಪ ಅವರಂತಹ ಕುತಂತ್ರಗಳಿಗೆ ಈ ಚುನಾವಣಾ ಫಲಿತಾಂಶ ತಕ್ಕ ಪಾಠ. ಕ್ಷೇತ್ರಕ್ಕೆ ಒಳ್ಳೆಯ ದಿನಗಳು ಬರುತ್ತಿವೆ’ ಎಂದರು.

‘ಜೆಡಿಎಸ್‌ನಿಂದ ಗೆದ್ದಿರುವ ನಾನು ಚುನಾವಣೆಯಲ್ಲಿ ಪಕ್ಷದ ಸೂಚನೆಗೆ ವಿರುದ್ಧವಾಗಿ ಕೆಲಸ ಮಾಡಿರುವ ಬಗ್ಗೆ ವರಿಷ್ಠರು ಪ್ರಶ್ನಿಸಿದರೆ ಉತ್ತರ ಕೊಡುತ್ತೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT