ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ‘ಕೈ’ ಅತೃಪ್ತರಿಗೆ ‘ಕಮಲ ಕಲಿ’ಗಳ ಗಾಳ; ಕಾಂಗ್ರೆಸ್‌ ತೊರೆದ ಚಂದ್ರಾರೆಡ್ಡಿ

ವರ್ತೂರು ಪ್ರಕಾಶ್‌ ಭೇಟಿಯಾದ ಸಚಿವದ್ವಯರು
Last Updated 27 ನವೆಂಬರ್ 2021, 19:30 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯಲ್ಲಿ ವಿಧಾನ ಪರಿಷತ್ ಚುನಾವಣಾ ಕಣ ರಂಗೇರಿದ್ದು, ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿರುವ ಬಿಜೆಪಿ ನಾಯಕರು ‘ಕೈ’ ಪಾಳಯದಲ್ಲಿನ ಅತೃಪ್ತರು ಹಾಗೂ ಕಾಂಗ್ರೆಸ್‌ ವಿರೋಧಿಗಳಾಗಿ ಗುರುತಿಸಿಕೊಂಡಿರುವ ಪ್ರಬಲ ನಾಯಕರಿಗೆ ಗಾಳ ಹಾಕಿದ್ದಾರೆ.

ಕಾಂಗ್ರೆಸ್‌ನಲ್ಲಿ ಟಿಕೆಟ್‌ ಸಿಗದೆ ಬಂಡಾಯದ ಕಹಳೆ ಮೊಳಗಿಸಿದ್ದ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಅವರನ್ನು ಶನಿವಾರ ಕಮಲ ಪಾಳಯಕ್ಕೆ ಸೆಳೆದಿರುವ ಕೇಸರಿ ಕಲಿಗಳು ‘ಕೈ’ಗೆ ಮೊದಲ ಮರ್ಮಾಘಾತ ನೀಡಿದ್ದಾರೆ. ಇದರ ಬೆನ್ನಲ್ಲೇ ಸಚಿವರಾದ ಡಾ.ಕೆ.ಸುಧಾಕರ್‌ ಮತ್ತು ಮುನಿರತ್ನ ಅವರು ಕೋಲಾರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ವರ್ತೂರು ಪ್ರಕಾಶ್‌ರನ್ನು ಭೇಟಿಯಾಗಿ ಬಿಜೆಪಿ ಸೇರ್ಪಡೆಗೆ ಆಹ್ವಾನ ನೀಡಿದ್ದಾರೆ.

ಈ ಅನಿರೀಕ್ಷಿತ ಬೆಳವಣಿಗೆಗಳು ಕಾಂಗ್ರೆಸ್‌ ಪಾಳಯದಲ್ಲಿ ದೊಡ್ಡ ಕಂಪನ ಸೃಷ್ಟಿಸಿದ್ದು, ಕೈ ನಾಯಕರ ರಾಜಕೀಯ ಲೆಕ್ಕಾಚಾರಗಳೆಲ್ಲಾ ತಲೆಕೆಳಗಾಗಿವೆ. ಮತ್ತೊಂದೆಡೆ ಕಾಂಗ್ರೆಸ್‌ನ ಟಿಕೆಟ್‌ ಆಕಾಂಕ್ಷಿಯಾಗಿದ್ದ ವಿಧಾನ ಪರಿಷತ್‌ ಮಾಜಿ ಸಭಾಪತಿ ವಿ.ಆರ್‌.ಸುದರ್ಶನ್‌ ಸಹ ಸ್ಪರ್ಧೆಗೆ ಅವಕಾಶ ಕೈತಪ್ಪಿದ್ದರಿಂದ ಅಸಮಾಧಾನ ಹೊರ ಹಾಕಿದ್ದು, ಕಾಂಗ್ರೆಸ್‌ ಪಾಳಯದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದೆ.

ಬಂಗಾರಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಬಲವಾಗಿರುವ ಚಂದ್ರಾರೆಡ್ಡಿ ಅವರು ಕಾಂಗ್ರೆಸ್ ತೊರೆದಿರುವುದು ‘ಕೈ’ ಪಾಳಯಕ್ಕೆ ಹಿನ್ನಡೆಯಾಗಿದೆ. ಹಾಲಿ ಬಂಗಾರಪೇಟೆ ಪುರಸಭೆ ಸದಸ್ಯರಾಗಿರುವ ಚಂದ್ರಾರೆಡ್ಡಿ ಬಂಗಾರಪೇಟೆ ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ರಾಜಕೀಯವಾಗಿ ಹೆಚ್ಚಿನ ಹಿಡಿತ ಹೊಂದಿದ್ದಾರೆ. ಹೀಗಾಗಿ ಬಂಗಾರಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮತ ಬ್ಯಾಂಕ್‌ಗೆ ಪೆಟ್ಟು ಬೀಳುವ ಆತಂಕ ಎದುರಾಗಿದೆ.

ಮತ್ತೊಂದೆಡೆ ಕಾಂಗ್ರೆಸ್‌ ಸೇರಲೆತ್ನಿಸಿ ವಿಫಲರಾಗಿರುವ ವರ್ತೂರು ಪ್ರಕಾಶ್‌ ‘ಕಮಲ ಕಲಿ’ಗಳ ಜತೆ ಕೈ ಕುಲುಕುವ ಸಾಧ್ಯತೆ ಹೆಚ್ಚಿದೆ. ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ 2 ಬಾರಿ ಶಾಸಕರಾಗಿದ್ದ ವರ್ತೂರು ಪ್ರಕಾಶ್‌ ಪ್ರಭಾವಿಯಾಗಿದ್ದು, ಅವರು ಬಿಜೆಪಿ ಸೇರಿದರೆ ಕಾಂಗ್ರೆಸ್‌ಗೆ ಹಿನ್ನಡೆಯಾಗಲಿದೆ.

ಹರೀಶ್‌ ನಡೆ ನಿಗೂಢ: ಕೋಚಿಮುಲ್ ನಿರ್ದೇಶಕ ಹಾಗೂ ಕಾಂಗ್ರೆಸ್‌ ಮುಖಂಡ ವಡಗೂರು ಡಿ.ವಿ.ಹರೀಶ್ ಅವರು ಕಾಂಗ್ರೆಸ್ ತೊರೆಯಲಿದ್ದಾರೆ ಎಂಬ ಮಾತು ಕೇಳಿಬಂದಿದೆ. ಸಚಿವರಾದ ಸುಧಾಕರ್‌ ಮತ್ತು ಮುನಿರತ್ನ ಅವರು ಕೋಲಾರದಲ್ಲಿ ಶನಿವಾರ ವರ್ತೂರು ಪ್ರಕಾಶ್‌ರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಹರೀಶ್‌ ಸಹ ಜತೆಯಲ್ಲಿ ಕಾಣಿಸಿಕೊಂಡಿದ್ದು, ಅವರ ನಡೆ ನಿಗೂಢವಾಗಿದೆ. ಬಂಗಾರಪೇಟೆ ವಿಧಾನಸಭಾ ಕ್ಷೇತ್ರದ 5 ಗ್ರಾ.ಪಂಗಳ ವ್ಯಾಪ್ತಿಯಲ್ಲಿ ಹರೀಶ್‌ ಪ್ರಭಾವಿಯಾಗಿದ್ದು, ಆ ಭಾಗದಲ್ಲಿ ಕಾಂಗ್ರೆಸ್‌ಗೆ ಮತಗಳು ಕೈ ತಪ್ಪುವ ಆತಂಕ ಎದುರಾಗಿದೆ.

ಆಪರೇಷನ್‌ ಕಮಲ: ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಕಮಲ ಪಾಳಯದಲ್ಲಿ ಚುನಾವಣೆಯ ನೇತೃತ್ವ ವಹಿಸಿರುವ ಸಚಿವರಾದ ಸುಧಾಕರ್‌ ಮತ್ತು ಮುನಿರತ್ನ ‘ಆಪರೇಷನ್‌ ಕಮಲ’ ನಡೆಸಿದ್ದು, ಅವಳಿ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನ ಪ್ರಮುಖರನ್ನು ಬಿಜೆಪಿಗೆ ಸೆಳೆಯುತ್ತಿದ್ದಾರೆ. ಮತ್ತೊಂದೆಡೆ ಜೆಡಿಎಸ್‌ನ ಪ್ರಭಾವಿ ನಾಯಕರನ್ನೂ ತೆರೆಮರೆಯಲ್ಲೇ ಪಕ್ಷಕ್ಕೆ ಸೆಳೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT