ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಶಾಂತಿ ಕದಡುವ ಸಂಚು

ಕಾಂಗ್ರೆಸ್‌ ನಾಯಕರ ವಿರುದ್ಧ ಸಂಸದ ಮುನಿಸ್ವಾಮಿ ಆರೋಪ
Last Updated 20 ಡಿಸೆಂಬರ್ 2019, 14:40 IST
ಅಕ್ಷರ ಗಾತ್ರ

ಕೋಲಾರ: ‘ಕೇಂದ್ರ ಸರ್ಕಾರವು ದೇಶದ ಭದ್ರತೆ ದೃಷ್ಟಿಯಿಂದ ಪೌರತ್ವ ಕಾಯ್ದೆ ಜಾರಿಗೆ ತಂದಿದೆ. ಆದರೆ, ಕೆಲವರು ಇದನ್ನೇ ರಾಜಕೀಯದ ಅಸ್ತ್ರವಾಗಿಸಿಕೊಂಡು ಶಾಂತಿ ಕದಡುತ್ತಿದ್ದಾರೆ’ ಎಂದು ಸಂಸದ ಎಸ್.ಮುನಿಸ್ವಾಮಿ ಆರೋಪಿಸಿದರು.

ಇಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ನಾವೆಲ್ಲಾ ಭಾರತೀಯರು. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಆತಂಕವಾದಿಗಳು ಹಾಗೂ ನುಸುಳುಕೋರರನ್ನು ನಿಯಂತ್ರಿಸಲು ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಮುಂದಾಗಿದ್ದಾರೆ’ ಎಂದರು.

‘ಅಪ್ಘಾನಿಸ್ತಾನ ಹಾಗೂ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ, ಕೊಲೆ, ಅತ್ಯಾಚಾರ ನಡೆಯುತ್ತಿತ್ತು. ಹೀಗಾಗೀ ನಮ್ಮ ದೇಶದವರು ಅಲ್ಲಿಂದ ರಕ್ಷಣೆಗಾಗಿ ಭಾರತಕ್ಕೆ ವಾಪಸ್ ಬಂದರು. ಪೌರತ್ವ ಕಾಯ್ದೆಯಿಂದ ಯಾವುದೇ ಕಾರಣಕ್ಕೂ ಮುಸ್ಲಿಮರು, ಕ್ರೈಸ್ತರು ಹಾಗೂ ಜೈನರಿಗೆ ತೊಂದರೆ ಆಗುವುದಿಲ್ಲ ಎಂದು ಮೋದಿ ಸ್ಪಷ್ಟಪಡಿಸಿದ್ದಾರೆ’ ಎಂದು ಹೇಳಿದರು.

‘ಹಿಂದೂಗಳಿಗೆಲ್ಲಾ ಪೌರತ್ವ ಕೊಟ್ಟರೆ ಕಾಂಗ್ರೆಸ್‌ಗೆ ಮತ ಸಿಗುವುದಿಲ್ಲ ಎಂಬ ಭಯ ಶುರುವಾಗಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಕಾಂಗ್ರೆಸ್‌ ಮುಖಂಡರು ಇದೇ ವಿಚಾರ ಮುಂದಿಟ್ಟುಕೊಂಡು ಪಿತೂರಿ ನಡೆಸುತ್ತಿದ್ದಾರೆ. ಬೆಂಕಿ ಹಚ್ಚುವುದು ತಮಗೆ ಗೊತ್ತಿಗೆ ಎಂದು ಕಾಂಗ್ರೆಸ್‌ ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ. ಆದರೆ, ಬಿಜೆಪಿಯವರಿಗೆ ಬೆಂಕಿ ನಂದಿಸುವುದು ಗೊತ್ತಿದೆ’ ಎಂದು ತಿರುಗೇಟು ನೀಡಿದರು.

‘ಮೋದಿ ಮತ್ತು ಅಮಿತ್ ಶಾ ಅವರ ತೀರ್ಮಾನದ ಉದ್ದೇಶವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಮುಸ್ಲಿಂ ಧಾರ್ಮಿಕ ಮುಖಂಡರಿಗೆ ಮನವರಿಕೆ ಮಾಡಿಕೊಟ್ಟಿದ್ದು, ಶಾಂತಿ ಕಾಪಾಡುವಂತೆ ಕೋರಿದ್ದಾರೆ. ಆದರೆ, ಕೆಲ ಪುಡಾರಿಗಳು ಮಸೀದಿಗಳಲ್ಲಿನ ಹಿರಿಯರ ಮಾತು ಕೆಳದೆ ಬೀದಿಗೆ ಬಂದು ಗಲಾಟೆ ಮಾಡುತ್ತಿದ್ದಾರೆ’ ಎಂದು ದೂರಿದರು.

ಕಾಯ್ದೆ ಒಪ್ಪಿದ್ದಾರೆ: ‘ದೇಶದ ಮುಸ್ಲಿಂ ಬಾಂಧವರು ಪೌರತ್ವ ತಿದ್ದುಪಡಿ ಕಾಯ್ದೆ ಒಪ್ಪಿಕೊಂಡು ಸ್ವಾಗತಿಸಿದ್ದಾರೆ. ಅತಿ ಬುದ್ಧಿವಂತರು ಕಾಯ್ದೆ ತಿಳಿದರೂ ಈ ರೀತಿ ನಡೆದುಕೊಳ್ಳುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಮುಂದೆ ತಮಗೆ ಮತ ಹಾಕುವುದಿಲ್ಲ ಎಂಬ ರಾಜಕೀಯ ದುರುದ್ದೇಶದಿಂದ ಕಾಂಗ್ರೆಸ್‌ ನಾಯಕರು ಶಾಂತಿ ಕದಡುವ ಸಂಚು ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

‘ಮಂಗಳೂರಿನಲ್ಲಿ ಗಲಾಟೆ ನಡೆದಿರುವ ಜಾಗದಲ್ಲಿ ಸಿ.ಸಿ ಕ್ಯಾಮೆರಾಗಳಿವೆ. ಸಾರ್ವಜನಿಕ ಆಸ್ತಿಗೆ ನಷ್ಟ ಉಂಟು ಮಾಡಿರುವ ವ್ಯಕ್ತಿಗಳಿಂದಲೇ ನಷ್ಟದ ಹಣ ವಸೂಲಿ ಮಾಡುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತದೆ’ ಎಂದರು.

ಶಾಸಕ ರಮೇಶ್‌ಕುಮಾರ್‌ರ ಬಂಧನದ ಬಗ್ಗೆ ಪ್ರತಿಕ್ರಿಯಿಸಿ, ‘ರಮೇಶ್‌ಕುಮಾರ್ ಅವರು ಮಂಗಳೂರಿಗೆ ಭೇಟಿ ಕೊಡುವುದರಲ್ಲಿ ತಪ್ಪಿಲ್ಲ. ಅವರನ್ನು ಯಾಕೆ ಬಂಧಿಸಿದ್ದಾರೆ ಎಂಬುದನ್ನು ತಿಳಿದುಕೊಳ್ಳುತ್ತೇನೆ. ಅಭಿವೃದ್ಧಿ ಕೆಲಸಕ್ಕೆ ಅವರ ಸಂಪೂರ್ಣ ಸಹಕಾರವಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT