ಸೋಮವಾರ, ಸೆಪ್ಟೆಂಬರ್ 28, 2020
21 °C
ವಿಚಾರಗೋಷ್ಠಿಯಲ್ಲಿ ಸಿಐಟಿಯು ರಾಜ್ಯ ಘಟಕದ ಕಾರ್ಯದರ್ಶಿ ಪ್ರಕಾಶ್ ಕಳವಳ

ದೇಶದಲ್ಲಿ ರೈತರ ಒಕ್ಕಲೆಬ್ಬಿಸಲು ಸಂಚು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯಿಂದ ದೇಶದಲ್ಲಿ ಸಾಮಾಜಿಕ ಅಸಮಾನತೆ ಹೆಚ್ಚಿ ಅತಿ ಸಣ್ಣ ರೈತರ ಬದುಕು ಬರ್ಬರವಾಗಲಿದೆ’ ಎಂದು ಸಿಐಟಿಯು ರಾಜ್ಯ ಘಟಕದ ಕಾರ್ಯದರ್ಶಿ ಕೆ.ಪ್ರಕಾಶ್ ಕಳವಳ ವ್ಯಕ್ತಪಡಿಸಿದರು.

ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಸಾಧಕ ಬಾಧಕ ಕುರಿತು ರೈತ, ದಲಿತ ಮತ್ತು ಕಾರ್ಮಿಕ ಸಂಘಟನೆಗಳ ವೇದಿಕೆಯು ಇಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಚಾರಗೋಷ್ಠಿಯಲ್ಲಿ ಮಾತನಾಡಿ, ‘ಸಣ್ಣ ಭೂ ಹಿಡುವಳಿದಾರರು ಭೂಮಿ ಕಳೆದುಕೊಳ್ಳುವ ಆತಂಕ ಎದುರಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘2011ರ ಭೂಮಿ ಗಣತಿ ಪ್ರಕಾರ ಕರ್ನಾಟಕವು ಕೃಷಿ ಪ್ರಧಾನ ರಾಜ್ಯವಾಗಿ ಉಳಿದಿಲ್ಲ. ಶೇ 49ರಷ್ಟು ಮಂದಿ ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಶೇ 51ರಷ್ಟು ಮಂದಿ ಕೃಷಿಯೇತರ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. 2021ರ ಗಣತಿ ವೇಳೆಗೆ ಈ ಪ್ರಮಾಣ ಮತ್ತಷ್ಟು ಕೆಟ್ಟದಾಗಿರುತ್ತದೆ’ ಎಂದು ವಿಷಾದಿಸಿದರು.

‘ರಾಜ್ಯದಲ್ಲಿ 65 ಲಕ್ಷ ಮಂದಿ ಭೂ ಹಿಡುವಳಿದಾರರಿದ್ದಾರೆ. 71 ಲಕ್ಷ ಮಂದಿ ಭೂ ರಹಿತರಿದ್ದು, ಈ ಪೈಕಿ ಶೇ 80ರಷ್ಟು ಮಂದಿ ಪರಿಶಿಷ್ಟ ಸಮುದಾಯದವರು ಹಾಗೂ ಇತರೆ ಹಿಂದುಳಿದ ವರ್ಗದವರು ಇದ್ದಾರೆ. 10 ಲಕ್ಷ ಬಗರ್‌ ಹುಕುಂ ಅರ್ಜಿಗಳು ವಿಲೇವಾರಿಗೆ ಬಾಕಿಯಿವೆ. ರೈತರನ್ನು ವ್ಯವಸ್ಥಿತವಾಗಿ ಕೃಷಿ ಭೂಮಿಯಿಂದ ಒಕ್ಕಲೆಬ್ಬಿಸುವ ಸಂಚು ನಡೆಯುತ್ತಿದೆ’ ಎಂದು ಗುಡುಗಿದರು.

ಖರೀದಿಗೆ ಅವಕಾಶ: ‘ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿಯಿಂದ ಕೃಷಿಯೇತರ ಉದ್ದೇಶಕ್ಕೆ ಭೂಮಿ ಖರೀದಿಸಲು ನಿಗದಿಪಡಿಸಿದ್ದ ಮಾನದಂಡ ಸಂಪೂರ್ಣ ಬದಲಿಸಿ ಯಾರು ಬೇಕಾದರೂ ಭೂಮಿ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ಭೂ ಪರಿವರ್ತನೆಗೆ ಅರ್ಜಿ ಸಲ್ಲಿಸಿದ 1 ತಿಂಗಳಲ್ಲಿ ಜಿಲ್ಲಾಧಿಕಾರಿ ಪರಿವರ್ತನೆ ಮಾಡಿಕೊಡದಿದ್ದರೆ ಆ ಭೂಮಿ ಪರಿವರ್ತನೆಯಾದಂತೆ ಎಂದು ತಿಳಿದು ಮುಂದಿನ ಚಟುವಟಿಕೆ ಆರಂಭಿಸಬಹುದು’ ಎಂದು ವಿವರಿಸಿದರು.

‘ಈ ಹಿಂದೆ ಕೈಗಾರಿಕೆ ಉದ್ದೇಶಕ್ಕೆ ಭೂಮಿ ಖರೀದಿಸಿ ಕಾಲಮಿತಿಯಲ್ಲಿ ಭೂಮಿ ಬಳಸಿಕೊಳ್ಳದಿದ್ದರೆ ವಾಪಸ್ ಪಡೆಯುವ ಅವಕಾಶವಿತ್ತು. ಈಗ ತಿದ್ದುಪಡಿಯಿಂದಾಗಿ ಆ ಭೂಮಿ ಪ್ರಶ್ನಿಸುವಂತಿಲ್ಲ ಮತ್ತು ವಾಪಸ್‌ ಪಡೆಯುವಂತಿಲ್ಲ’ ಎಂದು ಮಾಹಿತಿ ನೀಡಿದರು.

ಗುತ್ತಿಗೆ ಕೃಷಿ: ‘ಕೇಂದ್ರ ಸರ್ಕಾರ 2020ರ ಜೂನ್ 3ರಂದು ಕೃಷಿ ಸೇವೆ ಕುರಿತಾದ ರೈತ ಸಶಕ್ತೀಕರಣ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿತು. ಇದಕ್ಕೆ ಪೂರಕವಾಗಿ ರಾಜ್ಯದಲ್ಲೂ ಕಾಯ್ದೆಗೆ ತಿದ್ದುಪಡಿ ತಂದು ಕಾರ್ಪೊರೇಟ್‌ ಕಂಪನಿಗಳನ್ನು ಕೃಷಿಗೆ ಒಳಪಡಿಸುವ, ಗುತ್ತಿಗೆ ಅಥವಾ ಒಪ್ಪಂದ ಕೃಷಿಗೆ ಅವಕಾಶ ಕಲ್ಪಿಸಲಾಗಿದೆ’ ಎಂದರು.

‘ತಿದ್ದುಪಡಿ ಕಾಯ್ದೆ ಅನ್ವಯ ಒಂದು ಕುಟುಂಬ ಗರಿಷ್ಠ 270 ಎಕರೆ ಭೂಮಿ ಹೊಂದಬಹುದು. ಕಾಯ್ದೆಯ ಕಲಂ 79 ಎಬಿಸಿಡಿ ಮತ್ತು ಕಲಂ 80ರ ಪ್ರಕಾರ ಕೃಷಿಯೇತರರು ಸಹ ಕೃಷಿ ಭೂಮಿ ಖರೀದಿಸಬಹುದು. ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೃಷಿ ಭೂಮಿ ಖರೀದಿಗೆ ಕುಟುಂಬದ ಆದಾಯ ಮಿತಿಯನ್ನು 2 ಲಕ್ಷದಿಂದ 25 ಲಕ್ಷಕ್ಕೆ ಏರಿಸಿದ್ದರು. ಈಗಿನ ಸರ್ಕಾರ ಮಿತಿಯನ್ನೇ ತೆಗೆದು ಹಾಕಿದೆ’ ಎಂದು ಕಿಡಿಕಾರಿದರು.

ವೈವಿಧ್ಯತೆಗೆ ಹೊಡೆತ: ‘ಗ್ರಾಮೀಣ ಭಾಗದಲ್ಲಿ ಆರ್ಥಿಕವಾಗಿ ಸಬಲರಾದವರಿಂದಲೂ ಕಾರ್ಪೊರೇಟ್‌ ಕಂಪನಿಗಳಿಗೆ ಬೆಂಬಲ ಸಿಗುತ್ತಿದೆ. ಹೊಸ ಕೂಟ ಸೇರಿಕೊಂಡು ಕಾಯ್ದೆ ತಿದ್ದುಪಡಿಗೆ ಒತ್ತಾಸೆ ತಂದಿದ್ದಾರೆ. ಕಾರ್ಪೊರೇಟ್‌ ಕೃಷಿ ಪದ್ಧತಿ ಏಕಸಂಸ್ಕೃತಿಯ ಆಹಾರ ಪದ್ಧತಿ ಬೆಳೆಸುತ್ತದೆ. ಇದರಿಂದ ಗ್ರಾಮೀಣ ಸೊಗಡಿನ ಆಹಾರ ವೈವಿಧ್ಯತೆಗೆ ಹೊಡೆತ ಬೀಳುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.

ವೇದಿಕೆ ಸಂಚಾಲಕ ನಾಗರಾಜ್, ದಲಿತ ಸಂಘರ್ಷ ಸಮಿತಿ ರಾಜ್ಯ ಘಟಕದ ಸಂಚಾಲಕ ಎನ್.ವೆಂಕಟೇಶ್, ದಲಿತ ಮುಖಂಡ ಟಿ.ವಿಜಯ್‌ಕುಮಾರ್‌, ವಕೀಲ ಸತೀಶ್, ಗಮನ ಮಹಿಳಾ ಸಮೂಹದ ಅಧ್ಯಕ್ಷೆ ಶಾಂತಮ್ಮ, ಎಸ್‍ಎಫ್‍ಐ ಸದಸ್ಯ ವಿ.ಅಂಬರೀಶ್ ಪಾಲ್ಗೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು