ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ವ್ಯವಸ್ಥೆಯ ಕೇಸರೀಕರಣಕ್ಕೆ ಸಂಚು: ಚಿಂತಕ ಹ.ಮಾ.ರಾಮಚಂದ್ರ

ವಿಚಾರ ಸಂಕಿರಣದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಚಿಂತಕ ರಾಮಚಂದ್ರ ಕಿಡಿ
Last Updated 29 ಅಕ್ಟೋಬರ್ 2020, 15:26 IST
ಅಕ್ಷರ ಗಾತ್ರ

ಕೋಲಾರ: ‘ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಹೊಸ ಶಿಕ್ಷಣ ನೀತಿ ಹೆಸರಿನಲ್ಲಿ ದೇಶದ ಶಿಕ್ಷಣ ವ್ಯವಸ್ಥೆಯನ್ನು ಕೇಸರೀಕರಣಗೊಳಿಸುವ ಸಂಚು ಮಾಡಿದೆ’ ಎಂದು ಚಿಂತಕ ಹ.ಮಾ.ರಾಮಚಂದ್ರ ಕಿಡಿ ಕಾರಿದರು.

ಹೊಸ ಶಿಕ್ಷಣ ನೀತಿ ಕುರಿತು ಭಾರತ ವಿದ್ಯಾರ್ಥಿ ಒಕ್ಕೂಟವು (ಎಸ್‌ಎಫ್‌ಐ) ಇಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಚಾರ ಸಂಕಿರಣ ಹಾಗೂ ಸಂವಾದದಲ್ಲಿ ಮಾತನಾಡಿ, ‘ಬಿಜೆಪಿ ಸರ್ಕಾರ ಸನಾತನ ಮತ್ತು ಪ್ರಾಚೀನ ಶಿಕ್ಷಣ ಪದ್ಧತಿ ಜಾರಿ ಮಾಡಿ ಶ್ರೀಮಂತ ಪರಂಪರೆಯ ಮಾರ್ಗಸೂಚಿಗಳನ್ನು ತಂದು ಜಾತಿ ಅಸಮಾನತೆ, ಅಸ್ಪೃಶ್ಯತೆಯ ಬೇರುಗಳನ್ನು ಜೀವಂತಗೊಳಿಸಲು ಹೊರಟಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಶಿಕ್ಷಣವು ಸಾಮಾಜಿಕ ಪರಿವರ್ತನೆಯ ಸಾಧನ. ಕಲಿಕೆಯು ಶಿಕ್ಷಣ ವ್ಯವಸ್ಥೆಯಲ್ಲಿನ ಸಮಸ್ಯೆ, ಸವಾಲುಗಳನ್ನು ಎದುರಿಸುವಂತಿಲ್ಲ. ಕೇಂದ್ರವು ಶಿಕ್ಷಣ ತಜ್ಞರ ಜತೆ ಚರ್ಚಿಸಿ ಹೊಸ ಶಿಕ್ಷಣ ನೀತಿ ಜಾರಿ ಮಾಡಿಲ್ಲ. ಬದಲಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಣತಿಯಂತೆ ಶಿಕ್ಷಣ ನೀತಿ ಜಾರಿಗೊಳಿಸಿದೆ’ ಎಂದು ಟೀಕಿಸಿದರು.

‘ಕೇಂದ್ರವು ಉಚಿತ ಹಾಗೂ ಕಡ್ಡಾಯ ಶಿಕ್ಷಣದ ಕಲ್ಪನೆಯನ್ನು ಗಾಳಿಗೆ ತೂರಿದೆ. ದೇಶದಲ್ಲಿ ನಾಗರೀಕ ಹಕ್ಕುಗಳನ್ನು ದಮನ ಮಾಡಿ ಸತ್ಯದ ಬಾಯಿ ಮುಚ್ಚಿಸುವ ಸಂಚು ನಡೆದಿದೆ. ಬಡ ಹಾಗೂ ಮಧ್ಯಮ ವರ್ಗದ ಮಕ್ಕಳಿಗೆ ಶಿಕ್ಷಣವು ಗಗನ ಕುಸುಮವಾಗಲಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪರಿಹಾರವಿಲ್ಲ: ‘ಶಿಕ್ಷಣ ನೀತಿ ದೇಶದ ಭವಿಷ್ಯ ನಿರ್ಧರಿಸುತ್ತದೆ. ಆದ ಕಾರಣ ಶೈಕ್ಷಣಿಕ ನೀತಿ ಜಾರಿಗೂ ಮುನ್ನ ವ್ಯಾಪಕ ಚರ್ಚೆ ಆಗಬೇಕು. ಕೇಂದ್ರವು ಜಾರಿಗೆ ತಂದಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ದೇಶದ ಶಿಕ್ಷಣ ವ್ಯವಸ್ಥೆಯ ಸಮಸ್ಯೆಗಳಿಗೆ ಯಾವುದೇ ಪರಿಹಾರವಿಲ್ಲ. ಬದಲಿಗೆ ಶಿಕ್ಷಣ ಕ್ಷೇತ್ರವನ್ನು ಖಾಸಗೀಕರಣ, ಕೇಂದ್ರೀಕರಣ ಮತ್ತು ಕೋಮುವಾದೀಕರಣಗೊಳಿಸಲಿದೆ’ ಎಂದು ಎಸ್‍ಎಫ್‍ಐ ರಾಜ್ಯ ಘಟಕದ ಕಾರ್ಯದರ್ಶಿ ಕೆ.ವಾಸುದೇವರೆಡ್ಡಿ ದೂರಿದರು.

‘ಭವಿಷ್ಯದಲ್ಲಿ ಶಿಕ್ಷಣ ಮಾರಾಟದ ಸರಕಾಗಲಿದೆ. ಉಳ್ಳವರಿಗೆ ಮಾತ್ರ ಶಿಕ್ಷಣವೆಂಬ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಕೋವಿಡ್‌ ಸಂಕಷ್ಟದಿಂದ ಶೈಕ್ಷಣಿಕ ಚಟುವಟಿಕೆಗಳು ಸ್ಥಗಿತಗೊಂಡಿವೆ. ಇಂತಹ ಪರಿಸ್ಥಿತಿಯಲ್ಲಿ ಮಹತ್ವದ ಶಿಕ್ಷಣ ನೀತಿಯನ್ನು ಸಂಸತ್ತಿನಲ್ಲಿ ಮಂಡಿಸಿ ಚರ್ಚಿಸದೆ ತರಾತುರಿಯಲ್ಲಿ ಕೇಂದ್ರ ಸಚಿವ ಸಂಪುಟದಲ್ಲಿ ಅಂಗೀಕರಿಸಿರುವುದು ಸಂವಿಧಾನ ವಿರೋಧಿ ನಡೆ’ ಎಂದು ಗುಡುಗಿದರು.

‘ಶಿಕ್ಷಣ ನೀತಿ ವಿಚಾರದಲ್ಲಿ ಮೋದಿ ಸರ್ಕಾರ ಅವಸರ ತೋರುತ್ತಿದೆ. ಶಿಕ್ಷಣ ನೀತಿಯ ಕರಡನ್ನು ಸಂಪೂರ್ಣವಾಗಿ ಎಲ್ಲಾ ಭಾಷೆಗಳಿಗೂ ಅನುವಾದಿಸಿ ಸಾರ್ವಜನಿಕ ಚರ್ಚೆಗೆ ಅವಕಾಶ ಕಲ್ಪಿಸಿಲ್ಲ. ನೂತನ ನೀತಿಯು ವಿದ್ಯಾರ್ಥಿ ಸಂಘಟನೆಗಳು ಮತ್ತು ಶಿಕ್ಷಣ ತಜ್ಞರು ಸೂಚಿಸಿದ ತಿದ್ದುಪಡಿಗಳನ್ನು ಒಳಗೊಂಡಿಲ್ಲ’ ಎಂದು ಅಭಿಪ್ರಾಯಪಟ್ಟರು.

ಪ್ರಜಾಸತ್ತಾತ್ಮಕ ನಡೆಯಲ್ಲ: ‘ಸಂಸತ್ತಿನಲ್ಲಿ ಶಿಕ್ಷಣ ನೀತಿಯ ಮಸೂದೆ ಬಗ್ಗೆ ಚರ್ಚಿಸದೆ ಅಂಗೀಕರಿಸಿರುವುದು ಪ್ರಜಾಸತ್ತಾತ್ಮಕ ನಡೆಯಲ್ಲ. ಆರ್‍ಎಸ್‍ಎಸ್ ಮತ್ತು ಬಿಜೆಪಿಯ ರಾಜಕೀಯ ಅಜೆಂಡಾ ಜಾರಿಗೊಳಿಸುವ ಹುನ್ನಾರ ನೂತನ ಶಿಕ್ಷಣ ನೀತಿಯಲ್ಲಿ ಅಡಗಿದೆ’ ಎಂದು ರಾಜ್ಯ ರೈತ ಸಂಘ ಪ್ರಧಾನ ಕಾರ್ಯದರ್ಶಿ ಶಿವಪ್ಪ ದೂರಿದರು.

‘ಶಿಕ್ಷಣವು ಸಮವರ್ತಿ ಪಟ್ಟಿಯಲ್ಲಿ ಇರುವುದರಿಂದ ಈಗಾಗಲೇ ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಕೇರಳ ಸರ್ಕಾರ ಹೊಸ ನೀತಿ ಜಾರಿಗೊಳಿಸುವುದಿಲ್ಲ ಎಂದು ಘೋಷಿಸಿವೆ. ನಾಡಿನ ಭವಿಷ್ಯ ತೀರ್ಮಾನಿಸುವ ಈ ನೀತಿ ಎಲ್ಲರ ಅಭಿಪ್ರಾಯ ಒಳಗೊಂಡು ಸಮಗ್ರವಾಗಿರಬೇಕು’ ಎಂದು ಹೇಳಿದರು.

ಎಸ್‍ಎಫ್‍ಐ ಜಿಲ್ಲಾ ಘಟಕದ ಕಾರ್ಯದರ್ಶಿ ಎಸ್‌.ಎನ್‌.ಬೀರಾಜ್, ಜಂಟಿ ಕಾರ್ಯದರ್ಶಿ ಅಂಕಿತಾ, ಸಾಹಿತಿಗಳಾದ ಶರಣಪ್ಪ ಗಬ್ಬೂರು, ನಾರಾಯಣಸ್ವಾಮಿ. ಕೊಮ್ಮಣ್ಣ, ಭೀಮಸೇನೆ ರಾಜ್ಯ ಘಟಕದ ಅಧ್ಯಕ್ಷ ಪಂಡಿತ್ ಮುನಿವೆಂಕಟಪ್ಪ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT