ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಗಾರಪೇಟೆ: ಮುಂದುವರಿದ ಕಾಂಗ್ರೆಸ್ ಪಾರುಪತ್ಯ

Last Updated 11 ಫೆಬ್ರುವರಿ 2021, 1:06 IST
ಅಕ್ಷರ ಗಾತ್ರ

ಬಂಗಾರಪೇಟೆ: ತಾಲ್ಲೂಕಿನಲ್ಲಿ ಬುಧವಾರ 6 ಪಂಚಾಯಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಈ ಪೈಕಿ 5ರಲ್ಲಿ ಕಾಂಗ್ರೆಸ್ ಹಿಡಿತ ಸಾಧಿಸಿದೆ. ಒಂದು ಪಂಚಾಯಿತಿ ಮಾತ್ರ ಬಿಜೆಪಿ ತೆಕ್ಕೆಗೆ ಜಾರಿದೆ.

ಕಾಮಸಮುದ್ರ, ದೊಡ್ಡ ವಲಗಮಾದಿ, ಕೆಸರನಹಳ್ಳಿ, ತೊಪ್ಪನಹಳ್ಳಿ, ಕಾರಹಳ್ಳಿ ಪಂಚಾಯಿತಿಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಮಾವಳ್ಳಿ ಪಂಚಾಯಿತಿಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದ್ದಾರೆ.ಕಾಮಸಮುದ್ರ, ದೊಡ್ಡವಲಗಮಾದಿ, ಕೆಸರನಹಳ್ಳಿ, ಮಾವಳ್ಳಿ ಪಂಚಾಯಿತಿಗಳಲ್ಲಿ ಅವಿರೋಧ ಆಯ್ಕೆ ನಡೆದಿದೆ. ತೊಪ್ಪನಹಳ್ಳಿ ಮತ್ತು ಕಾರಹಳ್ಳಿ ಪಂಚಾಯಿತಿಗಳಲ್ಲಿ ಮಾತ್ರ ಚುನಾವಣೆ ನಡೆದಿದೆ.

ದೊಡ್ಡವಲಗಮಾದಿ ಪಂಚಾಯಿತಿ ಅಧ್ಯಕ್ಷರಾಗಿ ಎಸ್. ನಂದಿನಿ ಶೇಷು, ಉಪಾಧ್ಯಕ್ಷರಾಗಿ ಅಲೀಂಖಾನ್, ಕಾಮಸಮುದ್ರ ಪಂಚಾಯಿತಿ ಅಧ್ಯಕ್ಷರಾಗಿ ಕಾವೇರಿ ಆದಿನಾರಾಯಣ, ಉಪಾಧ್ಯಕ್ಷರಾಗಿ ಮಹಾಲಕ್ಷ್ಮೀ ರಮೇಶ್ ಆಯ್ಕೆಯಾಗಿದ್ದಾರೆ. ಕೆಸರನಹಳ್ಳಿ ಪಂಚಾಯಿತಿ ಅಧ್ಯಕ್ಷರಾಗಿ ಪಿ. ಮಂಜುನಾಥ್ ಮತ್ತು ಉಪಾಧ್ಯಕ್ಷರಾಗಿ ಗಂಗಾಧರ್ ಚುನಾಯಿತರಾದರು. ಮಾವಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಶಶಿಕಲಾ ರಾಮಾಂಜಿ ಅಧ್ಯಕ್ಷೆ ಮತ್ತು ರಾಧಾ ಮುನಿರಾಜು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.

ತೊಪ್ಪನಹಳ್ಳಿ ಪಂಚಾಯಿತಿ ಅಧ್ಯಕ್ಷರಾಗಿ ನಾಗವೇಣಿ ಲಕ್ಷ್ಮಿನಾರಾಯಣಪ್ರಸಾದ್‌ ಮತ್ತು ಉಪಾಧ್ಯಕ್ಷರಾಗಿ ಶೈಲಾ ಸಂಪಂಗಿಗೌಡ ಗೆಲುವು ಸಾಧಿಸಿದರು.

ಕಾರಹಳ್ಳಿ ಪಂಚಾಯಿತಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ವೆಂಕಟರಾಜಮ್ಮ 10 ಮತ ಪಡೆದು ಪ್ರತಿಸ್ಪರ್ಧಿ ನಾರಾಯಣಮ್ಮ ವಿರುದ್ಧ 2 ಮತದ ಅಂತರದಲ್ಲಿ ಗೆಲುವು ಸಾಧಿಸಿದರು. ಒಟ್ಟು 19 ಸದಸ್ಯರು ಮತ ಚಲಾಯಿಸಿದ್ದು, ಒಂದು ಮತ ಅಸಿಂಧುಗೊಂಡಿತು. ಉಪಾಧ್ಯಕ್ಷ ಬಿ. ಶ್ರೀನಿವಾಸ್ ಅವರು 11 ಮತ ಪಡೆದು ಪ್ರತಿಸ್ಪರ್ಧಿ ನಾರಾಯಣಸ್ವಾಮಿ ವಿರುದ್ಧ 3 ಮತ ಅಂತರದಲ್ಲಿ ಜಯ ಪಡೆದರು.

ಹಾಸ್ಯಾಸ್ಪದ: ಕ್ಷೇತ್ರದ 26 ಗ್ರಾಮ ಪಂಚಾಯಿತಿಗಳ ಪೈಕಿ 23 ಪಂಚಾಯಿತಿಯಲ್ಲಿ ಗೆಲ್ಲುವುದು ನಿಶ್ಚಿತ. ಆದರೂ ನಾವು ಸುಮ್ಮನಿದ್ದೇವೆ. ಆದರೆ, ಡಿ.ಕೆ. ಹಳ್ಳಿ ಮತ್ತು ಮಾವಳ್ಳಿ ಪಂಚಾಯಿತಿ ಗೆದ್ದಿದ್ದಕ್ಕೆ ದೊಡ್ಡ ಹಬ್ಬ ಮಾಡಿ ಶೋ ತೋರಿಸುತ್ತಿರುವುದು ಹಾಸ್ಯಾಸ್ಪದ ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಹೇಳಿದರು.

ತಾಲ್ಲೂಕಿನ ಕೆಸರನಹಳ್ಳಿ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಅವರು,ಕೆಸರನಹಳ್ಳಿ ಪಂಚಾಯಿತಿಯನ್ನು 30 ವರ್ಷದಿಂದ ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದ ನಾಯಕರು ಎಷ್ಟು ಅಕ್ರಮ ನಡೆಸಿದ್ದಾರೆ ಎಂಬ ಬಗ್ಗೆ ನನಗೆ ಮಾಹಿತಿಯಿದೆಎಂದು ಹೇಳಿದರು.

‘ಡಿ.ಕೆ. ಹಳ್ಳಿ ಪಂಚಾಯಿತಿಯಲ್ಲಿ ಸದಸ್ಯರಿಗೆ ಹಣದ ಆಮಿಷ ಒಡ್ಡಿ ಕುತಂತ್ರದಿಂದ ತಮ್ಮ ವಶಕ್ಕೆ ಪಡೆದರು. ಮಾವಳ್ಳಿ ಪಂಚಾಯಿತಿಯಲ್ಲಿ ಬಿಸಿಎಂ ‘ಎ’ ಮೀಸಲಾತಿ ನಿಗದಿಯಾಗಿತ್ತು. ಕಾಂಗ್ರೆಸ್‌ನಲ್ಲಿ ಆ ವರ್ಗ ‍ಪ್ರತಿನಿಧಿಸುವ ಸದಸ್ಯರು ಇಲ್ಲ. ಹಾಗಾಗಿ, ಆ ಪಂಚಾಯಿತಿ ಕೈತಪ್ಪಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT