ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರಾಜ ಅರಸು ಜಯಂತಿಗೆ ಸಹಕರಿಸಿ

ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಮಂಜುನಾಥ್‌ ಮನವಿ
Last Updated 5 ಆಗಸ್ಟ್ 2019, 15:59 IST
ಅಕ್ಷರ ಗಾತ್ರ

ಕೋಲಾರ: ‘ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರ 104ನೇ ಜನ್ಮ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ಪ್ರತಿಯೊಬ್ಬರು ಸಹಕರಿಸಬೇಕು’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಮನವಿ ಮಾಡಿದರು.

ದೇವರಾಜ ಅರಸು ಜಯಂತಿ ಸಂಬಂಧ ಇಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ‘ಮಹನೀಯರ ಜಯಂತಿ ಆಚರಣೆಯ ಉದ್ದೇಶದ ಬಗ್ಗೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು’ ಎಂದು ತಿಳಿಸಿದರು.

‘ದೇವರಾಜ ಅರಸು ಅವರು ಕಟ್ಟ ಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಕಲ್ಪಿಸಿದ ಸಾಮಾಜಿಕ ಹರಿಕಾರರು. ಸರ್ವರಿಗೂ ಸಮಬಾಳು ಮತ್ತು ಸರ್ವರಿಗೂ ಸಮಪಾಲು ಕಲ್ಪಿಸಲು ಅರಸು ಸಾಕಷ್ಟು ಶ್ರಮಿಸಿದರು. ಅವರು ಅನುಷ್ಠಾನಗೊಳಿಸಿದ ಯೋಜನೆಗಳು ಸಮಾಜಕ್ಕೆ ದಾರಿದೀಪ’ ಎಂದು ಅಭಿಪ್ರಾಯಪಟ್ಟರು.

‘ಆ.20ರಂದು ದೇವರಾಜ ಅರಸು ಜಯಂತಿ ಆಚರಿಸಲಾಗುತ್ತದೆ. ಆ ದಿನ ಬೆಳಿಗ್ಗೆ 9.30ಕ್ಕೆ ದೇವರಾಜ ಅರಸು ಭವನದ ಬಳಿಯಿಂದ ಪಲ್ಲಕ್ಕಿ ಮೆರವಣಿಗೆ ನಡೆಸಲಾಗುತ್ತದೆ. ನಂತರ ಟಿ.ಚನ್ನಯ್ಯ ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್ ವಿವರಿಸಿದರು.

‘ಮೆರವಣಿಗೆಯಲ್ಲಿ ಇಲಾಖೆಯ 3 ಕಲಾತಂಡ ಭಾಗವಹಿಸುತ್ತವೆ. ಅರಸು ಅವರ ಕುರಿತು ಸಂಪನ್ಮೂಲ ವ್ಯಕ್ತಿಗಳು ವಿಶೇಷ ಉಪನ್ಯಾಸ ನೀಡುತ್ತಾರೆ. ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯಗಳಲ್ಲಿ ವ್ಯಾಸಂಗ ಮಾಡಿದ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಗುವುದು. ಜಯಂತಿ ಅಂಗವಾಗಿ ವಿವಿಧ ಸ್ಪರ್ಧೆ ನಡೆಸಲಾಗಿದ್ದು, ವಿಜೇತರಿಗೆ ಬಹುಮಾನ ವಿತರಿಸಲಾಗುತ್ತದೆ’ ಎಂದರು.

ರಸ್ತೆ ಒತ್ತುವರಿ: ‘ಜಿಲ್ಲಾ ಕೇಂದ್ರದಲ್ಲಿನ ದೇವರಾಜ ಅರಸು ಭವನಕ್ಕೆ ಹೋಗಲು ಸರಿಯಾದ ರಸ್ತೆಯಿಲ್ಲ. ರಸ್ತೆ ಜಾಗವನ್ನು ಕೆಲ ವ್ಯಕ್ತಿಗಳು ಒತ್ತುವರಿ ಮಾಡಿ ಬೇಲಿ ಹಾಕಿಕೊಂಡಿದ್ದಾರೆ’ ಎಂದು ಹಿಂದುಳಿದ ವರ್ಗಗಳ ಮುಖಂಡ ಮಂಜುನಾಥ್ ದೂರಿದರು.

‘ಅರಸು ಭವನ ರಸ್ತೆಯ ಜಾಗದ ಒತ್ತುವರಿ ತೆರವುಗೊಳಿಸುವಂತೆ ನಗರಸಭೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದೇವೆ. ಆದರೂ ಒತ್ತುವರಿ ತೆರವುಗೊಳಿಸಿಲ್ಲ. ನಗರಸಭೆಯಲ್ಲಿ ಈ ಹಿಂದೆ ಚುನಾಯಿತ ಮಂಡಳಿಯೇ ಒತ್ತುವರಿಗೆ ಕಾರಣ’ ಎಂದು ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ಕೆರೆ ಮುಳುಗಡೆ ಜಾಗ ಮತ್ತೊಬ್ಬರಿಗೆ ಯಾವ ಮೂಲದಿಂದ ಮಂಜೂರಾಗಿದೆ ಅಥವಾ ಒತ್ತುವರಿಯಾಗಿದೆಯೇ ಎಂಬುದನ್ನು ಪರಿಶೀಲಿಸಿ ಮಾಹಿತಿ ನೀಡಿ’ ಎಂದು ನಗರಸಭೆ ಆಯುಕ್ತರಿಗೆ ಆದೇಶಿಸಿದರು.

‘ಪ್ರಸ್ತುತ ಶಿಷ್ಟಾಚಾರ ಪಾಲನೆಗೆ ಸಚಿವ ಸಂಪುಟ ರಚನೆಯಾಗಿಲ್ಲ. ಆ.20ರಂದು ಕಾರ್ಯಕ್ರಮ ಇರುವುದರಿಂದ ಆವರೆಗೆ ಕಾದು ನೋಡಿ ಕಾರ್ಯಕ್ರಮದ ಆಹ್ವಾನಪತ್ರಿಕೆ ಮುದ್ರಿಸಬೇಕು’ ಎಂದು ದೇವರಾಜ ಅರಸು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಗಣೇಶ್ ಅವರಿಗೆ ಸೂಚಿಸಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ರಾಜಣ್ಣ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಮೈಲೇರಪ್ಪ, ವಿವಿಧ ಸಮುದಾಯದ ಮುಖಂಡರಾದ ರಾಜೇಶ್‌ಸಿಂಗ್, ಪ್ರಸಾದ್‌ಬಾಬು, ಕೃಷ್ಣಮೂರ್ತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT