ಶುಕ್ರವಾರ, ಅಕ್ಟೋಬರ್ 23, 2020
21 °C
ಗಾಂಧಿ ಜಯಂತಿಯಲ್ಲಿ ಜನರಿಗೆ ನಗರಸಭೆ ಆಯುಕ್ತ ಶ್ರೀಕಾಂತ್ ಮನವಿ

ಪ್ಲಾಸ್ಟಿಕ್ ಮುಕ್ತ ನಗರಕ್ಕೆ ಸಹಕರಿಸಿ: ನಗರಸಭೆ ಆಯುಕ್ತ ಶ್ರೀಕಾಂತ್ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಪ್ಲಾಸ್ಟಿಕ್ ಮುಕ್ತ ನಗರ ನಿರ್ಮಾಣಕ್ಕೆ ಸಾರ್ವಜನಿಕರು ಸಹಕರಿಸಬೇಕು’ ಎಂದು ನಗರಸಭೆ ಆಯುಕ್ತ ಶ್ರೀಕಾಂತ್ ಮನವಿ ಮಾಡಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಗಾಂಧಿ ಜಯಂತಿ ಪ್ರಯುಕ್ತ ಇಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ನವ ಜೀವನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಸಮಾಜದ ಸಮಗ್ರ ಅಭಿವೃದ್ಧಿಗೆ ವಿವಿಧ ಕಾರ್ಯಕ್ರಮ ನಡೆಸಿ ಯಶಸ್ವಿಯಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಸಂಸ್ಥೆಯು ಜಿಲ್ಲೆಯಲ್ಲಿ 1.50 ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ವೈವಿಧ್ಯಮಯ ಕಾರ್ಯಕ್ರಮ ತಲುಪಿಸಿದೆ. ಕೆರೆಗಳ ಅಭಿವೃದ್ಧಿ, ಮದ್ಯವ ರ್ಜನ ಶಿಬಿರ ನಡೆಸುತ್ತಿದೆ’ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಜಿಲ್ಲಾ ನಿರ್ದೇಶಕ ಜೆ.ಚಂದ್ರಶೇಖರ್ ವಿವರಿಸಿದರು.

ಜನಜಾಗೃತಿ ವೇದಿಕೆ ಸದಸ್ಯರಾದ ನಂಜುಂಡಯ್ಯ, ಅರುಣಮ್ಮ, ವೈದ್ಯ ಡಾ.ಡಿ.ಕೆ.ರಮೇಶ್, ಮದ್ಯ ವರ್ಜನ ಶಿಬಿರದ ವ್ಯವಸ್ಥಾಪಕ ಸಮಿತಿ ಉಪಾಧ್ಯಕ್ಷ ವಿಜಯಕುಮಾರ್‌, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ತಾಲ್ಲೂಕು ಯೋಜನಾಧಿಕಾರಿ ಚಂದ್ರಶೇಖರ್‌ ಪಾಲ್ಗೊಂಡರು.

ಆದರ್ಶ ಪಾಲಿಸಬೇಕು: ‘ಗಾಂಧೀಜಿ ತಮಗಾಗಿ ಏನನ್ನೂ ಮಾಡಿಕೊಳ್ಳಲಿಲ್ಲ. ಬದುಕಿರುವವರೆಗೂ ದೇಶಕ್ಕಾಗಿ ದುಡಿದರು. ಎಲ್ಲರೂ ಅವರ ಶ್ರಮದಾನದ ಆದರ್ಶ ಪಾಲಿಸಬೇಕು’ ಎಂದು ಜಯ ಕರ್ನಾಟಕ ಸಂಘಟನೆ ಜಿಲ್ಲಾ ಘಟಕದ ಧ್ಯಕ್ಷ ಕೆ.ಆರ್‌.ತ್ಯಾಗರಾಜ್ ಹೇಳಿದರು.

ಇಲ್ಲಿ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿ, ‘ಅಹಿಂಸೆ ಮತ್ತು ಶಾಂತಿ ಮಾರ್ಗದಲ್ಲಿ ಹೋರಾಟ ನಡೆಸಿದ ಗಾಂಧೀಜಿ ಭಾರತವನ್ನು ಬ್ರಿಟೀಷರ ದಾಸ್ಯದಿಂದ ಮುಕ್ತಗೊಳಿಸಿದರು. ಅಸ್ಪೃಶ್ಯತೆ ಮತ್ತು ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿ ಸಾಮಾಜಿಕವಾಗಿ ತುಳಿತಕ್ಕೆ ಒಳಗಾದವರಿಗೆ ರಕ್ಷಣೆ ನೀಡಿದರು’ ಎಂದು ಸ್ಮರಿಸಿದರು.

ಮಹತ್ವದ ಪಾತ್ರ: ‘ದೇಶಕ್ಕೆ ಸ್ವಾತಂತ್ರ್ಯ ಸಿಗುವಲ್ಲಿ ಮಹಾತ್ಮ ಗಾಂಧೀಜಿ ಮಹತ್ವದ ಪಾತ್ರ ನಿರ್ವಹಿಸಿದರು. ಸತ್ಯ ಮತ್ತು ಅಹಿಂಸೆ ಪ್ರತಿಪಾದಿಸಿದ ಅವರು ಅದೇ ಹಾದಿಯಲ್ಲಿ ಸಾಗಿದರು’ ಎಂದು ತಾಲ್ಲೂಕಿನ ಜನಘಟ್ಟ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಟಿ.ವಿ.ತಿಮ್ಮರಾಯಪ್ಪ ಅಭಿಪ್ರಾಯಪಟ್ಟರು.

ಜನ್ನಘಟ್ಟ ಗ್ರಾ.ಪಂನಲ್ಲಿ ನಡೆದ ಗಾಂಧಿ ಜಯಂತಿಯಲ್ಲಿ ಮಾತನಾಡಿ, ‘ಸಮಾಜದಲ್ಲಿ ಶಾಂತಿ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ. ಗಾಂಧೀಜಿಯವರ ರಾಮ ರಾಜ್ಯದ ಕನಸು ನನಸಾದರೆ ಗ್ರಾಮಗಳು ಅಭಿವೃದ್ಧಿಯಾಗುತ್ತವೆ. ಮಾನವೀಯ ಮೌಲ್ಯ ಮೈಗೂಡಿಸಿಕೊಂಡಾಗ ಮಾತ್ರ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ’ ಎಂದು ಸಲಹೆ ನೀಡಿದರು.

ಗ್ರಾ.ಪಂ ಮಾಜಿ ಸದಸ್ಯರಾದ ಶಂಕರೇಗೌಡ, ರವಿ, ತಾಯಮ್ಮ, ಆಂಜನೇಯರೆಡ್ಡಿ, ನಾಗರಾಜು, ಪಿಡಿಒ ವಿಜಯಲಕ್ಷ್ಮೀ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕೆ.ಟಿ.ಗೋಪಾಲಪ್ಪ, ಜನಪದ ಕಲಾವಿದ ಕೃಷ್ಣಮೂರ್ತಿ ಪಾಲ್ಗೊಂಡರು.

ಭಾರತದ ಹೆಮ್ಮೆ: ‘ಗಾಂಧೀಜಿಯು ವಿಶ್ವದ ಸಾಧಕರ ಅಗ್ರಸಾಲಿನಲ್ಲಿ ನಿಂತದ್ದು ಭಾರತದ ಹೆಮ್ಮೆ. ಪ್ರಪಂಚದ ಎಲ್ಲರೂ ನಿಬ್ಬೆರಗಾಗುವಂತೆ ಬದುಕಿದ ಗಾಂಧಿ ಅವರನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುವ ಅನಿವಾರ್ಯತೆ ಹೆಚ್ಚಿದೆ’ ಎಂದು ಉಪನ್ಯಾಸಕ ಶಂಕರಪ್ಪ ಅಭಿಪ್ರಾಯಪಟ್ಟರು.

ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‌ ವತಿಯಿಂದ ಇಲ್ಲಿ ಆಯೋಜಿಸಿದ್ದ ಗಾಂಧಿ ಜಯಂತಿಯಲ್ಲಿ ಮಾತನಾಡಿ, ‘ಗಾಂಧೀಜಿ ಜೀವನ ಪ್ರಯೋಗದ ಫಲವೇ ಇಂದಿನ ಸ್ವತಂತ್ರ ಭಾರತ. ದೇಶ ಮಾತ್ರವಲ್ಲದೇ ಜಗತ್ತಿನ ಬಹುತೇಕ ರಾಷ್ಟ್ರಗಳು ಗಾಂಧೀಜಿ ಅವರ ಸತ್ಯ ಮತ್ತು ಅಹಿಂಸೆಯ ಮಹತ್ವ ಹಾಗೂ ಅವಶ್ಯಕತೆ ಮನಗಂಡಿವೆ’ ಎಂದರು.

ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಪಿ.ನಾರಾಯಣಪ್ಪ, ಜಿಲ್ಲಾ ಸಿರಿ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಸುಬ್ಬರಾಮಯ್ಯ, ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಶ್ರೀನಿವಾಸ್, ಸಾಹಿತಿ ಶರಣಪ್ಪ ಗಬ್ಬೂರ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಮುರಳಿ ಮೋಹನ್ ಪಾಲ್ಗೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.