ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ | ಎಪಿಎಂಸಿ ನೌಕರನಿಗೆ ಕೊರೊನಾ ಸೋಂಕು

ಸೋಂಕಿತ ಮಂಡಿ ವ್ಯವಸ್ಥಾಪಕನ ಸಂಪರ್ಕ: 11ಕ್ಕೆ ಏರಿದ ಸೋಂಕಿತರು
Last Updated 6 ಜೂನ್ 2020, 3:30 IST
ಅಕ್ಷರ ಗಾತ್ರ

ಕೋಲಾರ: ನಗರದ ಎಪಿಎಂಸಿಯಲ್ಲಿನ ಕಂಪ್ಯೂಟರ್‌ ಆಪರೇಟರ್‌ಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 11ಕ್ಕೆ ಏರಿದೆ.

ಜಿಲ್ಲಾ ಕೇಂದ್ರದ ಕಸ್ತೂರಿನಗರ ಬಡಾವಣೆಯಲ್ಲಿ ಮೇ 27ರಂದು ಪತ್ತೆಯಾಗಿದ್ದ ಕೊರೊನಾ ಸೋಂಕಿತ (ಸೋಂಕಿತನ ಸಂಖ್ಯೆ 2,418) ವ್ಯಕ್ತಿಯ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ ಕಂಪ್ಯೂಟರ್‌ ಆಪರೇಟರ್‌ಗೆ ಇದೀಗ ಸೋಂಕು ಇರುವುದು ದೃಢಪಟ್ಟಿದೆ.

ಕಸ್ತೂರಿನಗರದ ಸೋಂಕಿತ ವ್ಯಕ್ತಿಯು ಎಪಿಎಂಸಿಯ ಟೊಮೆಟೊ ಮಂಡಿಯೊಂದರಲ್ಲಿ ವ್ಯವಸ್ಥಾಪಕರಾಗಿದ್ದಾರೆ. ಎಪಿಎಂಸಿ ಕಚೇರಿ ಕಂಪ್ಯೂಟರ್‌ ಆಪರೇಟರ್‌ ಆ ಮಂಡಿಗೆ ಹೋಗಿ ವ್ಯವಸ್ಥಾಪಕರ ಸಂಪರ್ಕಕ್ಕೆ ಬಂದಿದ್ದ ಕಾರಣಕ್ಕೆ ಅವರನ್ನು ಮೇ 27ರಿಂದ ಕೋಲಾರ ತಾಲ್ಲೂಕಿನ ಕುಂಬಾರಹಳ್ಳಿಯಲ್ಲಿನ ಮನೆಯಲ್ಲೇ ಪ್ರತ್ಯೇಕ ನಿಗಾದಲ್ಲಿ (ಕ್ವಾರಂಟೈನ್‌) ಇರಿಸಲಾಗಿತ್ತು.

ಕಂಪ್ಯೂಟರ್‌ ಆಪರೇಟರ್‌ ಮೂರ್ನಾಲ್ಕು ದಿನಗಳ ಹಿಂದೆ ಕೆಲಸಕ್ಕೆ ಮರಳುವುದಾಗಿ ಹೇಳಿದ್ದರಿಂದ ಎಪಿಎಂಸಿ ಅಧಿಕಾರಿಗಳು ವೈದ್ಯಕೀಯ ಪರೀಕ್ಷೆಗೆ ಒಳಗಾಗುವಂತೆ ಸೂಚಿಸಿದ್ದರು. ಆರೋಗ್ಯ ಇಲಾಖೆ ಸಿಬ್ಬಂದಿಯು ಕಂಪ್ಯೂಟರ್‌ ಆಪರೇಟರ್‌ರ ಕಫಾ ಮತ್ತು ರಕ್ತ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಬುಧವಾರ ಪ್ರಯೋಗಾಲಯದ ವರದಿ ಬಂದಿದ್ದು, ಸೋಂಕು ಇರುವುದು ಖಚಿತವಾಗಿದೆ. ಹೀಗಾಗಿ ಇವರನ್ನು ಎಸ್‌ಎನ್‌ಆರ್‌ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೋಂಕಿತ ಕಂಪ್ಯೂಟರ್‌ ಆಪರೇಟರ್ ಜತೆ ಅವರ ತಂದೆ, ತಾಯಿ ಸೇರಿದಂತೆ ಗ್ರಾಮದ 10ಕ್ಕೂ ಹೆಚ್ಚು ಮಂದಿ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದಾರೆ. ಅವರೆಲ್ಲರನ್ನೂ ಮಂಗಸಂದ್ರದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿನಿಲಯದಲ್ಲಿ ಕ್ವಾರಂಟೈನ್‌ ಮಾಡಲಾಗಿದೆ.

ಕಂಟೈನ್‌ಮೆಂಟ್‌: ಜಿಲ್ಲಾಡಳಿತವು ಕುಂಬಾರಹಳ್ಳಿಯನ್ನು ನಿರ್ಬಂಧಿತ ಪ್ರದೇಶವಾಗಿ (ಕಂಟೈನ್‌ಮೆಂಟ್‌) ಘೋಷಿಸಿದ್ದು, ಇಡೀ ಗ್ರಾಮವನ್ನು ಸೀಲ್‌ಡೌನ್‌ ಮಾಡಲಾಗಿದೆ. ಸೋಂಕಿತ ವ್ಯಕ್ತಿಯ ಮನೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಯಿತು. ಗ್ರಾಮದ ಜನರು ಹೊರಗೆ ಹೋಗಬಾರದು ಮತ್ತು ಹೊರಗಿನ ಜನರು ಗ್ರಾಮಕ್ಕೆ ಬರದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಗುಣಮುಖ: ಎಸ್‌ಎನ್‌ಆರ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊರೊನಾ ಸೋಂಕಿತರ ಪೈಕಿ 7 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಶುಕ್ರವಾರ ಮನೆಗೆ ಮರಳಿದರು. ಬಂಗಾರಪೇಟೆ ತಾಲ್ಲೂಕಿನ 3 ಮಂದಿ ಹಾಗೂ ಮಾಲೂರು, ಕೆಜಿಎಫ್‌, ಮುಳಬಾಗಿಲು, ಶ್ರೀನಿವಾಸಪುರ ತಾಲ್ಲೂಕಿನ ತಲಾ ಒಬ್ಬ ಸೋಂಕಿತರು ಮನೆಗೆ ತೆರಳಿದರು. ಸದ್ಯ ಕೋಲಾರ ತಾಲ್ಲೂಕಿನಲ್ಲಿ ಅತಿ ಹೆಚ್ಚು 6 ಮಂದಿ ಕೊರೊನಾ ಸೋಂಕಿತರಿದ್ದಾರೆ. ಉಳಿದಂತೆ ಮುಳಬಾಗಿಲು ತಾಲ್ಲೂಕಿನಲ್ಲಿ 2 ಮತ್ತು ಬಂಗಾರಪೇಟೆ, ಕೆಜಿಎಫ್‌ ಹಾಗೂ ಮಾಲೂರು ತಲಾ ಒಬ್ಬರು ಸೋಂಕಿತರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT