ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಭೀತಿ: ಎಸ್ಸೆಸ್ಸೆಲ್ಸಿ ಅಣಕು ಪರೀಕ್ಷೆ

ಸವಾಲು ಗೆಲ್ಲುವುದು ಅನಿವಾರ್ಯ: ಡಿಡಿಪಿಐ ರತ್ನಯ್ಯ ಹೇಳಿಕೆ
Last Updated 15 ಜೂನ್ 2020, 12:24 IST
ಅಕ್ಷರ ಗಾತ್ರ

ಕೋಲಾರ: ಕೊರೊನಾ ಸೋಂಕಿನ ಆತಂಕದ ನಡುವೆಯೂ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಸಿದ್ಧವಾಗಿರುವ ಶಿಕ್ಷಣ ಇಲಾಖೆಯು ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ತಾಲ್ಲೂಕಿನ ನರಸಾಪುರ ಗ್ರಾಮದ ವ್ಯಾಲಿ ಪಬ್ಲಿಕ್ ಶಾಲೆ ಕೇಂದ್ರದಲ್ಲಿ ಸೋಮವಾರ ಯಶಸ್ವಿಯಾಗಿ ಅಣಕು ಪರೀಕ್ಷೆ ನಡೆಸಿತು.

ಕೊರೊನಾ ಸೋಂಕಿನ ಅಟ್ಟಹಾಸದಿಂದ ಇಡೀ ವಿಶ್ವ ಕಂಗೆಟ್ಟಿರುವಾಗ ಶಿಕ್ಷಣ ಇಲಾಖೆಯು ಡಿಡಿಪಿಐ ಕೆ.ರತ್ನಯ್ಯ ನೇತೃತ್ವದಲ್ಲಿ ಜಾಗೃತಿ ವಹಿಸಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಮಕ್ಕಳನ್ನು ಸಜ್ಜುಗೊಳಿಸಿತು. ಜೂನ್‌ 25ರಿಂದ ಆರಂಭವಾಗಲಿರುವ ಮೂಲ ಪರೀಕ್ಷೆಗೆ ಇಲಾಖೆ ಸನ್ನದ್ಧವಾಗಿದೆ ಎಂದು ಸಾಕ್ಷೀಕರಿಸಲಾಯಿತು.

‘ಕೋವಿಡ್–19 ಸಂಕಷ್ಟದ ಪರಿಸ್ಥಿತಿ ಅಪರೂಪವಾಗಿದ್ದು, ಸೋಂಕು ಹರಡುವಿಕೆ ತಡೆಯುವ ಶಕ್ತಿ ನಮ್ಮ ಕೈಯಲ್ಲೇ ಇದೆ. ಮಕ್ಕಳಲ್ಲಿ ಹೆಜ್ಜೆಹೆಜ್ಜೆಗೂ ಅರಿವು ಮೂಡಿಸಿ ಅಂತರ ಕಾಯ್ದುಕೊಂಡು ಮುನ್ನಡೆಯಲು ಅಣಕು ಪರೀಕ್ಷೆ ಸಹಕಾರಿಯಾಗಿದೆ’ ಎಂದು ರತ್ನಯ್ಯ ಅಭಿಪ್ರಾಯಪಟ್ಟರು.

‘ಸೋಂಕು ಹರಡುವಿಕೆ ತಡೆದು ಸಮಸ್ಯೆಗಳಿಲ್ಲದೆ ಪರೀಕ್ಷೆ ನಡೆಸಲು ಏನೆಲ್ಲಾ ಮಾಡಬಹುದು ಎಂಬುದನ್ನು ಅರಿಯಲು ಇಲಾಖೆಗೂ ಇದೊಂದು ಸುಸಂದರ್ಭ. ಕೋವಿಡ್‌–19 ಸವಾಲು ಸ್ವೀಕರಿಸಿ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ’ ಎಂದು ಹೇಳಿದರು.

‘ಪರೀಕ್ಷೆಗೆ ಬರುವ ಮಕ್ಕಳು ಹಾಗೂ ಪರೀಕ್ಷಾ ಕೇಂದ್ರಕ್ಕೆ ನಿಯೋಜನೆಗೊಂಡ ಸಿಬ್ಬಂದಿಗೆ ಥರ್ಮಲ್‌ ಸ್ಕ್ರೀನಿಂಗ್‌ ಮಾಡಲಾಗುತ್ತದೆ. ಜತೆಗೆ ಕೇಂದ್ರದ ಪ್ರವೇಶ ಭಾಗದಲ್ಲೇ ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳಲು ಸ್ಯಾನಿಟೈಸರ್‌ ನೀಡಲಾಗುತ್ತದೆ. ನಿಯಮಾನುಸಾರ ಮೊಬೈಲ್ ವಶಕ್ಕೆ ಪಡೆದು ಸಿಬ್ಬಂದಿ ಮತ್ತು ವಿದ್ಯಾರ್ಥಿಗಳನ್ನು ಕೇಂದ್ರದೊಳಗೆ ಬಿಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ಬಸ್ ಸೌಲಭ್ಯ: ವ್ಯಾಲಿ ಪಬ್ಲಿಕ್ ಶಾಲೆ ಪರೀಕ್ಷಾ ಕೇಂದ್ರಕ್ಕೆ ಬಂದ ಮಕ್ಕಳನ್ನು ಖಾಸಗಿ ಶಾಲೆಗಳ ಸ್ಯಾನಿಟೈಸ್ ಮಾಡಿದ ಬಸ್‌ಗಳಲ್ಲೇ ಅಂತರ ಕಾಯ್ದುಕೊಂಡು ಕರೆತರಲಾಯಿತು. ಆಶಾ ಕಾರ್ಯಕರ್ತೆಯರು, ಶುಶ್ರೂಷಕಿಯರ ತಂಡವು ಪ್ರತಿ ವಿದ್ಯಾರ್ಥಿಯ ಥರ್ಮಲ್ ಸ್ಕ್ರೀನಿಂಗ್‌ ಮಾಡಿ ಕೈಗಳಿಗೆ ಸ್ಯಾನಿಟೈಸರ್ ಹಾಕಲಾಯಿತು. ಜತೆಗೆ ಮಾಸ್ಕ್‌ ನೀಡಲಾಯಿತು.

ವಾರ್ಷಿಕ ಪಬ್ಲಿಕ್ ಪರೀಕ್ಷೆ ಮಾದರಿಯಲ್ಲೇ ಪ್ರಶ್ನೆಪತ್ರಿಕೆಗಳ ರವಾನೆ, ಕೊಠಡಿ ಮೇಲ್ವಿಚಾರಕರು ಗ್ಲೌಸ್, ಮಾಸ್ಕ್ ಧರಿಸಿ ಕಾಲಕಾಲಕ್ಕೆ ಸ್ಯಾನಿಟೈಸ್ ಬಳಸಿ ಮಕ್ಕಳಿಗೆ ಉತ್ತರ ಪತ್ರಿಕೆ ಮತ್ತು ಪ್ರಶ್ನೆಪತ್ರಿಕೆ ನೀಡಿದರು. ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಂಸ್ಥೆ ಸ್ವಯಂ ಸೇವಕರು ಮಕ್ಕಳಿಗೆ ಕುಡಿಯುವ ನೀರು ಪೂರೈಕೆ ಮಾಡಿದರು.

ಮಾಹಿತಿ ನೀಡಿಕೆ: ಧ್ವನಿವರ್ಧಕದ ಮೂಲಕ ಪರೀಕ್ಷಾ ಕೊಠಡಿಗಳ ಮಾಹಿತಿ ನೀಡಲಾಯಿತು. ಕೇಂದ್ರಕ್ಕೆ ಸ್ಥಾನಿಕ ಜಾಗೃತಿ ದಳ ನೇಮಕ, ಕೊಠಡಿಗಳಲ್ಲಿ ಅಂತರ ಕಾಯ್ದುಕೊಳ್ಳುವಿಕೆ, ಜ್ವರ, ನೆಗಡಿ ಲಕ್ಷಣವಿರುವ ಮಕ್ಕಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ, ಶೌಚಾಲಯ, ಕೈ ತೊಳೆಯಲು ನೀರು ಮತ್ತು ಸೋಪು, ಸೋಂಕು ನಿವಾರಕ ದ್ರಾವಣ ಸಿಂಪಡಣೆ, ಮಕ್ಕಳು ಅಂತರ ಕಾಯ್ದುಕೊಳ್ಳಲು ಅನುಕೂಲವಾಗುವಂತೆ ಬಾಕ್ಸ್‌ ರಚನೆ ಸೇರಿದಂತೆ ಎಲ್ಲಾ ಮುನ್ನಚ್ಚರಿಕೆ ಕ್ರಮ ವಹಿಸಲಾಯಿತು.

ಎಸ್ಸೆಸ್ಸೆಲ್ಸಿ ಪರೀಕ್ಷಾ ಜಿಲ್ಲಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್, ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ, ಎವೈಪಿಸಿ ಸಿದ್ದೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT