ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರ ರಾಜ್ಯ–ಜಿಲ್ಲೆಯ ಸೋಂಕಿತರ ವಲಸೆ: ರೆಮ್‌ಡಿಸಿವರ್‌–ಆಮ್ಲಜನಕಕ್ಕೆ ಬೇಡಿಕೆ

ಜಿಲ್ಲೆಯ ಕೋವಿಡ್‌ ಆಸ್ಪತ್ರೆಗಳು ಭರ್ತಿ
Last Updated 23 ಏಪ್ರಿಲ್ 2021, 14:36 IST
ಅಕ್ಷರ ಗಾತ್ರ

ಕೋಲಾರ: ನೆರೆಹೊರೆ ರಾಜ್ಯಗಳ ಹಾಗೂ ಜಿಲ್ಲೆಗಳ ಕೊರೊನಾ ಸೋಂಕಿತರು ಚಿಕಿತ್ಸೆಗಾಗಿ ಜಿಲ್ಲೆಯತ್ತ ವಲಸೆ ಬರುತ್ತಿದ್ದು, ಜಿಲ್ಲೆಯ ಕೋವಿಡ್‌ ಆಸ್ಪತ್ರೆಗಳು ಸೋಂಕಿತರಿಂದ ಭರ್ತಿಯಾಗಿವೆ.

ರಾಜ್ಯದ ರಾಜಧಾನಿ ಬೆಂಗಳೂರಿನ ಕೋವಿಡ್‌ ಆಸ್ಪತ್ರೆಗಳಲ್ಲಿ ಬೆಡ್‌, ಆಕ್ಸಿಜನ್‌, ಆಂಬುಲೆನ್ಸ್‌ ಸೇವೆ ಹಾಗೂ ವೆಂಟಿಲೇಟರ್‌ಗಳ ಕೊರತೆ ಎದುರಾಗಿರುವುದರಿಂದ ಸೋಂಕಿತರಿಗೆ ಸಕಾಲಕ್ಕೆ ಚಿಕಿತ್ಸೆ ಸಿಗುತ್ತಿಲ್ಲ. ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿರುವುದರಿಂದ ಆಕ್ಸಿಜನ್‌ ಮತ್ತು ಬೆಡ್‌ಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುವ ಪರಿಸ್ಥಿತಿ ಸೃಷ್ಟಿಯಾಗಿದೆ.

ಮತ್ತೊಂದೆಡೆ ಪಕ್ಕದ ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಗಡಿ ಭಾಗದಲ್ಲಿನ ಸೋಂಕಿತರು ಚಿಕಿತ್ಸೆಗಾಗಿ ಜಿಲ್ಲೆಯ ಕೋವಿಡ್ ಆಸ್ಪತ್ರೆಗಳಿಗೆ ಬರುತ್ತಿದ್ದಾರೆ. ಜಿಲ್ಲೆಯ ಸೋಂಕಿತರ ಚಿಕಿತ್ಸೆಗೆ ಬೆಡ್‌ ಮತ್ತು ಆಕ್ಸಿಜನ್‌ ಕೊರತೆ ಆಗಬಹುದೆಂಬ ಆತಂಕದಿಂದ ವೈದ್ಯರು ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳ ಸೋಂಕಿತರನ್ನು ದಾಖಲಿಸಿಕೊಳ್ಳಲು ನಿರಾಕರಿಸುತ್ತಿದ್ದಾರೆ.

ಆದರೂ ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳ ಸೋಂಕಿತರು ಜನಪ್ರತಿನಿಧಿಗಳು, ಕಂದಾಯ ಮತ್ತು ಪೊಲೀಸ್ ಇಲಾಖೆಯಲ್ಲಿನ ಹಿರಿಯ ಅಧಿಕಾರಿಗಳ ಮೂಲಕ ವೈದ್ಯರ ಒತ್ತಡ ಹಾಕಿಸಿ ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ.

ಜಿಲ್ಲೆಯಲ್ಲಿ ಸದ್ಯ ಎಸ್‌ಎನ್‌ಆರ್‌ ಜಿಲ್ಲಾ ಆಸ್ಪತ್ರೆ ಮತ್ತು ಜಾಲಪ್ಪ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಒಟ್ಟಾರೆ 500 ಹಾಸಿಗೆ ಸಾಮರ್ಥ್ಯದ ಎಸ್‌ಎನ್ಆರ್‌ ಆಸ್ಪತ್ರೆಯಲ್ಲಿ 200 ಹಾಸಿಗೆಗಳನ್ನು ಕೊರೊನಾ ಸೋಂಕಿತರ ಚಿಕಿತ್ಸೆಗೆ ಮೀಸಲಿಡಲಾಗಿದ್ದು, ಈಗಾಗಲೇ 190 ಹಾಸಿಗೆಗಳು ಸೋಂಕಿತರಿಂದ ಭರ್ತಿಯಾಗಿವೆ.

ಎಸ್‌ಎನ್‌ಆರ್‌ ಆಸ್ಪತ್ರೆಯ ಕೋವಿಡ್‌ ವಿಭಾಗದ ತೀವ್ರ ನಿಗಾ ಘಟಕದಲ್ಲಿ (ಐಸಿಯು) 40 ಹಾಸಿಗೆಗಳಿವೆ. ಇದರಲ್ಲಿ 21 ಹಾಸಿಗೆಗಳಿಗೆ ವೆಂಟಿಲೇಟರ್‌ ಮತ್ತು ವೈದ್ಯಕೀಯ ಆಕ್ಸಿಜನ್‌ ಸೌಲಭ್ಯ ಕಲ್ಪಿಸಲಾಗಿದೆ. ಈ ಹಾಸಿಗೆಗಳು ಸಂಪೂರ್ಣ ಭರ್ತಿಯಾಗಿವೆ. ಉಳಿದ 19 ಹಾಸಿಗೆಗಳಿಗೆ ಆಕ್ಸಿಜನ್‌ ಸಂಪರ್ಕ ಮಾತ್ರ ಇದ್ದು, ಈ ಹಾಸಿಗೆಗಳು ಸೋಂಕಿತರಿಂದ ತುಂಬಿ ಹೋಗಿವೆ.

ಜಾಲಪ್ಪ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರ ಚಿಕಿತ್ಸೆಗೆ 1 ಸಾವಿರ ಬೆಡ್‌ ಮೀಸಲಿಡಲಾಗಿದೆ. ಈ ಪೈಕಿ 320 ಬೆಡ್‌ಗಳಿಗೆ ಆಕ್ಸಿಜನ್‌ ಸಂಪರ್ಕ ಕಲ್ಪಿಸಲಾಗಿದೆ. ತೀವ್ರ ನಿಗಾ ಘಟಕವು 76 ಹಾಸಿಗೆ ಸಾಮರ್ಥ್ಯ ಹೊಂದಿದೆ. ಜಾಲಪ್ಪ ಆಸ್ಪತ್ರೆಯ ತೀವ್ರ ನಿಗಾ ಘಟಕದ ಬಹುತೇಕ ಹಾಸಿಗೆಗಳು ಭರ್ತಿಯಾಗಿವೆ. ತಾಲ್ಲೂಕು ಸರ್ಕಾರಿ ಆಸ್ಪತ್ರೆಗಳ ಐಸಿಯು ಘಟಕಗಳಲ್ಲಿ ಹೆಚ್ಚಿನ ಸಂಖ್ಯೆ ಹೊರ ರಾಜ್ಯ ಮತ್ತು ಹೊರ ಜಿಲ್ಲೆಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಾಣವಾಯುಗೆ ಬೇಡಿಕೆ: ಸೋಂಕಿತರ ಜೀವ ಉಳಿಸುವ ಪ್ರಾಣವಾಯು ವೈದ್ಯಕೀಯ ಆಮ್ಲಜನಕಕ್ಕೆ (ಆಕ್ಸಿಜನ್‌) ಜಿಲ್ಲೆಯಲ್ಲಿ ದಿಢೀರ್ ಬೇಡಿಕೆ ಹೆಚ್ಚಿದೆ. ಜಿಲ್ಲಾ ಆಸ್ಪತ್ರೆಯ ಆಕ್ಸಿಜನ್‌ ಘಟಕಕ್ಕೆ ಈ ಹಿಂದೆ ವಾರಕ್ಕೆ ಆಕ್ಸಿಜನ್‌ನ 200 ಕಿಲೋ ಲೀಟರ್‌ ಸಾಮರ್ಥ್ಯದ 2 ಸಿಲಿಂಡರ್‌ ಸಾಕಾಗುತ್ತಿದ್ದವು. ಈಗ ಸೋಂಕಿತರ ಸಂಖ್ಯೆ ಹೆಚ್ಚಳ ಮತ್ತು ಅವರ ದೇಹಸ್ಥಿತಿ ಗಂಭೀರವಾಗುತ್ತಿರುವ ಹಿನ್ನೆಲೆಯಲ್ಲಿ ದಿನಕ್ಕೆ 24 ಸಿಲಿಂಡರ್‌ ಬೇಕಾಗುತ್ತಿವೆ.

ದಾಬಸ್‌ಪೇಟೆಯಲ್ಲಿರುವ ಪ್ರ್ಯಾಕ್ಸ್‌ ಏರ್‌ ಮತ್ತು ಬೆಂಗಳೂರಿನ ಮೈಲಾನ್ ಕಂಪನಿಯ ಆಮ್ಲಜನಕ ಉತ್ಪಾದನಾ ಘಟಕಗಳಿಂದ ಜಿಲ್ಲೆಯ ಎಸ್‌ಎನ್‌ಆರ್‌ ಹಾಗೂ ಜಾಲಪ್ಪ ಆಸ್ಪತ್ರೆಗೆ ವೈದ್ಯಕೀಯ ಆಕ್ಸಿಜನ್‌ ಪೂರೈಕೆಯಾಗುತ್ತಿದೆ. ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ವೈದ್ಯಕೀಯ ಆಮ್ಲಜನಕದ 50 ಜಂಬೊ ಸಿಲಿಂಡರ್‌ ದಾಸ್ತಾನು ಇದೆ. ಜತೆಗೆ ಸ್ವಲ್ಪ ಪ್ರಮಾಣದಲ್ಲಿ ದ್ರವ ರೂಪದ ಆಕ್ಸಿಜನ್‌ ಮತ್ತು ಸುಮಾರು 500 ವಯಲ್‌ ರೆಮ್‌ಡಿಸಿವರ್‌ ಚುಚ್ಚುಮದ್ದು ಲಭ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT