ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಕೋವಿಡ್‌ 3ನೇ ಅಲೆ; ಸಮರೋಪಾದಿ ಸಿದ್ಧತೆ

ಮಕ್ಕಳಿಗೆ ಕಂಟಕ: ಆರೋಗ್ಯ ಇಲಾಖೆ ಸರ್ವ ಸನ್ನದ್ಧ
Last Updated 3 ಆಗಸ್ಟ್ 2021, 19:30 IST
ಅಕ್ಷರ ಗಾತ್ರ

ಕೋಲಾರ: ಮಕ್ಕಳಿಗೆ ಕಂಟಕವಾಗಲಿರುವ ಕೋವಿಡ್‌ 3ನೇ ಅಲೆ ಎದುರಿಸಲು ಜಿಲ್ಲಾಡಳಿತವು ಸಜ್ಜಾಗಿದ್ದು, ಆರೋಗ್ಯ ಇಲಾಖೆಯು ಸೋಂಕಿತ ಮಕ್ಕಳ ಚಿಕಿತ್ಸೆಗೆ ಸಮರೋಪಾದಿಯಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಕೋವಿಡ್‌ ಒಂದು ಮತ್ತು ಎರಡನೇ ಅಲೆ ಅಂತ್ಯಗೊಂಡಿದ್ದು, ಇದೇ ತಿಂಗಳಲ್ಲಿ 3ನೇ ಅಲೆ ಆರಂಭವಾಗುವ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಆರೋಗ್ಯ ಇಲಾಖೆಯು ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ತೀವ್ರ ನಿಗಾ ಘಟಕ (ಐಸಿಯು) ಹಾಸಿಗೆ ಹಾಗೂ ವೈದ್ಯಕೀಯ ಆಮ್ಲಜನಕ ಸಂಪರ್ಕವುಳ್ಳ ಹಾಸಿಗೆಗಳ ಸಂಖ್ಯೆ ಹೆಚ್ಚಿಸುತ್ತಿದೆ.

ಕೋವಿಡ್‌ 2ನೇ ಅಲೆಯಲ್ಲಿ ಚುಚ್ಚುಮದ್ದು, ಔಷಧ, ಮಾತ್ರೆ, ಐಸಿಯು ಮತ್ತು ಆಮ್ಲಜನಕ ಸಂಪರ್ಕವುಳ್ಳ ಹಾಸಿಗೆಗಳ ಕೊರತೆಯಿಂದ ಜಿಲ್ಲೆಯಲ್ಲಿ ಹೆಚ್ಚಿನ ಸಾವು ನೋವು ಸಂಭವಿಸಿದ್ದವು. ಸಾಕಷ್ಟು ಸೋಂಕಿತರು ಆಸ್ಪತ್ರೆಗಳಲ್ಲಿ ಸಕಾಲಕ್ಕೆ ಹಾಸಿಗೆ ಸಿಗದೆ ಪ್ರಾಣ ಬಿಟ್ಟಿದ್ದರು. 2ನೇ ಅಲೆಯ ತೀವ್ರತೆಯಿಂದ ಎಚ್ಚೆತ್ತಿರುವ ಆರೋಗ್ಯ ಇಲಾಖೆಯು ಮಕ್ಕಳ ಸುರಕ್ಷತೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದೆ.

ಜಿಲ್ಲೆಯಲ್ಲಿ 18 ವರ್ಷದೊಳಗಿನ ಸುಮಾರು 6 ಲಕ್ಷ ಮಕ್ಕಳಿದ್ದಾರೆ. 3ನೇ ಅಲೆಯಲ್ಲಿ ಸೋಂಕಿತ ಮಕ್ಕಳಿಗೆ ಚಿಕಿತ್ಸೆ ನೀಡಲು ಪ್ರತಿ ತಾಲ್ಲೂಕು ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್‌ ಆರೈಕೆ ಕೇಂದ್ರ ತೆರೆಯಲಾಗಿದೆ. 3ನೇ ಅಲೆಯಲ್ಲಿ ಮಕ್ಕಳ ಜತೆಗೆ ಯಾವುದೇ ವಯೋಮಾನದವರಿಗೆ ಕೊರೊನಾ ಸೋಂಕು ತಗುಲುವ ಆತಂಕವಿದ್ದು, ಆರೋಗ್ಯ ಇಲಾಖೆ ಸರ್ವ ಸನ್ನದ್ಧವಾಗಿದೆ.

ಮಕ್ಕಳಿಗೆ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳ ತಜ್ಞರು, ತಾಂತ್ರಿಕ ಸಿಬ್ಬಂದಿ, ಸಹಾಯಕರನ್ನು ನೇಮಿಸಿಕೊಳ್ಳಲಾಗಿದೆ. ಅಲ್ಲದೇ, ಮಕ್ಕಳ ಚಿಕಿತ್ಸೆಗೆ ಅಗತ್ಯವಿರುವ ಔಷಧ, ಮಾತ್ರೆ, ವೈದ್ಯಕೀಯ ಸಲಕರಣೆಗಳನ್ನು ದಾಸ್ತಾನು ಮಾಡಲಾಗಿದೆ.

ಪ್ರತ್ಯೇಕ ಐಸಿಯು: ಸೋಂಕಿತ ಮಕ್ಕಳ ಚಿಕಿತ್ಸೆಗೆ ಎಸ್‍ಎನ್‍ಆರ್ ಜಿಲ್ಲಾ ಆಸ್ಪತ್ರೆ ಮತ್ತು ಜಿಲ್ಲಾ ಕೇಂದ್ರದ ಆರ್.ಎಲ್.ಜಾಲಪ್ಪ ಆಸ್ಪತ್ರೆಯನ್ನು ಗುರುತಿಸಲಾಗಿದೆ. ಈ ಎರಡೂ ಆಸ್ಪತ್ರೆಯಲ್ಲಿ ಮಕ್ಕಳಿಗಾಗಿ ಪ್ರತ್ಯೇಕ ಐಸಿಯು ಹಾಗೂ ವೈದ್ಯಕೀಯ ಆಮ್ಲಜನಕ ಸಂಪರ್ಕವುಳ್ಳ ವೆಂಟಿಲೇಟರ್ ವ್ಯವಸ್ಥೆ ಮಾಡಲಾಗಿದೆ. ಕೋಲಾರ ತಾಲ್ಲೂಕಿನ ಮದನಹಳ್ಳಿ ಬಳಿ ಸೋಂಕಿತ ಮಕ್ಕಳ ಚಿಕಿತ್ಸೆಗಾಗಿಯೇ ಪ್ರತ್ಯೇಕ ಕೇಂದ್ರ ಆರಂಭಿಸಲು ನಿರ್ಧರಿಸಲಾಗಿದೆ.

ಜಿಲ್ಲಾ ಆಸ್ಪತ್ರೆ ಹಾಗೂ ಎಲ್ಲಾ ತಾಲ್ಲೂಕು ಆಸ್ಪತ್ರೆಗಳಲ್ಲಿ ವೈದ್ಯಕೀಯ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಆರಂಭಿಸಲಾಗಿದೆ. ಹೀಗಾಗಿ ಸೋಂಕಿತರ ಚಿಕಿತ್ಸೆಗೆ ವೈದ್ಯಕೀಯ ಆಮ್ಲಜನಕದ ಕೊರತೆ ಆಗುವುದಿಲ್ಲ ಎಂದು ಆರೋಗ್ಯ ಇಲಾಖೆ ನಿರೀಕ್ಷಿಸಿದೆ. ದಾನಿಗಳು ನೀಡಿರುವ 70ಕ್ಕೂ ಹೆಚ್ಚು ಆಮ್ಲಜನಕ ಸಾಂದ್ರಕಗಳನ್ನು ಸಮರ್ಪಕವಾಗಿ ಬಳಕೆ ಮಾಡಲು ಆರೋಗ್ಯ ಇಲಾಖೆ ನಿರ್ಧರಿಸಿದೆ.

40 ಮಕ್ಕಳ ತಜ್ಞರು: ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಸೇರಿದಂತೆ ಒಟ್ಟಾರೆ ಸುಮಾರು 40 ಮಂದಿ ಮಕ್ಕಳ ತಜ್ಞರಿದ್ದಾರೆ. 3ನೇ ಅಲೆ ಸಮರ್ಥವಾಗಿ ಎದುರಿಸಲು ಅಗತ್ಯವಿರುವ ವೈದ್ಯಕೀಯ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗುತ್ತಿದೆ. ಸೋಂಕಿತ ಮಕ್ಕಳ ಚಿಕಿತ್ಸಾ ವಿಧಾನದ ಬಗ್ಗೆ ಜಾಲಪ್ಪ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಸಿಬ್ಬಂದಿಗೆ ತರಬೇತಿ ಸಹ ನೀಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT