ಮಂಗಳವಾರ, ಜೂನ್ 2, 2020
27 °C
ಮಕ್ಕಳ ಮನೆಗೆ ತೆರಳಿ ಶೈಕ್ಷಣಿಕ ಪ್ರಗತಿ ಅವಲೋಕಿಸಿ: ಬಿಇಒ ನಾಗರಾಜಗೌಡ

ಎಸ್ಸೆಸ್ಸೆಲ್ಸಿ ಪರೀಕ್ಷೆ: ಶಿಕ್ಷಕರ ತಂಡ ರಚಿಸಲು ಕ್ಷೇತ್ರ ಶಿಕ್ಷಣಾಧಿಕಾರಿ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಎಸ್ಸೆಸ್ಸೆಲ್ಸಿ ಪರೀಕ್ಷೆ ಹಿನ್ನೆಲೆಯಲ್ಲಿ ಶಿಕ್ಷಕರ ತಂಡಗಳನ್ನು ರಚಿಸಿ ಮನೆ ಮನೆಗೆ ತೆರಳಿ ಮಕ್ಕಳ ಶೈಕ್ಷಣಿಕ ಪ್ರಗತಿ ಅವಲೋಕಿಸಬೇಕು. ಜತೆಗೆ ಪರೀಕ್ಷೆ ಮತ್ತು ಪಠ್ಯವಿಷಯದ ಗೊಂದಲ ನಿವಾರಿಸಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ ಶಿಕ್ಷಕರಿಗೆ ಸೂಚನೆ ನೀಡಿದರು.

ತಾಲ್ಲೂಕಿನ ಕೆಂಬೋಡಿ ಗ್ರಾಮದ ಜನತಾ ಪ್ರೌಢ ಶಾಲೆಗೆ ಶುಕ್ರವಾರ ಭೇಟಿ ನೀಡಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಸಿದ್ಧತೆ ಪರಿಶೀಲಿಸಿ ಮಾತನಾಡಿ, ‘ಕೊರೊನಾ ಸೋಂಕು ಹರಡುವಿಕೆ ಭೀತಿ ಹಿನ್ನೆಲೆಯಲ್ಲಿ ಸರ್ಕಾರ ಮಕ್ಕಳಿಗೆ ಪರೀಕ್ಷಾ ಪೂರ್ವ ವ್ಯಾಸಂಗದ ರಜೆ ನೀಡಿದೆ. ಹೀಗಾಗಿ ಮಕ್ಕಳು ಶಾಲೆಗೆ ಬರುತ್ತಿಲ್ಲ. ಆದ ಕಾರಣ ಶಿಕ್ಷಕರು ಮಕ್ಕಳ ಮನೆಗೆ ತೆರಳಿ ಪರೀಕ್ಷೆಗೆ ಸಂಬಂಧಪಟ್ಟಂತೆ ಸಲಹೆ ನೀಡಬೇಕು’ ಎಂದು ತಿಳಿಸಿದರು.

‘ಪರೀಕ್ಷೆ ಆರಂಭಕ್ಕೆ ನಾಲ್ಕೈದು ದಿನವಷ್ಟೇ ಬಾಕಿಯಿದೆ. ಈ ಹಂತದಲ್ಲಿ ಓದು ಪರಿಣಾಮಕಾರಿಯಾಗಿರಬೇಕು. ಅವರಿಗೆ ಶಿಕ್ಷಕರ ಮಾರ್ಗದರ್ಶನ ಸಿಗದಿದ್ದರೆ ಫಲಿತಾಂಶದ ಮೇಲೆ ಪ್ರತಿಕೂಲ ಪರಿಣಾಮವಾಗುತ್ತದೆ. ಇದರಿಂದ ಜಿಲ್ಲೆಯ ಫಲಿತಾಂಶ ಕುಸಿಯುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಶನಿವಾರದಿಂದಲೇ ಶಾಲಾ ಮುಖ್ಯ ಶಿಕ್ಷಕರು ಒಂದೊಂದು ಶಿಕ್ಷಕರ ತಂಡಗಳನ್ನು ರಚಿಸಿ ಮಕ್ಕಳ ಮನೆಗಳಿಗೆ ಕಳುಹಿಸಬೇಕು. ಮಕ್ಕಳ ಶೈಕ್ಷಣಿಕ ಪ್ರಗತಿ ಮತ್ತು ಕಾರ್ಯ ಚಟುವಟಿಕೆಗಳ ಬಗ್ಗೆ ನಿಗಾ ಇಡಬೇಕು. ಜತೆಗೆ ಪರೀಕ್ಷೆಗೆ ಸಂಬಂಧಪಟ್ಟಂತೆ ಅವರಿಗೆ ಮಾರ್ಗದರ್ಶನ ನೀಡಬೇಕು’ ಎಂದು ಹೇಳಿದರು.

‘ಶಿಕ್ಷಕರ ತಂಡಗಳು ಮಕ್ಕಳ ಬಗ್ಗೆ ನಿಗಾ ಇಡುವ ಕಾರ್ಯವನ್ನು ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲಾ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರು ಕಡ್ಡಾಯವಾಗಿ ಅನುಸರಿಸಬೇಕು. ಶಿಕ್ಷಕರು ಮನೆಗಳಿಗೆ ಭೇಟಿ ನೀಡಿದಾಗ ಕೋವಿಡ್‌–19 ತಡೆಗೆ ಮುನ್ನೆಚ್ಚರಿಕೆ ವಹಿಸುವಂತೆ ಪೋಷಕರಿಗೆ ಸಲಹೆ ನೀಡಬೇಕು’ ಎಂದು ಕಿವಿಮಾತು ಹೇಳಿದರು.

ಗಾಬರಿ ಮಾಡಬೇಡಿ: ‘ಪೋಷಕರು ಹಾಗೂ ಮಕ್ಕಳನ್ನು ಕೊರೊನಾ ಸೋಂಕಿನ ಬಗ್ಗೆ ಗಾಬರಿ ಮಾಡಬೇಡಿ. ಸಮಾಧಾನದಿಂದ ಓದಿನತ್ತ ಗಮನ ಹರಿಸುವಂತೆ ಮಕ್ಕಳಿಗೆ ತಿಳಿ ಹೇಳಿ. ಜತೆಗೆ ಮನೆಯಲ್ಲಿ ಸ್ವಚ್ಛತೆ ಕಾಪಾಡುವುದು, ಮುಖಗವಸು ಧರಿಸುವುದು, ಕೈ ತೊಳೆದು ಊಟ ಮಾಡುವ ಬಗ್ಗೆ ಮಾರ್ಗದರ್ಶನ ಮಾಡಿ’ ಎಂದು ಸೂಚಿಸಿದರು.

‘ಮಕ್ಕಳ ಅಭ್ಯಾಸದ ಅಂತಿಮ ಹಂತ ಇದಾಗಿದ್ದು, ಈಗ ಅವರ ಗೊಂದಲಗಳಿಗೆ ಪರಿಹಾರ ಸಿಗಬೇಕಿದೆ. ಮಕ್ಕಳ ಆರೋಗ್ಯ ರಕ್ಷಣೆಗೂ ಅಗತ್ಯ ಅರಿವು ನೀಡಬೇಕು. ಕೊರೊನಾ ಸೋಂಕಿನ ಭೀತಿಯಿಂದ ಮಕ್ಕಳು ಮನೆಯಲ್ಲೇ ಅಭ್ಯಾಸ ಮುಂದುವರಿಸಿರುವುದರಿಂದ ಪೋಷಕರು ಹೆಚ್ಚು ಗಮನ ಹರಿಸಬೇಕು. ಮಕ್ಕಳನ್ನು ಹೊರ ಊರುಗಳಿಗೆ ಕಳುಹಿಸಬಾರದು’ ಎಂದು ಸಲಹೆ ನೀಡಿದರು.

ಜನತಾ ಪ್ರೌಢ ಶಾಲೆ ಮುಖ್ಯಶಿಕ್ಷಕ ಎಂ.ಎಸ್.ರವಿ ಹಾಗೂ ಶಿಕ್ಷಕರು ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು