ಶುಕ್ರವಾರ, ಮೇ 20, 2022
23 °C
ಬರಡುಭೂಮಿಯಲ್ಲಿ ಅಲ್ಪಾವಧಿ ಬೆಳೆಯ ಸಾಧನೆ

ಮಾಲೂರು: ಹಿರೇಕಾಯಿ ಬೆಳೆ ಹಿಗ್ಗಿಸಿದ ಬದುಕು

ವಿ.ರಾಜಗೋಪಾಲ್ Updated:

ಅಕ್ಷರ ಗಾತ್ರ : | |

Prajavani

ಮಾಲೂರು: ಬರಡು ಭೂಮಿಯಲ್ಲಿ ಹಿರೇಕಾಯಿ ಬೆಳೆದು ಬದುಕು ಹಿಗ್ಗಿಸಿಕೊಂಡ ರೈತ ನಾರಯಣಸ್ವಾಮಿ. ತರಕಾರಿ ಬೆಳೆಗಳಲ್ಲಿ ಪ್ರಮುಖವಾದದ್ದು ಹಿರೇಕಾಯಿ. ಇದನ್ನು ನೀರಾವರಿ ಮತ್ತು ಮಳೆಯಾಶ್ರಿತವಾಗಿಯೂ ಬೆಳೆಯಬಹುದು. ಅಲ್ಪಾವಧಿ ಬೆಳೆಯಾದ ಇದಕ್ಕೆ ಸ್ಥಳೀಯ ಮಾರುಕಟ್ಟೆ ಇರುವುದರಿಂದ ಸಾಕಷ್ಟು ಲಾಭಕಾರಿಯೂ ಹೌದು.

ತಾಲ್ಲೂಕಿನ ಹುಳದೇನಹಳ್ಳಿ ಗ್ರಾ.ಪಂ.ವ್ಯಾಪ್ತಿಯ ದಿನ್ನೇರಿ ಹರೋಹಳ್ಳಿ ಗ್ರಾಮದ ರೈತ ನಾರಾಯಣಸ್ವಾಮಿ ತಮ್ಮ ಪಾಲಿಗೆ ಬಂದಿದ್ದ ಮೂರು ಎಕರೆ ಭೂಮಿಯಲ್ಲಿದ್ದ ನೀಲಗಿರಿ ಮರಗಳನ್ನು ತೆರವುಗೊಳಿಸಿ ತರಕಾರಿ ಬೆಳೆಯಲು ಮುಂದಾದರು. ಕೊಳವೆ ಬಾವಿಯಲ್ಲಿನ ನೀರನ್ನು ಬಳಸಿ ಕಳೆದ ಎರಡು ವರ್ಷಗಳಿಂದ ತರಕಾರಿ ಬೆಳ ಬೇಸಾಯ ಆರಂಭಿಸಿದ್ದರು. ಎರಡು ಬಾರಿ ಟೊಮೆಟೊ ಬೆಳೆ ಹಾಕಿ ಮಾರುಕಟ್ಟೆಯಲ್ಲಿ ಬೆಳೆ ಕೈಗೆ ಸಿಗದೆ, ಸಮರ್ಪಕ ಬೆಲೆ ಸಹ ಸಿಗದೆ ನಷ್ಟ ಉಂಟಾಗಿದ್ದರಿಂದ ಕೃಷಿಯನ್ನೇ ಕೈಬಿಡಬೇಕೆಂದು ತೀರ್ಮಾನಿಸಿದ್ದರು ರೈತ ನಾರಾಯಣಸ್ವಾಮಿ.

ಕಡೆ ಪ್ರಯತ್ನ ಎಂಬಂತೆ ತಮ್ಮ ದೂರದ ಸಂಬಂಧಿ ರೈತ ಪ್ರಸನ್ನಕುಮಾರ್ ಅವರನ್ನು ಭೇಟಿ ಮಾಡಿ ಅಳಲು ತೋಡಿಕೊಂಡರು. ಅವರ ಸೂಚನೆ ಮೇರೆಗೆ ಒಂದು ಎಕರೆ ಭೂಮಿಯಲ್ಲಿ ನಾಮಧಾರಿ ಎನ್ ಎಸ್ -4751 ತಳಿ ಹಿರೇಕಾಯಿ ಬೀಜ ಬಿತ್ತನೆ ಮಾಡಿದ್ದಾರೆ. 45 ದಿನಕ್ಕೆ ಕಾಯಿ ಫಸಲು ಆರಂಭವಾಗಿದ್ದು. ಪ್ರತಿ ಎರಡು ದಿಗಳಿಗೊಮ್ಮೆಫಸಲನ್ನು ಕಟಾವು ಮಾಡುತ್ತಿದ್ದಾರೆ. ಒಂದೂವರೆ ಟನ್ ಹಿರೇಕಾಯಿ ಸಿಗುತ್ತಿದೆ. ಒಂದು ಕೋಯ್ಲಿಗೆ ₹30 ರಿಂದ 35 ಸಾವಿರ ಆದಾಯ ಸಿಗುತ್ತಿದೆ. ಹಿರೇಕಾಯಿ ಬೆಳೆ ಹಾಕಲು ₹30 ಸಾವಿರ ಖರ್ಚಾಗಿದ್ದು, ಪ್ರಸ್ತುತ ಒಂದು ಕಾಟಾವಿಗೆ ₹30 ರಿಂದ 35 ಸಾವಿರ ಆದಾಯ ಬರುತ್ತಿದೆ ಎನ್ನುತ್ತಾರೆ ರೈತ ನಾರಾಯಣಸ್ವಾಮಿ.

ಬೆಳೆಯುವ ವಿಧಾನ: ಜಮೀನನ್ನು ಮೊದಲು ಚೆನ್ನಾಗಿ ರಂಟೆ ಹೊಡೆದು ಹಸನು ಮಾಡಿ ಸಮತಟ್ಟುಗೊಳಿಸಬೇಕು. ಅಗತ್ಯಕ್ಕನುಗುಣವಾಗಿ ಕೊಟ್ಟಿಗೆ ಗೊಬ್ಬರ ಹಾಕಿರಬೇಕು. ಬಳಿಕ ಸಾಲಿನಿಂದ ಸಾಲಿಗೆ ಮೂರುವರೆ ಅಡಿ ಮತ್ತು ಬೀಜದಿಂದ ಬೀಜಕ್ಕೆ 2 ಅಡಿ ಅಂತರದಲ್ಲಿ ಬಿತ್ತಬೇಕು. ಜೂನ್- ಜುಲೈ ಬಿತ್ತನೆಗೆ ಪ್ರಾಶಸ್ತ್ಯ. ಇದಕ್ಕೆ ಸಾಕಾಗುವಷ್ಟು ಮಳೆಯಾಗದಿದ್ದರೆ ನೀರು ಹಾಯಿಸಬೇಕು. ಮಣ್ಣಿನ ತೇವಾಂಶಕ್ಕನುಗುಣವಾಗಿ ನೀರು ಕೊಡಬೇಕು. ಬೀಜ ಬಿತ್ತಿದ 20 ದಿನಗಳ ಬಳಿಕ ಪ್ರತಿ ಸಾಲಿನಲ್ಲಿ 6 ಅಡಿಗೊಂದರಂತೆ ಗೂಟ ನೆಡಬೇಕು. ಅದರ ತುದಿಗೆ ತಂತಿ ಕಟ್ಟಿ ಪ್ರತಿ ಗೂಟಕ್ಕೂ ಸಂಪರ್ಕ ಕಲ್ಪಿಸಬೇಕು. ಆ ತಂತಿಗೆ ಹಿರೇಬಳ್ಳಿಯನ್ನು ದಾರ ಅಥವಾ ಹುರಿಯ ಮೂಲಕ ಕಟ್ಟಬೇಕು.

ಹೀಗೆ ಮಾಡುವುದರಿಂದ ಬಳ್ಳಿ ಸೊಂಪಾಗಿ ಬೆಳೆಯಲು ಸಹಕಾರಿಯಾಗುತ್ತದೆ. ಬಿತ್ತಿದ 40- 45 ದಿನಕ್ಕೆ ಹೂವು, ಹೀಚು ಬಿಡಲು ಶುರುಮಾಡುತ್ತದೆ. ಮಾರುಕಟ್ಟೆ ನೋಡಿಕೊಂಡು ಹಿರೇಕಾಯಿ ಕಟಾವು ಮಾಡಿ ಮಾರಾಟ ಮಾಡಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು