ಶುಕ್ರವಾರ, ಆಗಸ್ಟ್ 19, 2022
27 °C
ಯೋಜನೆಗೆ ಅನ್ನದಾತರ ಉತ್ತಮ ಸ್ಪಂದನೆ: ಶೇ 51.55ರಷ್ಟು ಸಮೀಕ್ಷೆ

ಕೋಲಾರ: ಬೆಳೆ ಸಮೀಕ್ಷೆ, 4ನೇ ಸ್ಥಾನಕ್ಕೇರಿದ ಜಿಲ್ಲೆ

ಜೆ.ಆರ್‌.ಗಿರೀಶ್‌ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಯು ಶೇ 51.55ರಷ್ಟು ಪೂರ್ಣಗೊಂಡಿದ್ದು, ಸಮೀಕ್ಷೆಯ ಗುರಿ ಸಾಧನೆಯಲ್ಲಿ ಜಿಲ್ಲೆಯು ರಾಜ್ಯ ಮಟ್ಟದಲ್ಲಿ 4ನೇ ಸ್ಥಾನಕ್ಕೆ ಏರಿದೆ.

ಕೃಷಿ ಇಲಾಖೆಯು 2020–21ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿವರ ದಾಖಲಿಸಲು ‘ರೈತರ ಬೆಳೆ ಸಮೀಕ್ಷೆ ಆ್ಯಪ್‌’ ಅಭಿವೃದ್ಧಿಪಡಿಸಿದೆ. ಈ ಆ್ಯಪ್‌ನ ಮೂಲಕ ರೈತರೇ ತಮ್ಮ ಜಮೀನಿನಲ್ಲಿ ನಿಂತು ಬೆಳೆಯ ಫೋಟೊ ತೆಗೆದು, ವಿವರ ದಾಖಲಿಸಿ ಸಮೀಕ್ಷೆ ನಡೆಸಲು ಇಲಾಖೆಯು ಇದೇ ಮೊದಲ ಬಾರಿಗೆ ಅವಕಾಶ ನೀಡಿದೆ.

ಬೆಳೆ ಸಮೀಕ್ಷೆಗೆ ಮೊದಲು ಆ.11ರಿಂದ ಆ.24ರವರೆಗೆ ಸಮಯ ನಿಗದಿಪಡಿಸಲಾಗಿತ್ತು. ಆದರೆ, ಈ ಅವಧಿಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಸಮೀಕ್ಷೆ ಕಾರ್ಯ ನಡೆಯಲಿಲ್ಲ. ಹೀಗಾಗಿ ಬೆಳೆ ಸಮೀಕ್ಷೆ ಅವಧಿಯನ್ನು ಸೆ.23ರವರೆಗೆ ವಿಸ್ತರಿಸಲಾಯಿತು. ನಂತರ ಈ ಯೋಜನೆಗೆ ಅನ್ನದಾತರು ಹೆಚ್ಚಿನ ಒಲವು ತೋರಿದ್ದು, ಅಧಿಕಾರಿಗಳ ನಿರೀಕ್ಷೆಗೂ ಮೀರಿ ಸಮೀಕ್ಷೆ ಕಾರ್ಯ ನಡೆಯುತ್ತಿದೆ.

ಜಿಲ್ಲೆಯಲ್ಲಿ ಒಟ್ಟು 7,86,644 ಕೃಷಿ ತುಂಡು ಭೂಮಿಗಳಿವೆ. ಕಳೆದೊಂದು ತಿಂಗಳಿಂದ ಸಮೀಕ್ಷೆ ಕಾರ್ಯ ನಡೆಯುತ್ತಿದ್ದು, ಶುಕ್ರವಾರದ (ಸೆ.11) ಅಂತ್ಯಕ್ಕೆ 4,05,512 ಜಮೀನುಗಳ (ಪ್ಲಾಟ್‌) ಬೆಳೆ ಮಾಹಿತಿಯನ್ನು ರೈತರು ಆ್ಯಪ್‌ನಲ್ಲಿ ದಾಖಲಿಸಿ ಸಮೀಕ್ಷೆ ಪೂರ್ಣಗೊಳಿಸಿದ್ದಾರೆ.

ಯೋಜನೆ ಉದ್ದೇಶ: ಈ ಹಿಂದೆ ಗ್ರಾಮಗಳಲ್ಲಿನ ಸ್ಥಳೀಯ ಖಾಸಗಿ ನಿವಾಸಿಗಳು ಬೆಳೆ ಸಮೀಕ್ಷೆ ಮಾಡುತ್ತಿದ್ದರು. ಈ ಬಾರಿ ರೈತರಿಗೆ ನೇರ ಅವಕಾಶ ಕಲ್ಪಿಸಲಾಗಿದ್ದು, ಬೆಳೆ ಮತ್ತು ಜಮೀನಿನ ನಿಖರ ಮಾಹಿತಿಯನ್ನು ಸ್ವತಃ ರೈತರೇ ದಾಖಲು ಮಾಡುತ್ತಿದ್ದಾರೆ. ಸರ್ಕಾರದ ಸೌಲಭ್ಯ ಪಡೆಯುವಲ್ಲಿ ಆಗಬಹುದಾದ ಅಡಚಣೆ ತಪ್ಪಿಸುವುದು ಈ ಯೋಜನೆಯ ಉದ್ದೇಶವಾಗಿದೆ.

ಬೆಳೆ ಸಮೀಕ್ಷೆ ಮಾಹಿತಿ ಆಧಾರದಲ್ಲಿ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ, ಬೆಳೆ ನಷ್ಟ ಪರಿಹಾರ, ಬೆಳೆ ವಿಮೆ, ಸಾಲ ಯೋಜನೆಗಳ ಸೌಲಭ್ಯ, ಬೆಳೆ ಕಟಾವು ಪ್ರಯೋಗ ಹಾಗೂ ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಫಲಾನುಭವಿ ಆಧಾರಿತ ಯೋಜನೆಗಳ ಅನುಷ್ಠಾನಕ್ಕೆ ಸಮೀಕ್ಷೆ ಸಹಕಾರಿಯಾಗಲಿದೆ.

ಬೆಂಬಲ ಬೆಲೆ ಯೋಜನೆ ಘೋಷಣೆಯಾದಾಗ ರೈತರು ಬೆಳೆದಿರುವ ಬೆಳೆ ಮತ್ತು ಆರ್‌ಟಿಸಿಯಲ್ಲಿ ದಾಖಲಾಗಿರುವ ಮಾಹಿತಿ ವ್ಯತ್ಯಾಸವಾಗುತ್ತಿತ್ತು. ಇದರಿಂದ ರೈತರಿಗೆ ಯೋಜನೆಯ ಲಾಭ ಸಿಗುತ್ತಿರಲಿಲ್ಲ. ಆದ್ದರಿಂದ ರೈತರೇ ತಮ್ಮ ಮಾಹಿತಿ ದಾಖಲು ಮಾಡುವುದರಿಂದ ಮುಂದೆ ಎದುರಾಗುವ ಸಮಸ್ಯೆ ತಡೆಯಬಹುದು ಎಂದು ಕೃಷಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ತಿದ್ದುಪಡಿಗೆ ಅವಕಾಶ: ರೈತರು ಬೆಳೆದ ಬೆಳೆ, ಜಮೀನಿನ ವಿಸ್ತೀರ್ಣ, ನೀರಾವರಿ ಮಾಹಿತಿಯನ್ನು ಬೆಳೆ ಸಮೀಕ್ಷೆ ಆ್ಯಪ್‌ನಲ್ಲಿ ದಾಖಲಿಸಬೇಕು. ಸಮೀಕ್ಷೆ ವೇಳೆ ತಪ್ಪು ಮಾಹಿತಿ ದಾಖಲಿಸಿದರೆ ಭವಿಷ್ಯದಲ್ಲಿ ಸರ್ಕಾರದ ವಿವಿಧ ಸೌಲಭ್ಯ ಪಡೆಯಲು ಸಮಸ್ಯೆಯಾಗುತ್ತದೆ. ರೈತರು ಕಣ್ತಪ್ಪಿನಿಂದ ತಪ್ಪು ಮಾಹಿತಿ ದಾಖಲಿಸಿದರೆ ಮೇಲ್ವಿಚಾರಕರ ಲಾಗಿನ್‌ನಲ್ಲಿ ತಿದ್ದುಪಡಿ ಮಾಡಲು ಅವಕಾಶವಿದೆ. ಇದಕ್ಕೆ ರೈತರು ಆನ್‌ಲೈನ್‌ನಲ್ಲಿ ಮನವಿ ಸಲ್ಲಿಸಬೇಕು.

ಮಾಹಿತಿ ತಿದ್ದುಪಡಿ ಸಂಬಂಧ ಮಾಸ್ಟರ್ ತರಬೇತುದಾರರು ಹಾಗೂ ಮೇಲ್ವಿಚಾರಕರಿಗೆ ಈಗಾಗಲೇ ತರಬೇತಿ ನೀಡಲಾಗಿದೆ. ಜಿಲ್ಲೆಯಲ್ಲಿ 1,808 ಗ್ರಾಮಗಳಿದ್ದು, 1,032 ಮಂದಿ ಖಾಸಗಿ ನಿವಾಸಿಗಳನ್ನು ತರಬೇತುಗೊಳಿಸಿ ಗ್ರಾಮಗಳಿಗೆ ನಿಯೋಜಿಸಲಾಗಿದೆ. ಶನಿವಾರದಿಂದ (ಸೆ.12) ರೈತರ ಜತೆಗೆ ಖಾಸಗಿ ನಿವಾಸಿಗಳು ಉಳಿಕೆ ಜಮೀನುಗಳ ಬೆಳೆ ಸಮೀಕ್ಷೆ ಆರಂಭಿಸಲಿದ್ದು, ಸಮೀಕ್ಷೆ ಪ್ರಕ್ರಿಯೆ ಮತ್ತಷ್ಟು ಚುರುಕುಗೊಳ್ಳಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು