ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ ಜಿಲ್ಲೆಯಲ್ಲಿ ದಲಿತ ಉದ್ದಿಮೆದಾರರ ಸಮಾವೇಶ: ನಾರಾಯಣಸ್ವಾಮಿ

ಜಿಲ್ಲಾ ಪ.ಜಾ– ಪ.ಪಂ ಉದ್ದಿಮೆದಾರರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ ಹೇಳಿಕೆ
Last Updated 17 ಆಗಸ್ಟ್ 2020, 17:26 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆಯಲ್ಲಿ ದಲಿತರ ಉದ್ಯಮಕ್ಕೆ ಉತ್ತೇಜನ ನೀಡಲು ಸೆಪ್ಟೆಂಬರ್‌ನಲ್ಲಿ ದಲಿತ ಉದ್ದಿಮೆದಾರರ ಸಮಾವೇಶ ನಡೆಸಲಾಗುತ್ತದೆ’ ಎಂದು ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ದಿಮೆದಾರರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ ತಿಳಿಸಿದರು.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಉದ್ದಿಮೆದಾರರ ಜಿಲ್ಲಾ ಮಟ್ಟದ ಸಮಾವೇಶದ ಸಂಬಂಧ ಇಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ‘ದಲಿತರು ಉದ್ದಿಮೆ ಆರಂಭಿಸಲು ಎದುರಾಗುವ ಸಮಸ್ಯೆಗಳ ಬಗ್ಗೆ ಸಮಾವೇಶದಲ್ಲಿ ಚರ್ಚಿಸಲಾಗುವುದು’ ಎಂದರು.

‘ಉದ್ದಿಮೆದಾರರಾಗಲು ಬಯಸುವವರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶಕ್ಕೆ ಸಮಾವೇಶ ನಡೆಸಲಾಗುತ್ತಿದೆ. ಕೋವಿಡ್ ಕಾರಣಕ್ಕೆ ಬೆಂಗಳೂರು ತೊರೆದು ಹಳ್ಳಿಗಳಿಗೆ ವಾಪಸ್‌ ಬಂದಿರುವ ಅನೇಕ ಯುವಕರು ಕೆಲಸವಿಲ್ಲದೆ ನಿರುದ್ಯೋಗಿಗಳಾಗಿದ್ದಾರೆ. ಅಂತಹವರಿಗೆ ಸರ್ಕಾರದ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಬೇಕು’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಕೈಗಾರಿಕೆ ಆರಂಭಿಸಲು 37 ಎಕರೆ ಭೂಮಿಯ ಅಗತ್ಯವಿದೆ. ಆದರೆ, ಇದಕ್ಕೆ ಜಿಲ್ಲಾಡಳಿತದ ಸಹಕಾರ ಮತ್ತು ಸ್ಪಂದನೆಯಿಲ್ಲ. ಕಲ್ಲು ಬಂಡೆಗಳ ಭೂಮಿಯ ಬದಲಿಗೆ ಕೈಗಾರಿಕೆ ಸ್ಥಾಪನೆಗೆ ಯೋಗ್ಯವಾದ ಭೂಮಿ ನೀಡಬೇಕು’ ಎಂದು ಒತ್ತಾಯಿಸಿದರು.

ಮಾರ್ಗದರ್ಶನ ನೀಡಿ: ‘ಉದ್ದಿಮೆ ಸ್ಥಾಪಿಸಲು ಯುವಕರಿಗೆ ಆಸಕ್ತಿಯಿದೆ. ಈ ಯುವಕರಿಗೆ ಸಂಘದಿಂದ ಮಾರ್ಗದರ್ಶನ ನೀಡಬೇಕು. ದಲಿತರ ಏಳಿಗೆಗೆ ಸರ್ಕಾರಗಳು ಸಾಕಷ್ಟು ಯೋಜನೆ ರೂಪಿಸಿವೆ. ಆದರೆ, ಈ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ. ಅಧಿಕಾರಿಗಳು ಯೋಜನೆಗಳ ಅನುಷ್ಠಾನಕ್ಕೆ ಆಸಕ್ತಿ ತೋರುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಸಂಘದ ವತಿಯಿಂದ ದೇಶದೆಲ್ಲೆಡೆ ಸರ್ಕಾರದ ಮೇಲೆ ಒತ್ತಡ ತರಬೇಕು. ಸಮುದಾಯದ ಯುವಕರು ಉದ್ದಿಮೆ ಆರಂಭಿಸಿ ಆರ್ಥಿಕವಾಗಿ ಸ್ವಾವಲಂಬಿಗಳಾಗಿದ ಸಮಾಜದ ಮುಖ್ಯವಾಹಿನಿಗೆ ಬರಬೇಕು’ ಎಂದು ಆಶಿಸಿದರು.

ಸೌಲಭ್ಯ ತಲುಪಿಸಿ: ‘ದಲಿತರು ಆರ್ಥಿಕವಾಗಿ ಮುನ್ನೆಲೆಗೆ ಬರಬೇಕೆಂಬ ಉದ್ದೇಶದಿಂದ ರಾಷ್ಟ್ರ ಮಟ್ಟದಲ್ಲಿ ಸಂಘ ಆರಂಭಿಸಲಾಗಿದೆ. ಸಮುದಾಯಕ್ಕೆ ನಿರಂತರವಾಗಿ ಸೌಲಭ್ಯ ತಲುಪಿಸಬೇಕು. ಸರ್ಕಾರದ ಮಟ್ಟದಲ್ಲಿ ನಡೆಯುವ ಸಭೆಗಳಲ್ಲಿ ಸಮುದಾಯದ ಮಂದಿಗೆ ಸೌಲಭ್ಯ ಪಡೆಯಲು ಆಗುತ್ತಿರುವ ಸಮಸ್ಯೆ ಮನವರಿಕೆ ಮಾಡಿಕೊಡಬೇಕು’ ಎಂದು ದಲಿತ ಮುಖಂಡ ರಾಜಪ್ಪ ಸಲಹೆ ನೀಡಿದರು.

ನಗರಸಭೆ ಸದಸ್ಯ ಅಂಬರೀಶ್, ದಲಿತ ಉದ್ದಿಮೆದಾರರಾದ ತಿಮ್ಮಯ್ಯ, ಕುಮಾರ್, ರಾಮಯ್ಯ, ಆಶಾ, ರಾಜಣ್ಣ, ಅಶೋಕ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT