ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸಿಸಿ ಬ್ಯಾಂಕ್ ದೇಶಕ್ಕೆ ಮಾದರಿ

ಸಾಲ ವಿತರಣೆ ಕಾರ್ಯಕ್ರಮದಲ್ಲಿ ಶಾಸಕ ಶ್ರೀನಿವಾಸಗೌಡ ಮೆಚ್ಚುಗೆ
Last Updated 16 ಸೆಪ್ಟೆಂಬರ್ 2020, 16:12 IST
ಅಕ್ಷರ ಗಾತ್ರ

ಕೋಲಾರ: ‘ಸಹಕಾರಿ ಸಂಸ್ಥೆಯನ್ನು ರೈತರು, ಮಹಿಳೆಯರ ಆರ್ಥಿಕಾಭಿವೃದ್ಧಿಗೆ ನೆರವಾಗುವ ರೀತಿ ಹೇಗೆ ನಡೆಸಬಹುದು ಎಂಬುದನ್ನು ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ದೇಶಕ್ಕೆ ಮಾದರಿಯಾಗಿ ತೋರಿಸಿಕೊಟ್ಟಿದೆ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.

ಡಿಸಿಸಿ ಬ್ಯಾಂಕ್ ಹಾಗು ಕೋಲಾರ ದಕ್ಷಿಣ ಕಸಬಾ ಸೊಸೈಟಿ ಸಹಯೋಗದಲ್ಲಿ ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರೈತರಿಗೆ ₹ 1.26 ಕೋಟಿ ಸಾಲ ವಿತರಿಸಿ ಮಾತನಾಡಿ, ‘ಈ ಹಿಂದೆ ದಿವಾಳಿಯಾಗಿದ್ದ ಡಿಸಿಸಿ ಬ್ಯಾಂಕ್‌ನ ಇಂದು ₹ 1,500 ಕೋಟಿ ಸಾಲ ನೀಡಿದೆ. ಇದು ಹೆಮ್ಮೆ ಪಡುವ ವಿಚಾರ’ ಎಂದರು.

‘ಸಹಕಾರಿ ವ್ಯವಸ್ಥೆ ಬಡವರ ಆಸ್ತಿ. ವಾಣಿಜ್ಯ ಬ್ಯಾಂಕ್‌ಗಳು ಬಡವರಿಗೆ ಸಾಲ ಕೊಡುವುದಿಲ್ಲ. ಆದರೆ, ಡಿಸಿಸಿ ಬ್ಯಾಂಕ್‌ ಜನರ ಮನೆ ಬಾಗಿಲಿಗೆ ಹೋಗಿ ಸಾಲ ನೀಡುವ ಬದ್ಧತೆ ಹೊಂದಿದೆ’ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಗೋವಿಂದಗೌಡ ಹೇಳಿದರು.

‘ಬ್ಯಾಂಕ್ ವಿರುದ್ಧ ಮಾತನಾಡುವ ಟೀಕಾಕಾರರಿಗೆ ಉತ್ತರಿಸುವುದಿಲ್ಲ. ಮೌನದಿಂದಲೇ ಸಮಾಜದ ಕಟ್ಟಕಡೆಯ ಪ್ರತಿ ಕುಟುಂಬಕ್ಕೂ ಸಾಲ ನೀಡುವ ಮೂಲಕ ಜನರಿಂದಲೇ ಉತ್ತರ ಸಿಗುವಂತೆ ಮಾಡಿದ್ದೇವೆ. ಬ್ಯಾಂಕ್‌ನ ವ್ಯವಹಾರದಲ್ಲಿ ಪಾರದರ್ಶಕತೆಗೆ ಒತ್ತು ನೀಡಿದ್ದೇವೆ. ರೈತರು ರೂಪೇ ಕಾರ್ಡ್ ಮೂಲಕ ಎಟಿಎಂನಲ್ಲಿ ಹಣ ಡ್ರಾ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.

ರೈತರಿಗೆ ಲಾಭ: ‘ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ಸಾಲ ಮನ್ನಾ ಮಾಡಿದ್ದರಿಂದ ದಕ್ಷಿಣ ಕಸಬಾ ಸೊಸೈಟಿ ವ್ಯಾಪ್ತಿಯ ರೈತರಿಗೆ ₹ 3 ಕೋಟಿ ಲಾಭವಾಗಿದೆ. ಈ ಹಿಂದೆ ಕಸಬಾ ಸೊಸೈಟಿಗೆ ₹ 3 ಕೋಟಿ ಸಾಲ ನೀಡಲು ಆತಂಕವಿತ್ತು. ಆದರೆ, ಬ್ಯಾಂಕ್ ಈ ಸೊಸೈಟಿ ಮೂಲಕ ಇಂದು ₹ 30 ಕೋಟಿ ಸಾಲ ನೀಡಿದೆ’ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಲ್.ಅನಿಲ್‌ಕುಮಾರ್‌ ವಿವರಿಸಿದರು.

‘ಸರ್ಕಾರ ನಿಗದಿಪಡಿಸಿರುವ ಗುರಿಗಿಂತ ಹೆಚ್ಚು ಸಾಲ ನೀಡಿದ್ದೇವೆ. ರೈತರಲ್ಲಿ ಪ್ರಾಮಾಣಿಕತೆ ಇದೆ. ಸಕಾಲಕ್ಕೆ ಸಾಲ ಮರುಪಾವತಿಸುವ ಮೂಲಕ ರೈತರು ಬ್ಯಾಂಕ್‌ನ ನಂಬಿಕೆ ಬಲಗೊಳಿಸಿದ್ದಾರೆ’ ಎಂದು ಡಿಸಿಸಿ ಬ್ಯಾಂಕ್‌ ನಿರ್ದೇಶಕ ಸೋಮಣ್ಣ ಅಭಿಪ್ರಾಯಪಟ್ಟರು.

ಡಿಸಿಸಿ ಬ್ಯಾಂಕ್‌ ನಿರ್ದೇಶಕ ಕೆ.ವಿ.ದಯಾನಂದ್, ದಕ್ಷಿಣ ಕಸಬಾ ಸೊಸೈಟಿ ಅಧ್ಯಕ್ಷ ಶ್ರೀನಿವಾಸಪ್ಪ, ಉಪಾಧ್ಯಕ್ಷ ಶ್ರೀನಿವಾಸಪ್ಪ, ನಿರ್ದೇಶಕರಾದ ಮುನಿಯಪ್ಪ, ವೆಂಕಟೇಶಪ್ಪ, ವೆಂಕಟೇಶ್, ಟಿ.ಶ್ರೀನಿವಾಸ್, ಎಂ.ಶ್ರೀರಾಮರೆಡ್ಡಿ, ನಾರಾಯಣಸ್ವಾಮಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT