ಸೋಮವಾರ, ಜನವರಿ 20, 2020
26 °C
ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಪಕ್ಷಬೇಧ ಮರೆತು ಸದಸ್ಯರ ಒತ್ತಾಯ

ಡಿಸಿಎಫ್‌ ಚಕ್ರಪಾಣಿ ಅಮಾನತಿಗೆ ನಿರ್ಣಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಕರ್ತವ್ಯ ಲೋಪ ಆರೋಪದ ಮೇಲೆ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್‌) ಚಕ್ರಪಾಣಿ ಅವರನ್ನು ಅಮಾನತು ಮಾಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲು ಹಾಗೂ ದಾಖಲೆಪತ್ರವಿಲ್ಲದೆ ವಿವಿಧ ಇಲಾಖೆಗಳಲ್ಲಿ ಅನುದಾನ ವೆಚ್ಚ ಮಾಡಿರುವ ಬಗ್ಗೆ ತನಿಖೆ ನಡೆಸಲು ಇಲ್ಲಿ ಶುಕ್ರವಾರ ಜಿ.ಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಜಿ.ಪಂ ಅಧ್ಯಕ್ಷ ಸಿ.ಎಸ್‌.ವೆಂಕಟೇಶ್‌ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು, ‘ಅರಣ್ಯ, ಸಮಾಜ ಕಲ್ಯಾಣ ಹಾಗೂ ಶಿಕ್ಷಣ ಇಲಾಖೆಯಲ್ಲಿ ಹಲವು ಅಕ್ರಮ ನಡೆದಿವೆ. ಈ ಹಗರಣಗಳ ತನಿಖೆಗೆ ಸಮಿತಿ ರಚಿಸಬೇಕು’ ಎಂದು ಪಕ್ಷಬೇಧ ಮರೆತು ಒತ್ತಾಯಿಸಿದರು.

‘ಡಿಸಿಎಫ್‌ ಚಕ್ರಪಾಣಿ ಅವರು ಜಿಲ್ಲೆಗೆ ವರ್ಗಾವಣೆಯಾಗಿ ಬಂದು ಸುಮಾರು 2 ವರ್ಷವಾಗಿದೆ. ಆದರೆ, ಅವರು ಈವರೆಗೆ ಯಾವುದೇ ಸಭೆಗೆ ಹಾಜರಾಗಿಲ್ಲ. ಅವರಿಗೆ ಕರೆ ಮಾಡಿದರೆ ಉಡಾಫೆ ಉತ್ತರ ಕೊಡುತ್ತಾರೆ. ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಠಾನದಲ್ಲಿ ಅವರು ವಿಫಲರಾಗಿದ್ದಾರೆ’ ಎಂದು ಜಿ.ಪಂ ಸದಸ್ಯರಾದ ಎಚ್.ವಿ.ಶ್ರೀನಿವಾಸ್, ಮಹೇಶ್, ಅರುಣ್‌ಪ್ರಸಾದ್ ಮತ್ತು ಪಾರ್ವತಮ್ಮ ಕಿಡಿಕಾರಿದರು.

‘ಕರ್ತವ್ಯ ಲೋಪವೆಸಗಿರುವ ಚಕ್ರಪಾಣಿ ಅವರನ್ನು ತಕ್ಷಣವೇ ಅಮಾನತು ಮಾಡಬೇಕು. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಹಾಗೂ ಶಾಸಕರು ಸಭೆಯಲ್ಲೇ ನಿರ್ಧಾರ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಂಸದ ಎಸ್.ಮುನಿಸ್ವಾಮಿ, ‘ಇಂತಹ ಅಧಿಕಾರಿಗಳಿಂದ ಪರಿಸ್ಥಿತಿ ಸುಧಾರಣೆ ಮಾಡುವುದು ಕಷ್ಟ. ಚಕ್ರಪಾಣಿ ವರ್ಗಾವಣೆಯಾಗಿದ್ದರೂ ಕೆಎಟಿಯಿಂದ ತಡೆಯಾಜ್ಞೆ ತಂದು ಜಿಲ್ಲೆಯಲ್ಲೇ ಮುಂದುವರಿದಿದ್ದಾರೆ. ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಸರ್ಕಾರದ ಮೇಲೆ ಒತ್ತಡ ತರುತ್ತೇನೆ’ ಎಂದು ಭರವಸೆ ನೀಡಿದರು.

‘ಡಿಸಿಎಫ್‌ ಚಕ್ರಪಾಣಿ ಒಬ್ಬ ಬೇಜವಾಬ್ದಾರಿ ಅಧಿಕಾರಿ. ಆತನಿಗೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ. ಆದರೂ ತಿದ್ದಿ ಕೊಳ್ಳುತ್ತಿಲ್ಲ. ವಿಶೇಷ ಘಟಕ ಯೋಜನೆ (ಎಸ್‌ಸಿಪಿ) ಮತ್ತು ಗಿರಿಜನ ಉಪ ಯೋಜನೆಯಡಿ (ಟಿಎಸ್‌ಪಿ) ಅಡುಗೆ ಅನಿಲ ಸೇವೆ ಕಲ್ಪಿಸುವುದರಲ್ಲಿ ನಡೆದಿರುವ ಅವ್ಯವಹಾರದ ಸಂಬಂಧ ತನಿಖೆ ನಡೆಸಿ ಅಕ್ರಮ ಸಾಬೀತಾದರೆ ಚಕ್ರಪಾಣಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಆತ ಅದಕ್ಕೂ ಬಗ್ಗದಿದ್ದರೆ ಪೊಲೀಸರನ್ನು ಬಿಟ್ಟು ಹಿಡಿಸಿ ಎಳೆದು ತನ್ನಿ’ ಎಂದು ಏಕವಚನದಲ್ಲೇ ಗುಡುಗಿದರು.

ಅಕ್ರಮ ಸಹಿಸುವುದಿಲ್ಲ: ‘ಇಲಾಖೆಗಳಲ್ಲಿ ಅಕ್ರಮ ನಡೆದರೆ ಅದನ್ನು ಸಹಿಸುವುದಿಲ್ಲ. ಅಗತ್ಯವಿದ್ದರೆ ತನಿಖೆ ನಡೆಸಿ ವರದಿ ಸಲ್ಲಿಸಿದರೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಯಾವುದೇ ಮುಲಾಜಿಲ್ಲದೆ ಶಿಸ್ತುಕ್ರಮ ಜರುಗಿಸುತ್ತೇವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಹೇಳಿದರು.

ಇದಕ್ಕೆ ಧ್ವನಿಗೂಡಿಸಿದ ಕೋಲಾರ ಶಾಸಕ ಕೆ.ಶ್ರೀನಿವಾಸಗೌಡ, ‘ಚಕ್ರಪಾಣಿ ಅವರಂತಹ ಬೇಜವಾಬ್ದಾರಿ ಅಧಿಕಾರಿಗಳು ನಮಗೆ ಬೇಡ. ಅವರನ್ನು ಅಮಾನತು ಮಾಡಿ ಜಿಲ್ಲೆಯಿಂದ ಹೊರಗೆ ಕಳಿಸಿ’ ಎಂದು ಸಿಡಿಮಿಡಿಗೊಂಡರು.

ತನಿಖೆ ನಡೆಸಿ

‘ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳಲ್ಲಿ ಮಳೆ ಕೊಯ್ಲು ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಕೆಯಲ್ಲಿ ಅಕ್ರಮ ನಡೆದಿದೆ. ಈ ಬಗ್ಗೆ ತನಿಖೆಗೆ ನಡೆಸಬೇಕು. ಇಲಾಖೆಯಿಂದ ವರ್ಗಾವಣೆಯಾಗಿರುವ ಹಿಂದಿನ ಜಂಟಿ ನಿರ್ದೇಶಕಿ ಸಿಂಧೂ ಅವರು ಪ್ರಭಾರ ಜಂಟಿ ನಿರ್ದೇಶಕ ರಾಜಣ್ಣ ಅವರಿಗೆ ಅಧಿಕಾರಭಾರ ವಹಿಸಿಕೊಡದೆ ಸತಾಯಿಸುತ್ತಿದ್ದಾರೆ’ ಎಂದು ಜಿ.ಪಂ ಸದಸ್ಯ ಅರುಣ್‌ಪ್ರಸಾದ್ ದೂರಿದರು.

‘ಶಿಕ್ಷಣ ಇಲಾಖೆಯಲ್ಲಿ ₹ 80 ಲಕ್ಷ ಮೌಲ್ಯದ ಸಾಮಗ್ರಿ ಖರೀದಿಸಿರುವುದಕ್ಕೆ ದಾಖಲೆಪತ್ರವಿಲ್ಲ. ಮಾಹಿತಿ ಖರೀದಿ ಸಂಬಂಧ 2016–17ರಿಂದ 2019–20ನೇ ಸಾಲಿನವರೆಗೂ ಮಾಹಿತಿ ನೀಡುವಂತೆ ಹಿಂದಿನ ಸಭೆಯಲ್ಲಿ ಡಿಡಿಪಿಐ ಅವರಿಗೆ ಸೂಚಿಸಲಾಗಿತ್ತು. ಆದರೆ, ಅವರು ಮಾಹಿತಿ ಕೊಟ್ಟಿಲ್ಲ’ ಎಂದು ಜಿ.ಪಂ ಸದಸ್ಯರಾದ ಮಹೇಶ್ ಮತ್ತು ಅರವಿಂದ್ ಆರೋಪಿಸಿದರು.

‘ಜಿ.ಪಂ ಖಾತೆಯಿಂದ ಶಿಕ್ಷಣ ಇಲಾಖೆ ಖಾತೆಗೆ ಅಲ್ಲಿಂದ ಬಿಇಒ ಖಾತೆಗೆ ಹಣ ವರ್ಗಾವಣೆ ಆಗಿರುವುದಕ್ಕೆ ದಾಖಲೆಪತ್ರ ಇವೆ. ಬಿಇಒ ಖಾತೆಯಿಂದ ಶಾಲೆಗಳ ಎಸ್‌ಡಿಎಂಸಿ ಖಾತೆಗೆ ಹಣ ನೀಡಿ ವಾಪಸ್ ಪಡೆಯಲಾಗಿದೆ. ನಂತರ ಆ ಹಣ ಎಲ್ಲಿಗೆ ಹೋಯಿತು ಎಂಬುದು ಗೊತ್ತಿಲ್ಲ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.

‘ಜಿಲ್ಲೆಯಲ್ಲಿ ಅಕ್ರಮಗಳು ಮರುಕಳಿಸುತ್ತಿವೆ. ತಪ್ಪಿತಸ್ಥ ಅಧಿಕಾರಿಗಳಿಗೆ ಶಿಕ್ಷೆಯಾದರೆ ಇತರ ಅಧಿಕಾರಿಗಳು ಸರಿ ಹೋಗುತ್ತಾರೆ’ ಎಂದು ಶಾಸಕ ಶ್ರೀನಿವಾಸಗೌಡ ಅಭಿಪ್ರಾಯಪಟ್ಟರು. ಆಗ ಮಧ್ಯ ಪ್ರವೇಶಿಸಿ ಜಿ.ಪಂ ಅಧ್ಯಕ್ಷ ವೆಂಕಟೇಶ್, ‘ಸಮಿತಿ ರಚಿಸಿ 2 ವಾರದೊಳಗೆ ತನಿಖಾ ವರದಿ ನೀಡುವಂತೆ ಸೂಚಿಸುತ್ತೇವೆ’ ಎಂದರು.

ಕಾಡಾನೆ ಹಾವಳಿ: ‘ಮಾಲೂರು ತಾಲ್ಲೂಕಿನ ಗಡಿ ಭಾಗದಲ್ಲಿ ಕಾಡಾನೆ ಹಾವಳಿಯಿಂದ ರೈತರ ಬೆಳೆ ಹಾನಿಯಾಗಿದೆ. ಇದಕ್ಕೆ ಪರಿಹಾರ ಕಲ್ಪಿಸಲು ಅರಣ್ಯ ಇಲಾಖೆ ಅಧಿಕಾರಿಗಳಿಂದ ವರದಿ ಕೇಳಿದ್ದರೂ ಮಾಹಿತಿ ನೀಡಿಲ್ಲ. ರೈತರು ಕರೆ ಮಾಡಿದರೆ ಅಧಿಕಾರಿಗಳು ಸ್ಪಂದಿಸುವುದಿಲ್ಲ. ಇಂತಹ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡುವುದು ಸೂಕ್ತ’ ಎಂದು ಶಾಸಕ ಕೆ.ವೈ.ನಂಜೇಗೌಡ ಸಲಹೆ ನೀಡಿದರು.

ಜಿ.ಪಂ ಉಪಾಧ್ಯಕ್ಷೆ ಯಶೋದಾ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ವಿ.ದರ್ಶನ್, ಉಪ ಕಾರ್ಯದರ್ಶಿ ಸಂಜೀವಪ್ಪ ಹಾಜರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು