ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೃಶ್ಯ ಮಾಧ್ಯಮದಿಂದ ಮನೋವಿಕಾಸ ಹಾಳು: ರಂಗ ನಿರ್ದೇಶಕ ರಾಮಕೃಷ್ಣ ಬೆಳ್ತೂರು ಕಳವಳ

Last Updated 12 ಡಿಸೆಂಬರ್ 2019, 15:30 IST
ಅಕ್ಷರ ಗಾತ್ರ

ಕೋಲಾರ: ‘ದೇಶದಲ್ಲಿ ದೃಶ್ಯ ಮಾಧ್ಯಮವು ಮನೋವಿಕಾಸ ಹಾಳು ಮಾಡುತ್ತಿವೆ’ ಎಂದು ರಂಗ ನಿರ್ದೇಶಕ ರಾಮಕೃಷ್ಣ ಬೆಳ್ತೂರು ಕಳವಳ ವ್ಯಕ್ತಪಡಿಸಿದರು.

ಆದಿಮ ಸಾಂಸ್ಕೃತಿಕ ಕೇಂದ್ರವು ಹುಣ್ಣಿಮೆ ಹಾಡು ಅಂಗವಾಗಿ ಇಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಕ್ಕಳ ನಾಟಕೋತ್ಸವ ಹಾಗೂ ‘ಮಕ್ಕಳ ಬೆಳವಣಿಗೆ– ದೃಶ್ಯ ಮಾಧ್ಯಮದ ಪ್ರಭಾವ’ ಕುರಿತ ಸಂವಾದ ಉದ್ಘಾಟಿಸಿ ಮಾತನಾಡಿ, ‘ದೃಶ್ಯ ಮಾಧ್ಯಮವು ಯುವಕ ಯುವತಿಯರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ವಾಹಿನಿಗಳು ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿದ್ದರೂ ಪೋಷಕರು ಎಚ್ಚೆತ್ತುಕೊಳ್ಳುತ್ತಿಲ್ಲ’ ಎಂದು ವಿಷಾದಿಸಿದರು.

‘ಈ ಹಿಂದೆ ಕತೆಗಳ ಮತ್ತು ಕಲ್ಪನೆಯ ವಿಕಾಸದ ಜತೆಗೆ ಮನುಷ್ಯ ಬೆಳೆವಣಿಗೆ ಕಾಣುತ್ತಿದ್ದ. ಪ್ರಸ್ತುತ ದೃಶ್ಯ ಮಾಧ್ಯಮವು ಕಲ್ಪನೆಯ ಜಗತ್ತನ್ನು ಮೂಲೆಗುಂಪು ಮಾಡಿದ್ದು, ಮನುಷ್ಯನ ಆಲೋಚನೆಗಳನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಮಕ್ಕಳ ಅನುಭವದ ಮೇಲೆ ನೇರ ಪರಿಣಾಮ ಬೀರುತ್ತಿದೆ’ ಎಂದರು.

‘ಬೋಧಕರು ಹಿಂದೆ ಧರ್ಮದ ಹೆಸರಿನಲ್ಲಿ ಭಕ್ತಿಯ ಕತೆಗಳನ್ನು ಬಿತ್ತುವ ಕೆಲಸ ಮಾಡುತ್ತಿದ್ದರು. ಒಳ್ಳೆಯ ಭಾವನೆ ಬೆಸೆಯುತ್ತಿದ್ದರು. ಕತೆಗಳ ಮೂಲಕ ನಂಬಿಕೆ ಗಳಿಸುವ ಪ್ರಯತ್ನ ನಡೆಯುತ್ತಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಮಧ್ಯಮಗಳು ಪ್ರೇರಣ, ಪೇರಕ ಶಕ್ತಿಗಳಾಗಿ ಮೋದಿ, ಗೂಡ್ಸೆ, ಸಾವರ್ಕರ್ ಅಂತಹವರ ಕತೆಗಳನ್ನು ಕತೆಯಲ್ಲಿ ತುಂಬುವ ಕೆಲಸ ಮಾಡುತ್ತಿವೆ’ ಎಂದು ಕಿಡಿಕಾರಿದರು.

‘ಮಾಧ್ಯಮವು ಬಂಡವಾಳಶಾಹಿಗಳ ಕಪಿಮುಷ್ಠಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಬೆಳೆದಿರುವ ಬೇರುಗಳಿಗೆ ವಿಷ ಹಾಕುವ ಪ್ರಯತ್ನದಲ್ಲಿದೆ. ಮಾನಸಿಕ ದೌರ್ಬಲ್ಯಕ್ಕೆ ಪ್ರೇರಣೆ ನೀಡಿ, ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ವಿಚಾರ ಬಿತ್ತರಿಸಿ ಕೊಂಡುಕೊಳ್ಳಬೇಕೆಂಬ ಸಿದ್ಧಾಂತರ ಮೇರೆಗೆ ಉತ್ಪಾದನೆ ಶಕ್ತಿಗಳಿಗೆ ಕಿರುಕುಳ ನೀಡುತ್ತಿವೆ’ ಎಂದು ಆರೋಪಿಸಿದರು.

‘ಪ್ರಸ್ತುತ ಸನ್ನಿವೇಶದಲ್ಲಿ ಮಕ್ಕಳಿಂದಲೇ ರಾಜಕೀಯ ಪ್ರಜ್ಞೆ ಮೂಡಿಸಿ ಮುಂದೆ ನಮ್ಮನಾಳುವ ನಾಯಕರನ್ನು ಆಯ್ಕೆ ಮಾಡಿಕೊಳ್ಳುವ ಪರಿಸರ ಸೃಷ್ಟಿಸುವ ಅವಶ್ಯಕತೆಯಿದೆ. ವಿದ್ಯಾರ್ಥಿಗಳು ಹೊಸ ಪ್ರಯೋಗಕ್ಕೆ ತೊಡಗಿಸಿಕೊಳ್ಳಬೇಕು. ಮಕ್ಕಳನ್ನು ಮೊಬೈಲ್‌ ಬಳಕೆಯಿಂದ ದೂರ ಮಾಡಬೇಕು’ ಎಂದು ಸಲಹೆ ನೀಡಿದರು.

ರಚನಾತ್ಮಕ ಶಿಕ್ಷಣ: ‘ಮಕ್ಕಳನ್ನು ರಚನಾತ್ಮಕ ಶಿಕ್ಷಣಕ್ಕೆ ಹೆಚ್ಚು ಪ್ರೋತ್ಸಾಹ ನೀಡಬೇಕು. ಪೋಷಕರು ಹಾಗೂ ಶಿಕ್ಷಕರು ಮುಂದಿನ ತಲೆಮಾರಿಗೆ ಅಗತ್ಯವಾದ ವಿಚಾರಗಳನ್ನು ಬಿತ್ತುವ ಕೆಲಸ ಮಾಡಬೇಕು’ ಎಂದು ರಂಗ ಶಿಕ್ಷಕ ಎಂ.ಎಲ್.ಮಧುಕರ ಹೇಳಿದರು.

‘ಪಠ್ಯದ ಆಚೆಗೆ ಮಕ್ಕಳನ್ನು ಗುರುತಿಸದೆ ಹೋದರೆ ಮುಂದೆ ಜೀವನ ರೂಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಶಿಕ್ಷಣ ಮತ್ತು ಪಠ್ಯಪುಸ್ತಕಗಳು ಬದಲಾಗಿ ಉತ್ತಮ ಸಾಮಾಜ ನಿರ್ಮಾಣದಂತಹ ಮಾದರಿ ಪಠ್ಯಕ್ರಮ ರಚನೆಯಾಗಬೇಕು’ ಎಂದು ಸಲಹೆ ನೀಡಿದರು.

‘ಪಠ್ಯ ವಿಷಯಗಳು ವ್ಯಕ್ತಿಯ ವ್ಯಕ್ತಿತ್ವ ರೂಪಿಸುವಲ್ಲಿ ವಿಫಲವಾಗಿವೆ. ನಿಸರ್ಗದಲ್ಲಿ ಹಂಚಿಕೊಳ್ಳುವುದನ್ನು ಬಿಟ್ಟು ವಂಚಿಸುವವರ ಸಂಖ್ಯೆಯೇ ಹೆಚ್ಚಳವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನಿಸರ್ಗದ ಜತೆ ಬದುಕು ಕಟ್ಟಿಕೊಳ್ಳುವ ಪಠ್ಯಕ್ರಮ ರೂಪುಗೊಳ್ಳಬೇಕು’ ಎಂದು ಆದಿಮ ಸಾಂಸ್ಕೃತಿಕ ಕೇಂದ್ರದ ಖಜಾಂಚಿ ಹ.ಮಾ.ರಾಮಚಂದ್ರ ಪ್ರತಿಪಾದಿಸಿದರು.

‘ಹೆಡ್ಡಾಯಣ’, ‘ಧರ್ಮ ಸಮದೃಷ್ಠಿ’ ಹಾಗೂ ‘ಭರತ ಬಾಹುಬಲಿ ಕಾಳಗ’ ನಾಟಕಗಳು ಪ್ರದರ್ಶನಗೊಂಡವು. ರಂಗ ಶಿಕ್ಷಕ ಭಾನುಪ್ರಕಾಶ್‌, ಬೆಂಗಳೂರಿನ ಐಎಫ್‌ಎ ಸಂಸ್ಥೆ ಸಂಯೋಜಕ ಟಿ.ಎನ್.ಕೃಷ್ಣಮೂರ್ತಿ, ಶಿಕ್ಷಕ ವಿಶ್ವನಾಥ್‌ ನಾಯಕ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT