ಶನಿವಾರ, ಏಪ್ರಿಲ್ 17, 2021
32 °C
₹ 5.60 ಕೋಟಿ ಕ್ರಿಯಾಯೋಜನೆ ಸಿದ್ಧ: ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಕೆ

ಜಿಲ್ಲೆಯ 24 ಕೆರೆ ಜೀರ್ಣೋದ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಬರ ನಿರ್ವಹಣೆಗಾಗಿ ಜಲಾಮೃತ ಯೋಜನೆಯಡಿ ಜಿಲ್ಲೆಯ 24 ಕೆರೆಗಳ ಜೀರ್ಣೋದ್ಧಾರಕ್ಕೆ ₹ 5.60 ಕೋಟಿ ಅಂದಾಜು ವೆಚ್ಚದ ಕ್ರಿಯಾಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಜಗದೀಶ್ ತಿಳಿಸಿದರು.

ಇಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಜಲಾಮೃತ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಸಾರ್ವಜನಿಕರ ಹಾಗೂ ಸಂಘ ಸಂಸ್ಥೆಗಳ ಸಹಕಾರ ಅಗತ್ಯ’ ಎಂದು ಮನವಿ ಮಾಡಿದರು.

‘ಜಿಲ್ಲೆಯ ಜಲ ಮೂಲಗಳಾದ ಕೆರೆ, ಕುಂಟೆ, ರಾಜಕಾಲುವೆಗಳು ತಮ್ಮ ಸ್ವರೂಪ ಕಳೆದುಕೊಂಡಿವೆ. ವಾಡಿಕೆ ಮಳೆಯಾಗುತ್ತಿದ್ದರೂ ನೀರು ಶೇಖರಿಸಿಕೊಳ್ಳಲಾಗುತ್ತಿಲ್ಲ. ಕೆರೆಗಳ ಅಭಿವೃದ್ಧಿ ಕಾರ್ಯ ಕೈಗೊಂಡು ನೀರು ಇಂಗಿಸಿ ಅಂತರ್ಜಲ ಮಟ್ಟ ಹೆಚ್ಚಿಸುವ ದಿಸೆಯಲ್ಲಿ ಜಲಾಮೃತ ಯೋಜನೆ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ’ ಎಂದು ಹೇಳಿದರು.

‘ಜಲಾಮೃತ ಯೋಜನೆಯಡಿ ಜಲ ಸಂರಕ್ಷಣೆ, ಜಲ ಸಾಕ್ಷರತೆ, ಜಲ ಮೂಲಗಳ ಪುನಶ್ಚೇತನ ಮತ್ತು ಹಸರೀಕರಣ ಕೇಂದ್ರವಾಗಿಟ್ಟುಕೊಂಡು 2 ಸಾವಿರ ಜಲ ಸಂರಕ್ಷಣೆ ಕಾಮಗಾರಿ ಜಾರಿಗೊಳಿಸುವ ಗುರಿಯಿದೆ’ ಎಂದು ವಿವರಿಸಿದರು.

‘ಜಿಲ್ಲೆಯ 6 ವಿಧಾನಸಭಾ ಕ್ಷೇತ್ರದಲ್ಲಿ ತಲಾ 4 ಕೆರೆಗಳಂತೆ ಒಟ್ಟು 24 ಕೆರೆ ಅಭಿವೃದ್ಧಿಗೊಳಿಸಲು ಉದ್ದೇಶಿಸಲಾಗಿದೆ. ಇದರಲ್ಲಿ 2 ವಿಭಾಗ ಮಾಡಿದ್ದು, ಮರಳು, ಇಟ್ಟಿಗೆ ಕಾರ್ಖಾನೆಗಳಿಗೆ ಮಣ್ಣು ಅಗೆದು ಆಳ ಮಾಡಿರುವ 12 ಕೆರೆಗಳನ್ನು ಸಮತಟ್ಟುಗೊಳಿಸಿ ಅದರ ಮೇಲೆ ಜೇಡಿ ಮಣ್ಣು ಹಾಕಿ ನೀರು ಇಂಗುವಂತೆ ಮಾಡುವುದು. ಜತೆಗೆ ತೂಬು ಮತ್ತು ಕಾಲುವೆ ದುರಸ್ತಿ ಕೆಲಸ ಕೈಗೆತ್ತಿಕೊಳ್ಳಲಾಗುವುದು. ಉಳಿದ 12 ಕೆರೆಗಳಲ್ಲಿ ಹೂಳು ತೆಗೆದು ಕಾಲುವೆ ದುರಸ್ತಿ ಮಾಡಲಾಗುತ್ತದೆ’ ಎಂದು ವಿವರಿಸಿದರು.

ಶಾಶ್ವತ ಪರಿಹಾರ: ಈ ಅಭಿಯಾನದಡಿ ಕೃಷಿ ಇಲಾಖೆಯಿಂದ ರೈತರ ಜಮೀನುಗಳಲ್ಲಿ ಬದು ನಿರ್ಮಾಣದ 410 ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ. ಎಲ್ಲಾ ಶಾಲಾ ಕಾಲೇಜುಗಳಲ್ಲಿ ಪ್ರತಿನಿತ್ಯ ಕನಿಷ್ಠ 10 ನಿಮಿಷ ಜಲ ಸಂರಕ್ಷಣೆ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ಸೂಚಿಸಲಾಗಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಕಾರದಿಂದ ಜಲ ಸಂರಕ್ಷಣೆ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳಲಾಗುವುದು’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ಕೊಳವೆ ಬಾವಿ ಕೊರೆಸುತ್ತಿದ್ದರೂ ನೀರಿನ ಲಭ್ಯತೆ ಖಚಿತವಿಲ್ಲ. ಹೀಗಾಗಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಕೆರೆ, ಕಲ್ಯಾಣಿ, ಪುಷ್ಕರಣಿ, ಕುಂಟೆ, ಕಟ್ಟೆ, ಗೋಕಟ್ಟೆಗಳ ಪುನಶ್ಚೇತನ ಚಟುವಟಿಕೆ ನಡೆಸಲಾಗುವುದು’ ಎಂದು ಮಾಹಿತಿ ನೀಡಿದರು.

ಯಾವ ಕೆರೆಗೆ ಎಷ್ಟು ಹಣ: ‘ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ರೋಣೂರು ದೊಡ್ಡಪಲ್ಲಿ ಕೆರೆ ಪುನಶ್ಚೇತನಕ್ಕೆ ₹ 22 ಲಕ್ಷ, ಕೋಡಿಪಲ್ಲಿ ಕೆರೆಗೆ ₹ 17 ಲಕ್ಷ, ಮುದಿಮಡುಗು ಗ್ರಾ.ಪಂ ವ್ಯಾಪ್ತಿಯ ಚನ್ನಯ್ಯನ ಕೆರೆಗೆ ₹ 18 ಲಕ್ಷ ಹಾಗೂ ಸೋಮಯಾಜಲಹಳ್ಳಿಯ ವಲಕಲ ಕೆರೆ ಪುನಶ್ಚೇತನಕ್ಕೆ ₹ 15 ಲಕ್ಷ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಅದೇ ರೀತಿ ಕೋಲಾರ ತಾಲ್ಲೂಕಿನ ಕುರಗಲ್ ಚಿಕ್ಕಕೆರೆಗೆ ₹ 17 ಲಕ್ಷ, ಮಾಧವ ಗುರ್ಜೇನಹಳ್ಳಿ ಕೆರೆಗೆ ₹ 50 ಲಕ್ಷ, ಮಟ್ನಹಳ್ಳಿ ಕೆರೆಗೆ ₹ 45 ಲಕ್ಷ, ಕೆಂದಟ್ಟಿ ಕೆರೆಗೆ ₹ 36 ಲಕ್ಷ ವೆಚ್ಚ ಮಾಡಲು ಉದ್ದೇಶಿಸಲಾಗಿದೆ’ ಎಂದರು.

‘ಬಂಗಾರಪೇಟೆ ತಾಲ್ಲೂಕಿನ ಗುಲ್ಲಹಳ್ಳಿ ಗ್ರಾ.ಪಂ ವ್ಯಾಪ್ತಿಯ ಗೊಡಗಮಂದೆ ಕೆರೆಗೆ ₹ 25 ಲಕ್ಷ, ಹುಲಿಬೆಲೆಯ ಜಂಬು ಕೆರೆಗೆ ₹ 22 ಲಕ್ಷ, ಮಾವಹಳ್ಳಿಯ ಕಾಮಾರಂಡಹಳ್ಳಿ ಕೆರೆಗೆ ₹ 38 ಲಕ್ಷ, ಸೂಲಿಕುಂಟೆಯ ನಕ್ಕಲ ಕೆರೆಗೆ ₹ 15 ಲಕ್ಷ, ಕೆಜಿಎಫ್ ತಾಲ್ಲೂಕಿನ ವಡ್ಡಹಳ್ಳಿ ಕೆರೆಗೆ ₹ 20 ಲಕ್ಷ, ಮಾರಿಕುಪ್ಪಂನ ಮಂಡಮೊಪಲು ಕೆರೆಗೆ ₹ 13 ಲಕ್ಷ, ಎನ್.ಜಿ.ಹುಲ್ಕೂರು ವೆಂಕಟಾಪುರ ಕೆರೆಗೆ ₹ 12 ಲಕ್ಷ, ಸುಂದರಪಾಳ್ಯದ ಚಿತ್ತಲಕುಂಟೆ ಕೆರೆಗೆ ₹ 18 ಲಕ್ಷ ವೆಚ್ಚವಾಗಲಿದೆ’ ಎಂದು ವಿವರಿಸಿದರು.

‘ಮಾಲೂರು ತಾಲ್ಲೂಕಿನ ಸಂತೇಹಳ್ಳಿಯ ದ್ಯಾಪಸಂದ್ರ ಕೆರೆಗೆ ₹ 25 ಲಕ್ಷ, ಜಯಮಂಗಲ ಕೆರೆಗೆ ₹ 25 ಲಕ್ಷ, ರಾಜೇನಹಳ್ಳಿಯ ಮಾತಂಗಪುರ ಕೆರೆಗೆ ₹ 25 ಲಕ್ಷ, ಎಚ್.ಹೊಸಕೋಟೆಯ ಸೀತನಾಯಕನಹಳ್ಳಿ ಕೆರೆಗೆ ₹ 35 ಲಕ್ಷ, ಮುಳಬಾಗಿಲು ತಾಲ್ಲೂಕಿನ ಬೈರಕೂರು ಕಾಡೇನಹಳ್ಳಿ ಕೆರೆಗೆ ₹ 5 ಲಕ್ಷ, ಪಿಚ್ಚಗುಂಟ್ಲಹಳ್ಳಿಯ ಗಂಗಾಪುರ ಕೆರೆಗೆ ₹ 15ಲಕ್ಷ, ಆಲಂಗೂರು ಕೆರೆಗೆ ₹ 25 ಲಕ್ಷ, ಅಂಬ್ಲಿಕಲ್‌ನ ಸಿದ್ದನಹಳ್ಳಿ ಕೆರೆಗೆ ₹ 22 ಲಕ್ಷ ವೆಚ್ಚದಲ್ಲಿ ಪುನಶ್ಚೇತನ ಮಾಡಲು ಉದ್ದೇಶಿಸಲಾಗಿದೆ’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.