ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ವಾಸಿಗಳಿಗೆ ಕೋಲಾರ ಜಿಲ್ಲೆಯ ತರಕಾರಿ

ರೈತರಿಗೆ ನಷ್ಟ ತಪ್ಪಿಸಲು ತೋಟಗಾರಿಕೆ ಇಲಾಖೆ ಕ್ರಮ
Last Updated 19 ಏಪ್ರಿಲ್ 2020, 19:33 IST
ಅಕ್ಷರ ಗಾತ್ರ

ಕೋಲಾರ: ಕೊರೊನಾ ಸೋಂಕಿನ ಕಾರಣಕ್ಕೆ ಜಾರಿಯಾಗಿರುವ ದಿಗ್ಬಂಧನದಿಂದ (ಲಾಕ್‌ಡೌನ್‌) ಜಿಲ್ಲೆಯ ರೈತರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ಮುಂದಾಗಿರುವ ತೋಟಗಾರಿಕಾ ಇಲಾಖೆಯು ರೈತರು ಬೆಳೆದ ಬೆಳೆಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವ ಕಾರ್ಯ ಆರಂಭಿಸಿದೆ.

ಲಾಕ್‌ಡೌನ್‌ನಿಂದಾಗಿ ಸರಕು ಸಾಗಣೆ ವಾಹನಗಳ ಸೇವೆಯಲ್ಲಿ ವ್ಯತ್ಯಯವಾಗಿದೆ. ಇದರಿಂದ ಜಿಲ್ಲೆಯ ರೈತರ ತರಕಾರಿಗಳು ಹೊರ ರಾಜ್ಯ ಮತ್ತು ಜಿಲ್ಲೆಗಳಿಗೆ ಪೂರೈಕೆಯಾಗುತ್ತಿಲ್ಲ. ಹೀಗಾಗಿ ಸ್ಥಳೀಯ ಮಾರುಕಟ್ಟೆಯಲ್ಲಿ ಬಹುಪಾಲು ತರಕಾರಿಗಳ ಬೆಲೆ ಗಣನೀಯವಾಗಿ ಕುಸಿದಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಬೆಲೆ ಕುಸಿತದ ಕಾರಣಕ್ಕೆ ಹಲವು ರೈತರು ಜಮೀನುಗಳಲ್ಲೇ ಬೆಳೆ ನಾಶಪಡಿಸುತ್ತಿದ್ದಾರೆ. ಮತ್ತೆ ಕೆಲ ರೈತರು ಬೆಳೆ ಕೊಯ್ಲು ಮಾಡುವುದನ್ನೇ ನಿಲ್ಲಿಸಿದ್ದಾರೆ. ಮಾರುಕಟ್ಟೆ ಬರುವ ರೈತರು ಸೂಕ್ತ ಬೆಲೆ ಸಿಗದೆ ರಸ್ತೆಗೆ ತರಕಾರಿ ಸುರಿದು ಹೋಗುತ್ತಿದ್ದಾರೆ. ಬೆಲೆ ಕುಸಿತ ಮತ್ತು ಸರಕು ಸಾಗಣೆ ಸೇವೆಯಲ್ಲಿನ ವ್ಯತ್ಯಯದಿಂದ ರೈತರಿಗೆ ಆಗುತ್ತಿರುವ ನಷ್ಟ ತಪ್ಪಿಸಲು ತೋಟಗಾರಿಕೆ ಇಲಾಖೆಯು ಕೃಷಿ ಉತ್ಪನ್ನ ಸಹಕಾರ ಸಂಘಗಳ ನೆರವು ಪಡೆದು ಗ್ರಾಹಕರಿಗೆ ನೇರವಾಗಿ ತರಕಾರಿ ತಲುಪಿಸಲು ಕ್ರಮ ಕೈಗೊಂಡಿದೆ.

ಮೊದಲ ಹಂತದಲ್ಲಿ ಮಾಲೂರು ಹಾಗೂ ಶ್ರೀನಿವಾಸಪುರ ತಾಲ್ಲೂಕಿನ ಕೆಲ ಕೃಷಿ ಉತ್ಪನ್ನ ಸಹಕಾರ ಸಂಘಗಳನ್ನು ಬೆಂಗಳೂರಿನ ಅಪಾರ್ಟ್‌ಮೆಂಟ್‌ಗಳಿಗೆ ಸಂಪರ್ಕಿಸಿದೆ. ಈ ಸಂಘಗಳ ಸಹಕಾರದಿಂದ ರೈತರೇ ನೇರವಾಗಿ ಅಪಾರ್ಟ್‌ಮೆಂಟ್‌ಗಳಿಗೆ ಹೋಗಿ ಗ್ರಾಹಕರಿಗೆ ತರಕಾರಿ ಮಾರಾಟ ಮಾಡುತ್ತಿದ್ದಾರೆ.

ಇದರಿಂದ ರೈತರ ತರಕಾರಿಗಳಿಗೆ ಉತ್ತಮ ಬೆಲೆ ದೊರೆಯುತ್ತಿದ್ದು, ಗ್ರಾಹಕರಿಗೂ ತಾಜಾ ತರಕಾರಿ ಸಿಗುತ್ತಿವೆ. ಸದ್ಯ ಮಾಲೂರು ತಾಲ್ಲೂಕಿನ ರೈತರು ಬೆಂಗಳೂರಿನ ಎಚ್‌ಬಿಆರ್‌ ಲೇಔಟ್‌ನಲ್ಲಿರುವ ಅನು ಅಪಾರ್ಟ್‌ಮೆಂಟ್‌ನ 150 ಕುಟುಂಬಗಳಿಗೆ ತರಕಾರಿ ಮಾರಾಟ ಮಾಡುತ್ತಿದ್ದಾರೆ.

ಮಾರ್ಗಸೂಚಿ ಪಾಲನೆ: ಕೊರೊನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಸರ್ಕಾರ ರೂಪಿಸಿರುವ ಸುರಕ್ಷತಾ ಮಾರ್ಗಸೂಚಿಯನ್ನು ರೈತರು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ. ಅಪಾರ್ಟ್‌ಮೆಂಟ್‌ಗಳ ಬಳಿ ಒಂದು ಮಳಿಗೆಯಿಂದ ಮತ್ತೊಂದು ಮಳಿಗೆಗೆ ಅಂತರ ಕಾಯ್ದುಕೊಂಡು ಮುಖಗವಸು ಮತ್ತು ಕೈವಸು ಧರಿಸಿ ತರಕಾರಿ ವಹಿವಾಟು ನಡೆಸುತ್ತಿದ್ದಾರೆ.

ಹಳ್ಳಿಗಳಲ್ಲಿ ಬೆಳೆದಿರುವ ತಾಜಾ ತರಕಾರಿ ಮಾರುಕಟ್ಟೆ ದರಕ್ಕಿಂತಲೂ ಮನೆ ಬಾಗಿಲಲ್ಲೇ ಅತ್ಯಂತ ಕಡಿಮೆ ಬೆಲೆಗೆ ದೊರೆಯುತ್ತಿರುವುದರಿಂದ ಅಪಾರ್ಟ್‌ಮೆಂಟ್‌ ನಿವಾಸಿಗಳು ಖುಷಿಯಾಗಿದ್ದಾರೆ. ಜತೆಗೆ ರೈತರು ಸುರಕ್ಷತಾ ಮಾರ್ಗಸೂಚಿ ಪಾಲಿಸುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

*
ಲಾಕ್‌ಡೌನ್‌ನಿಂದ ರೈತರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ಬೆಂಗಳೂರಿನ ಕೆಲ ಅಪಾರ್ಟ್‌ಮೆಂಟ್‌ಗಳ ಬಳಿ ತರಕಾರಿ ವಹಿವಾಟಿಗೆ ಅವಕಾಶ ಕಲ್ಪಿಸಿದ್ದೇವೆ. ಅಪಾರ್ಟ್‌ಮೆಂಟ್‌ ನಿವಾಸಿಗಳು ರೈತರಿಂದ ನೇರವಾಗಿ ತರಕಾರಿ ಖರೀದಿಸುತ್ತಿದ್ದಾರೆ.
–ಗಾಯತ್ರಿ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT